ಕುಮಾರಸ್ವಾಮಿಗೆ ತೀವ್ರ ಜ್ವರ – ಮಗನಿಗಾಗಿ ಆರೋಗ್ಯ ಲೆಕ್ಕಿಸದೆ ಅಖಾಡಕ್ಕಿಳಿದ ದೊಡ್ಡಗೌಡರು..!

ಕುಮಾರಸ್ವಾಮಿಗೆ ತೀವ್ರ ಜ್ವರ – ಮಗನಿಗಾಗಿ ಆರೋಗ್ಯ ಲೆಕ್ಕಿಸದೆ ಅಖಾಡಕ್ಕಿಳಿದ ದೊಡ್ಡಗೌಡರು..!

ಅತ್ತ ದೊಡ್ಡಗೌಡರಿಗೂ ಅನಾರೋಗ್ಯ, ಇತ್ತ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಚುನಾವಣಾ ಅಖಾಡದಲ್ಲಿ ದಳಪತಿಗಳು ಕೊಂಚ ಡಲ್ ಆದಂತೆ ಕಂಡು ಬಂದಿತ್ತು. ಇದೀಗ ಮಗನ ಅನಾರೋಗ್ಯದಿಂದಾಗಿ ತನ್ನ ಆರೋಗ್ಯವನ್ನೂ ಕೂಡಾ ಲೆಕ್ಕಿಸದೇ ಜೆಡಿಎಸ್‌ನ ವರಿಷ್ಠ ಹೆಚ್. ಡಿ ದೇವೇಗೌಡರೇ ಪಕ್ಷದ ಗೆಲುವಿಗಾಗಿ ಅಖಾಡಕ್ಕಿಳಿದಿದ್ದಾರೆ. ವೈದ್ಯರು ಈ ಬಾರಿ ಚುನಾವಣಾ ಪ್ರಚಾರಕ್ಕೆ ಹೋಗಬಾರದು ಅಂತಾ ಸಲಹೆ ನೀಡಿದ್ದರೂ ಕೂಡಾ ದೇವೇಗೌಡರು ಕುಮಾರಸ್ವಾಮಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅನಾರೋಗ್ಯದ ನಡುವೆಯೂ ಪಕ್ಷದ ಬಲವರ್ಧನೆಗೆ ಮುಂದಾಗಿರುವ ದೇವೇಗೌಡರು, ವೈದ್ಯರ ತಂಡದ ಜೊತೆಗೆ ಸ್ವತಃ ತಾನೇ ಅಖಾಡಕ್ಕೆ ಧುಮುಕಿದ್ದಾರೆ. ಈ ಮೂಲಕ ಜೆಡಿಎಸ್ ಕಾರ್ಯಕರ್ತರಲ್ಲೂ ಹುಮ್ಮಸ್ಸು ತುಂಬಿದ್ದಾರೆ.

ಇದನ್ನೂ ಓದಿ:  ಗುಂಡ್ಲುಪೇಟೆಯಲ್ಲಿ ಅಮಿತ್ ಶಾ ಮತಬೇಟೆ – ಭರ್ಜರಿ ರೋಡ್ ಶೋ

ತುಮಕೂರು ಜಿಲ್ಲೆಯಲ್ಲಿ ಸೋಮವಾರ ದೊಡ್ಡಗೌಡರ ಹವಾ ಜೋರಾಗಿಯೇ ಇತ್ತು. ಶಿರಾ, ಕೊರಟಗೆರೆ, ಮಧುಗಿರಿಯಲ್ಲಿ ದೇವೇಗೌಡರು ಭರ್ಜರಿ ರೋಡ್ ಶೋ ನಡೆಸಿದ್ದಾರೆ. ತಮ್ಮ ಅಭ್ಯರ್ಥಿ ಪರ ಕ್ಷೇತ್ರದಲ್ಲಿ ಸಂಚಾರ ನಡೆಸಿದ ದೇವೇಗೌಡರು ಮತಯಾಚನೆ ಮಾಡಿದ್ದಾರೆ. ಶಿರಾ ಜೆಡಿಎಸ್‌ ಅಭ್ಯರ್ಥಿ ಉಗ್ರೇಶ್‌ ಪರ ದೇವೇಗೌಡರು ಪ್ರಚಾರ ಮಾಡಿದ್ದು, ಗೆಲ್ಲಿಸುವಂತೆ  ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ, ದೇವೇಗೌಡರು ಕುಮಾರಸ್ವಾಮಿಗೆ ಮತ್ತಷ್ಟು ಶಕ್ತಿ ತುಂಬ ಬೇಕು , ಹೀಗಾಗಿಯೇ ನಾನು ಎಲ್ಲಾ ಕಡೆ ಹೋಗಿ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.

ಮಧುಗಿರಿ ಕ್ಷೇತ್ರದಲ್ಲಿ ಮತಪ್ರಚಾರದ ವೇಳೆ ಮಾತನಾಡಿದ ಹೆಚ್​ಡಿಡಿ, ಸಂಸತ್ತಿನಲ್ಲಿ ಕಣ್ಣೀರು ಹಾಕಿಸಿದ ನಾಯಕನಿಗೆ ಕಣ್ಣೀರು ತರಿಸಿದರಷ್ಟೇ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದಿದ್ದಾರೆ.. ನನ್ನನ್ನು ಮುಖ್ಯಮಂತ್ರಿ ಮಾಡಲು 11 ಸ್ಥಾನಗಳನ್ನು ತುಮಕೂರು ಕೊಟ್ಟಿತ್ತು. ಈಗ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ಯಾವ ದೇವೇಗೌಡ ಪಾರ್ಲಿಮೆಂಟ್​ನಲ್ಲಿ ನಿಂತು ಕಣ್ಣೀರು ಹಾಕುವ ಕೆಟ್ಟ ಸಂದರ್ಭ ತಂದರೋ ಆ ನಾಯಕನ ಕಣ್ಣಲ್ಲಿ ನೀರು ಬರಿಸಬೇಕು. ಅವತ್ತು ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಭಾವುಕರಾಗಿ ಹೇಳುವ ಮೂಲಕ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನ ಸೋಲಿಸುವಂತೆ ಪರೋಕ್ಷವಾಗಿ ಹೇಳಿದರು

ನಾಳೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆಆರ್ ನಗರದಲ್ಲಿ ದೇವೇಗೌಡರು ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.

ತೀವ್ರ ಜ್ವರದಿಂದ ಹೆಚ್.ಡಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ತಾವೇ ಖುದ್ದು ದೇವೇಗೌಡರು ಪ್ರಚಾರಕ್ಕೆ ತೆರಳುತ್ತಿದ್ದಾರೆ. ಕುಮಾರಸ್ವಾಮಿಗೋಸ್ಕರ ವೈದ್ಯರ ತಂಡದೊಂದಿಗೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ದೇವೇಗೌಡರನ್ನು ಪಕ್ಷದ ಕಾರ್ಯಕರ್ತರು ಕೊಂಡಾಡುತ್ತಿದ್ದಾರೆ.

ಇನ್ನೊಂದೆಡೆ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಮಠಕ್ಕೆ ಹೆಚ್ಡಿಡಿ ಭೇಟಿ ನೀಡಿದ್ದು ನಂಜಾವಧೂತಶ್ರೀ ಭೇಟಿಯಾಗಿ ಆಶೀರ್ವಾದ ಪಡೆದ್ರು. ಮಠದ ಶ್ರೀ ಓಂಕಾರೇಶ್ವರ ಸನ್ನಿದಿಯಲ್ಲಿ ಸತತ ಒಂದು ಗಂಟೆಗೂ ಅಧಿಕ ಕಾಲ ಪೂಜೆಯಲ್ಲಿ ತೊಡಗಿದ್ರು. ಗುರುಗುಂಡಾ ಬ್ರಹ್ಮೇಶ್ವರ ಮಠದ ಓಂಕಾರೇಶ್ವರ ಸ್ವಾಮಿ ದೇವರ ಪೂಜೆ ವೇಳೆ ಓಂಕಾರೇಶ್ವರ ಸ್ವಾಮಿ ತಲೆ ಮೇಲಿಂದ ಹೂ ಬಿದ್ದಿದೆ. ಪೂಜೆ ಬಳಿಕ ನಂಜಾವದೂತ ಸ್ವಾಮಿಜಿ ಜೊತೆ ಮಠದ ಕೊಠಡಿಯಲ್ಲಿ ಹೆಚ್ಡಿ ದೇವೇಗೌಡ್ರು ಮಾತುಕತೆ ನಡೆಸಿದ್ದಾರೆ.

suddiyaana