ಬೆಂಗಳೂರಿನ ಟ್ರಾಫಿಕ್ ಗೆ ಗುಡ್ ಬೈ – 90 ನಿಮಿಷದ ಬದಲು 7 ನಿಮಿಷಗಳಲ್ಲಿ ಹಾರಿ ಹೋಗಿ! – ಏನಿದು ಏರ್ ಟ್ಯಾಕ್ಸಿ? ಹೇಗಿರುತ್ತೆ ಪ್ರಯಾಣ?
ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿ ಬಳಲಿ ಬೆಂಡಾದವರಿಗೆ ಈಗೊಂದು ಹೊಸ ಸುದ್ದಿ ಬಂದಿದೆ. ಇನ್ನು ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಹಾರಿ ಹೋಗಬಹುದು. ಆದ್ರೆ ವಿಮಾನ, ಹೆಲಿಕಾಪ್ಟರ್ ನಲ್ಲಿ ಅಲ್ಲ. ಬದಲಿಗೆ ಹಾರಾಡುವ ಟ್ಯಾಕ್ಸಿಯಲ್ಲಿ. ವಿದೇಶಗಳಲ್ಲಿ ಈಗಾಗಲೇ ಹಾರಾಡುವ ಕಾರು, ಏರ್ ಟ್ಯಾಕ್ಸಿಯಂತಹ ಪ್ರಯೋಗಗಳು ಯಶಸ್ವಿಯಾಗಿ ನಡೆದಿದೆ. ಆದರೆ, ಭಾರತೀಯರು ಆ ಪ್ರಯಾಣದ ಅನುಭವ ಮಾಡೋಕೆ ವಿದೇಶಕ್ಕೆ ಹೋಗ್ಬೇಕಿಲ್ಲ. ನಮ್ಮ ಬೆಂಗಳೂರಿಗೆ ಬಂದ್ರೆ ಸಾಕು.
ಹೌದು, ಸುಗಮ ಸಾರಿಗೆಯ ವ್ಯವಸ್ಥೆ ಈಗ ರಸ್ತೆಯಿಂದ ಆಕಾಶಕ್ಕೆ ಕೊಂಡೊಯ್ಯುತ್ತಿದೆ. ಎಲೆಕ್ಟ್ರಿಕ್ ವರ್ಟಿಕಲ್ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ (Electric vertical takeoff and landing) (EVTOL) ವಿಮಾನಗಳನ್ನು ಸಾಮಾನ್ಯವಾಗಿ ಆಲ್-ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳು ಎಂದು ಕರೆಯಲಾಗುತ್ತದೆ. ಇದು ಈಗ ಬೆಂಗಳೂರಿಗೂ ಕಾಲಿಎಉವ ದಿನ ದೂರವಿಲ್ಲ.
ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಬೆಂಬಲಿತ ಇಂಟರ್‌ಗ್ಲೋಬ್ ಎಂಟರ್‌ಪ್ರೈಸಸ್, 2026 ರ ವೇಳೆಗೆ ಭಾರತದಲ್ಲಿ ಆಲ್-ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆಯನ್ನು ಪರಿಚಯಿಸಲು ಅಮೆರಿಕ ಮೂಲದ ಆರ್ಚರ್ ಏವಿಯೇಷನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ..
ಇದನ್ನೂ ಓದಿ: ನಮ್ಮ ಮೆಟ್ರೋ ಹಳಿಯೇರಲು ಚೀನಾ ರೈಲು ಸಿದ್ಧ ! – ಭಾರತಕ್ಕೆ ರೈಲುಗಳ ರವಾನೆ ಯಾವಾಗ?
ಒಂದೂವರೆ ಗಂಟೆ ಪ್ರಯಾಣ ಕೇವಲ 7 ನಿಮಿಷಕ್ಕೆ ಇಳಿಕೆ!
ಈ ಏರ್ ಟ್ಯಾಕ್ಸಿಯಲ್ಲಿ 4 ಪ್ರಯಾಣಿಕರು ಮತ್ತು ಒಬ್ಬ ಪೈಲಟ್ 100 ಮೈಲುಗಳ ವೇಗದಲ್ಲಿ ಈ ಏರ್ ಟ್ಯಾಕ್ಸಿ ಕ್ರಮಿಸಬಲ್ಲದು. ಈ ಸೇವೆಯು ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ 200 ಲಘು ವಿಮಾನ ಮಾದರಿಯ ಟ್ಯಾಕ್ಸಿಗಳೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಉದ್ದೇಶಿಸಿದ್ದು, ಇದು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿತಗೊಳಿಸುತ್ತದೆ. ಉದಾಹರಣೆಗೆ, 60 ರಿಂದ 90 ನಿಮಿಷಗಳ ಕಾಲ ಕಾರಿನಲ್ಲಿ ಪ್ರಯಾಣಿಸುವ ಬದಲು ಏರ್ ಟ್ಯಾಕ್ಸಿ ಮೂಲಕ ಕೇವಲ 7 ನಿಮಿಷಕ್ಕೆ ಪ್ರಯಾಣ ಮಾಡ್ಬಹುದು.
ಇತ್ತೀಚಿನ ವರ್ಷಗಳಲ್ಲಿ, ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ, ಏರ್ ಟ್ಯಾಕ್ಸಿಗಳಲ್ಲಿ ಆಸಕ್ತಿ ಮತ್ತು ಹೂಡಿಕೆಹೆಚ್ಚಾಗುತ್ತಿದೆ. ಮಾಲಿನ್ಯ ತಡೆಯುವ ನಿಟ್ಟಿನಲ್ಲೂ ಈ ಹೊಸ ಬಗೆಯ ವಾಹನಗಳು ಪ್ರಮುಖ ಪಾತ್ರವಹಿಸಿವೆ. ಎಲ್ಲವೂ ಅಂದುಕೊಂಡಂತೆ ಸಾಗಿದ್ರೆ 2026ರ ವೇಳೆಗೆ ಭಾರತದ ಪ್ರಮುಖ ನಗರಗಳಲ್ಲಿ ಏರ್ ಟ್ಯಾಕ್ಸಿ ಕಾರ್ಯಾಚರಣೆ ಆರಂಭವಾಗಲಿದೆ.