ಮದ್ಯ ಚಟ ಬಿಡಲು ಕರೆಂಟ್ ಶಾಕ್! – ಏನಿದು ಹೊಸ ಟ್ರೀಟ್ ಮೆಂಟ್? ಕುಡಿತ ಬಿಡ್ತಾರಾ?

ಮದ್ಯ ಚಟ ಬಿಡಲು ಕರೆಂಟ್ ಶಾಕ್! – ಏನಿದು ಹೊಸ ಟ್ರೀಟ್ ಮೆಂಟ್? ಕುಡಿತ ಬಿಡ್ತಾರಾ?

ಮದ್ಯಪಾನ ಚಟವಾದ್ರೆ ಅದನ್ನು ಬಿಡೋದು ಬಹಳ ಕಷ್ಟ. ಆಲ್ಕೋಹಾಲ್ ದೇಹವನ್ನು ಮಾತ್ರವಲ್ಲ ಕುಟುಂಬವನ್ನೇ ಹಾಳು ಮಾಡುತ್ತೆ. ಅನೇಕ ಸಂಸಾರ ಬೀದಿಗೆ ಬಂದಿದೆ. ಈಗಿನ ದಿನಗಳಲ್ಲಿ ಯುವಕರಲ್ಲಿ ಮದ್ಯಪಾನ ಹೆಚ್ಚಾಗ್ತಿದೆ. ಮದ್ಯದ ಅಮಲಿನಲ್ಲಿ ಮುಳುಗಿ ಏಳುವವರಿಗೆ ಅದರಿಂದ ಹೊರ ಬರೋದಿಕ್ಕೆ ಒಂದು ಒಳ್ಳೆಯ ಚಿಕಿತ್ಸೆಯಿದೆ..

ಆಲೋಹಾಲ್ ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ಗೊತ್ತಿದ್ದರೂ ಚಟದ ದಾಸರಾದವರಿಗೇನೂ ಕಮ್ಮಿಯಿಲ್ಲ.. ಇದಕ್ಕಾಗಿ ಮದ್ಯವ್ಯಸನಿಗಳನ್ನು ಚಟಮುಕ್ತ ಮಾಡಲು ಅನೇಕ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.. ಇದರ ನಡುವೆ ಉತ್ತರ ಪ್ರದೇಶದ ರಾಜಧಾನಿ ಲಕ್ಕೋದ ವೈದ್ಯರೊಬ್ಬರು ಮದ್ಯ ವ್ಯಸನಿಗಳನ್ನು ವ್ಯಸನಮುಕ್ತ ಮಾಡಲು ಹೊಸ ದಾರಿ ಹುಡುಕಿ ಗಮನ ಸೆಳೆದಿದ್ದಾರೆ. ಕುಡಿತದ ಚಟದಿಂದ ಮುಕ್ತಿ ಹೊಂದಲು ಬಯಸುವವರಿಗೆ ಅವರು ನೀಡ್ತಿರುವ ಚಿಕಿತ್ಸೆ ಅಚ್ಚರಿ ಹುಟ್ಟಿಸಿದೆ.

ಇದನ್ನೂ ಓದಿ: ಅರುಣ್ ಕುಮಾರ್ ಪುತ್ತಿಲ ಬೇಡಿಕೆಗೆ ಬಿಜೆಪಿ ನಾಯಕರಿಂದ ಅಸ್ತು – ಪುತ್ತಿಲ ಬಿಜೆಪಿಗೆ ಬರೋದು ಫಿಕ್ಸ್

ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ಡಾ.ಅಮಿತ್ ಆರ್ಯ ಈ ಚಿಕಿತ್ಸೆ ಆರಂಭಿಸಿದ್ದಾರೆ.  ಮನುಷ್ಯನ ಮಿದುಳು ವಿದ್ಯುತ್ ಸಂಕೇತಗಳನ್ನು ರವಾನಿಸುತ್ತದೆ. ಈ ಸಿಗ್ನಲ್ ನಲ್ಲಿ ಏನಾದರೂ ತೊಂದರೆಯಾದರೆ, ಆ ವ್ಯಕ್ತಿ ಯಾವುದಾದ್ರೂ ಒಂದು ಚಟಕ್ಕೆ ಬಿದ್ದು ಒತ್ತಡಕ್ಕೆ ಒಳಗಾಗುತ್ತಾರೆ. ಮೆದುಳಿನ ಕೆಲವು ಭಾಗಗಳಿಗೆ ವಿದ್ಯುತ್ ಪ್ರವಾಹ ಹರಿಸಿ ಈ ಅನವಶ್ಯಕ ವಿದ್ಯುತ್ ಸಂಕೇತಗಳನ್ನು ತಡೆದು ಅವುಗಳನ್ನು ಹಿಂದಿನ ಸ್ಥಿತಿಗೆ ತರಲಾಗುತ್ತದೆ. ಇದರಿಂದಾಗಿ ರೋಗಿ ಸಹಜ ಸ್ಥಿತಿಗೆ ಮರಳುತ್ತಾನೆ. ಅಲ್ಲದೆ  ಮದ್ಯದ ಚಟ ಬಿಡುತ್ತಾನೆ ಎಂದು ವೈದ್ಯರು ಹೇಳಿದ್ದಾರೆ.

ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲಿ ಈ ಚಿಕಿತ್ಸೆ ನಡೆಯುತ್ತಿದೆ. ಈವರೆಗೆ ಹದಿನೇಳು ಮಂದಿಯನ್ನು ಈ ಚಿಕಿತ್ಸೆ ಮೂಲಕ ಮದ್ಯವ್ಯಸನವನ್ನು ಬಿಡಿಸಲಾಗಿದೆ. ಇದನ್ನು ಟ್ರಾನ್ಸ್ನಿಯಲ್ ಡೈರೆಕ್ಟ್ ಕರೆಂಟ್ ಸ್ಟಿಮ್ಯುಲೇಶನ್ ಟೆಕ್ನಿಕ್ ಎಂದು ಕರೆಯಲಾಗುತ್ತಿದೆ. ಸಾಂಪ್ರದಾಯಿಕವಾಗಿ ಬಳಸಲಾಗುವ ಈ ಎಲೆಕ್ಟೋ ಥೆರಪಿಯಲ್ಲಿ, ರೋಗಿಯನ್ನು ಪ್ರಜ್ಞಾಹೀನಗೊಳಿಸಲಾಗುತ್ತದೆ, ನಂತರ ಅವನಿಗೆ ವಿದ್ಯುತ್ ಶಾಕ್ ನೀಡಲಾಗುತ್ತದೆ. ಮೊದಲು ಪ್ರಜ್ಞೆ ಇರುವಾಗ್ಲೆ ಕರೆಂಟ್ ಶಾಕ್ ನೀಡಲಾಗ್ತಾಯಿತ್ತು. ಅದನ್ನು ನಿಷೇಧಿಸಿದ ಕಾರಣ ಈಗ ಪ್ರಜ್ಞೆತಪ್ಪಿಸಿ ವಿದ್ಯುತ್ ಶಾಕ್ ನೀಡಲಾಗ್ತಾಯಿತ್ತು. ಮದ್ಯಪಾನಿಯ ಪ್ರಜ್ಞೆ ತಪ್ಪಿಸಿ ನಂತ್ರ ತಲೆಯ ಕೆಲ ಭಾಗಗಳಿಗೆ ವಿಶೇಷ ಸಾಧನವನ್ನು ಅವಳಡಿಸಿ ಶಾಕ್ ನೀಡಲಾಗುತ್ತದೆ.

ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲಿ ಈವರೆಗೆ 34 ಜನರ ಮೇಲೆ ಈ ಪ್ರಯೋಗ ನಡೆಸಲಾಗಿದೆ. ಇವರನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಮೊದಲ ಗುಂಪಿನ ರೋಗಿಗಳಿಗೆ ಕರೆಂಟ್ ನೀಡಲಾಯಿತು. ಅವರಿಗೆ ಒಂದು ವಾರದಲ್ಲಿ ಇಪ್ಪತ್ತು ನಿಮಿಷಗಳ, ಐದು ಸೆಷನ್ ನೀಡಿದ ನಂತ್ರ ವಿಶ್ಲೇಷಣೆ ಮಾಡಲಾಯ್ತು. ಮೊದಲ ಗುಂಪಿನ ಎಲ್ಲರೂ ಮದ್ಯಪಾನವನ್ನು ಬಿಟ್ಟಿದ್ದರು. ಕರೆಂಟ್ ಶಾಕ್ ನಿಂದ ಅವರಿಗೆ ಮತ್ಯಾವ ಸಮಸ್ಯೆಯೂ ಆಗಿರಲಿಲ್ಲ. ಇದು ಈಗ ಜನರನ್ನು ಚಟಮುಕ್ತ ಮಾಡಲು ಹೊಸ ಚಿಕಿತ್ಸೆಯಾಗುವ ಭರವಸೆ ಮೂಡಿಸಿದೆ.

Shwetha M