ಮಳೆ ಅಬ್ಬರಕ್ಕೆ ತೊಯ್ದು ತೊಪ್ಪೆಯಾದ ಚುನಾವಣಾ ಸಿಬ್ಬಂದಿ – ದ್ವಿಚಕ್ರ ವಾಹನಗಳು ನೀರಲ್ಲಿ ಮುಳುಗಡೆ!

ಮಳೆ ಅಬ್ಬರಕ್ಕೆ ತೊಯ್ದು ತೊಪ್ಪೆಯಾದ ಚುನಾವಣಾ ಸಿಬ್ಬಂದಿ – ದ್ವಿಚಕ್ರ ವಾಹನಗಳು ನೀರಲ್ಲಿ ಮುಳುಗಡೆ!

ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಧಾರವಾಡ ಜಿಲ್ಲೆಯಲ್ಲಿ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಜನಜೀವನ ಅಕ್ಷರಶಃ ಹೈರಾಣಾಗಿದೆ. ಅನಿರೀಕ್ಷಿತ  ಮಳೆಯಿಂದಾಗಿ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ್ದ ಚುನಾವಣಾ ಸಿಬ್ಬಂದಿ ತೊಯ್ದು ತೊಪ್ಪೆಯಾಗಿದ್ದಾರೆ. ಮಳೆಯ ಮಧ್ಯೆಯೇ ಕುರ್ಚಿಗಳನ್ನು ತಲೆಯ ಮೇಲೆ ಹಿಡಿದುಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.

ಇದನ್ನೂ ಓದಿ : ಸಾರಿಗೆ ಬಸ್​ಗಳ ಕೊರತೆ.. ಖಾಸಗಿ ಬಸ್​ಗಳಲ್ಲಿ ಟಿಕೆಟ್ ದರ ಏರಿಕೆ – ಮತದಾನಕ್ಕೆಂದು ಊರಿಗೆ ಹೊರಟವ್ರ ಪರದಾಟ!

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆಗೆ ಜನರು ಅಕ್ಷರಶ: ಪರದಾಡಿದ್ದು ಚುನಾವಣಾ ಕರ್ತವ್ಯಕ್ಕೆಂದು ಮಸ್ಟರಿಂಗ್ ಕೇಂದ್ರಕ್ಕೆ ಬಂದಿದ್ದ ತೊಯ್ದು ತೊಪ್ಪೆಯಾದರು. ಹುಬ್ಬಳ್ಳಿಯ ಬಹುತೇಕ ಕಡೆಗಳಲ್ಲಿ ರಸ್ತೆಯು ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೇ ನವನಗರದ ಭಾಗದಲ್ಲಿ ಮಳೆಯಿಂದ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ನಗರದ ಪೆಂಡಾರಗಲ್ಲಿ ರಸ್ತೆಯ ತುಂಬೆಲ್ಲಾ ನೀರು ತುಂಬಿ ಹರಿದ ಪರಿಣಾಮವಾಗಿ ರಸ್ತೆಯ ಅಕ್ಕ ಪಕ್ಕದಲ್ಲಿ ನಿಲ್ಲಿಸಿದ್ಧ ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋದವು. ಇನ್ನು ಆಸ್ಪತ್ರೆ, ಮನೆಗಳಿಗೆ ಸಹ ಮಳೆ ನೀರು ಒಳಚರಂಡಿ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಹಾನಿಯಾಗಿದೆ‌. ದೇಶಪಾಂಡೆ ನಗರ, ದಾಜಿಬಾನ ಪೇಟೆ, ಉಣಕಲ್ ಬಳಿ ಬಿಆರ ಟಿಎಸ್ ನಿಲ್ದಾಣದಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹವಾಗಿದೆ. ದಾಜೀಬಾನ ಪೇಟೆಯ‌ ತುಳಜಾ ಭವಾನಿ ದೇವಸ್ಥಾನ ಬಳಿ ಭಾರಿ ನೀರು ನಿಂತಿದ್ದು ಬೈಕ್ ಗಳು ನೀರಿನಲ್ಲಿ ಮುಳುಗಿವೆ.

ಧಾರಾಕಾರ ಮಳೆಯಿಂದಾಗಿ ಧರೆಗುಳಿದ ಮರಗಳು, ಕೊಂಬೆಗಳು ಹಾಗೂ ವಿದ್ಯುತ್ ಕಂಬಗಳಿಂದಾಗಿ ಅನೇಕ ವಾಹನಗಳು ಜಖಂಗೊಂಡಿವೆ. ಕೆಲವೆಡೆ ಮನೆಗಳ ಹೆಂಚುಗಳು ಹಾರಿ ಹೋಗಿದ್ದು, ಗೋಡೆಗಳು ನೆಲಕ್ಕುರುಳಿವೆ. ಇನ್ನು ಹಳೇ ಹುಬ್ಬಳ್ಳಿಯ ಸೋನಿಯಾಗಾಂಧಿ ನಗರ ಮುಂತಾದ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಜನರಿಗೆ ತೀವ್ರ ತೊಂದರೆ ಆಗಿದೆ‌. ಗಾಳಿಯ ಅಬ್ಬರಕ್ಕೆ ಪ್ಲೆಕ್ಸ್‌ಗಳು ನೆಲ ಕಚ್ಚಿದ್ದು, ಮನೆಗಳ ಹೆಂಚುಗಳ ಹಾಗೂ ಕೆಲ ಗೂಡಂಗಡಿಗಳಿಗೆ ಹಾಕಿದ್ದ ತಗಡುಗಳು ಹಾರಿ ಹೋಗಿವೆ.

suddiyaana