ಪ್ರಧಾನಿ ಮೋದಿ, ರಾಹುಲ್‌ ಗಾಂಧಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ – EC ಯಿಂದ ನಾಯಕರಿಗೆ ನೋಟಿಸ್‌

ಪ್ರಧಾನಿ ಮೋದಿ, ರಾಹುಲ್‌ ಗಾಂಧಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ – EC ಯಿಂದ ನಾಯಕರಿಗೆ ನೋಟಿಸ್‌

ಲೋಕಸಭೆ ಚುನಾವಣೆಯ ಕಾವು ಹೆಚ್ಚಾಗಿದೆ. ಒಂದ್ಕಡೆ ಅಬ್ಬರದ ಪ್ರಚಾರ ನಡೆಯುತ್ತಿದ್ರೆ, ಇನ್ನೊಂದ್ಕಡೆ ನಾಯಕರ ನಾಲಗೆಗೆ ಲಂಗು ಲಗಾಮು ಇಲ್ಲದಂತಾಗಿದೆ. ಇದೀಗ ಧರ್ಮ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ದ್ವೇಷ ಮತ್ತು ವಿಭಜನೆಯನ್ನು ಉಂಟುಮಾಡುವ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ  ವಿರುದ್ಧ ಚುನಾವಣಾ ಆಯೋಗ ಕ್ರಮಕೈಗೊಂಡಿದೆ.

ಇದನ್ನೂ ಓದಿ: ದೋಸ್ತಿ ಎಂದು ಜೆಡಿಎಸ್ ಗೆ ಒಳಗೊಳಗೇ ಗುನ್ನಾ ಇಟ್ರಾ ಬಿಜೆಪಿ ನಾಯಕರು?

ಎರಡೂ ಧರ್ಮ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ದ್ವೇಷ ಮತ್ತು ವಿಭಜನೆಯನ್ನು ಉಂಟುಮಾಡುವ ಆರೋಪಗಳ ಹಿನ್ನಲೆ ಮೋದಿ ಮತ್ತು ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಾಗಿದ್ದವು. ಈ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗ ಪ್ರಧಾನಿ ಮೋದಿ ಹಾಗೂ ರಾಹುಲ್‌ ಗಾಂಧಿ ಬಳಿ ಸ್ಪಷ್ಟನೆ ಕೇಳಿದೆ. ಏಪ್ರಿಲ್ 29 ರಂದು ಬೆಳಗ್ಗೆ 11 ಗಂಟೆಯೊಳಗೆ ಪ್ರತಿಕ್ರಿಯಿಸುವಂತೆ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಸೂಚಿಸಿದೆ.

ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳು, ವಿಶೇಷವಾಗಿ ಸ್ಟಾರ್ ಪ್ರಚಾರಕರ ನಡವಳಿಕೆಗೆ ಪ್ರಾಥಮಿಕ ಮತ್ತು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಉನ್ನತ ಹುದ್ದೆಯಲ್ಲಿರುವವರ ಪ್ರಚಾರ ಭಾಷಣಗಳು ಹೆಚ್ಚು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತವೆ. ಮೊದಲ ಹಂತವಾಗಿ ಪಕ್ಷದ ಅಧ್ಯಕ್ಷರನ್ನು ಜವಾಬ್ದಾರರನ್ನಾಗಿ ಮಾಡುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಏಪ್ರಿಲ್ 21 ರಂದು ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ವಿರುದ್ಧ ಕಾಂಗ್ರೆಸ್ ಇಸಿಐಗೆ ದೂರು ನೀಡಿತ್ತು. ರ್ಯಾಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು “ಒಳನುಸುಳುಕೋರರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ” ಹಂಚಬಹುದು ಎಂದು ಹೇಳಿದರು‌. ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ನಂತರದ ರ್ಯಾಲಿಗಳಲ್ಲಿ ಮುಸ್ಲಿಂ ಸಮುದಾಯವನ್ನು ಅವರು ಉಲ್ಲೇಖಿಸಿದ್ದರು.

ಮತ್ತೊಂದೆಡೆ ರಾಷ್ಟ್ರದಲ್ಲಿ ಬಡತನ ಹೆಚ್ಚಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಭಾಷೆ ಮತ್ತು ಪ್ರದೇಶದ ಆಧಾರದ ಮೇಲೆ ಭಾರತದ ಉತ್ತರ ಮತ್ತು ದಕ್ಷಿಣದ ನಡುವೆ ವಿಭಜನೆಯನ್ನು ರಾಹುಲ್ ಗಾಂಧಿ ಮುಂದುವರೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

Shwetha M

Leave a Reply

Your email address will not be published. Required fields are marked *