ದೇಣಿಗೆ ಹೆಸರಲ್ಲಿ ಬಿಜೆಪಿಗೆ ಹಣದ ಹೊಳೆ- ಮೋದಿ ಭವಿಷ್ಯ ಬದಲಿಸುತ್ತಾ ಚುನಾವಣಾ ಬಾಂಡ್ ?
ರಾಜಕೀಯವಾಗಿ ಭಾರಿ ಸದ್ದು ಮಾಡಿದ್ದ ಚುನಾವಣಾ ಬಾಂಡ್‌ಗಳ ವಿವರ ಪ್ರಕಟವಾಗಿದ್ದು ಸಂಚಲನ ಸೃಷ್ಟಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ದತ್ತಾಂಶಗಳ ವಿವರವನ್ನು ಕೇಂದ್ರ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಎರಡು ಭಾಗಗಳಾಗಿ ಪ್ರಕಟಿಸಿದೆ. ಒಂದು ಭಾಗದಲ್ಲಿ ದೇಣಿಗೆ ನೀಡಿದ ಕಂಪನಿಗಳ ಪಟ್ಟಿ ಹಾಗೂ ಮತ್ತೊಂದು ಭಾಗದಲ್ಲಿ ದೇಣಿಗೆ ಪಡೆದ ಪಕ್ಷಗಳ ವಿವರವಿದೆ. ಆದರೆ ಯಾವ ಕಂಪನಿಯು ಯಾವ ಪಕ್ಷಕ್ಕೆ ದೇಣಿಗೆ ನೀಡಿದೆ ಅಥವಾ ಯಾರು ಯಾವ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ. ಇದೇ ಈಗ ಬಾರಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಚುನಾವಣಾ ಬಾಂಡ್ ಮಾಹಿತಿಯು ಬಿಜೆಪಿ ಮುಖವಾಡವನ್ನು ಕಳಚಿದೆ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ. ಬಿಜೆಪಿಯು ಇ.ಡಿ. ಮತ್ತು ಐಟಿಗಳ ಮೂಲಕ ಬೆದರಿಕೆ ಒಡ್ಡಿ ದೇಣಿಗೆ ಸಂಗ್ರಹ ಮಾಡಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ಮಾಹಿತಿಯಲ್ಲಿ ಬಾಂಡ್ ಗಳ ಒಟ್ಟು ಮೊತ್ತದ ಲೆಕ್ಕ ಮತ್ತು ಯಾವ ಸಂಸ್ಥೆ ಯಾವ ಪಕ್ಷಕ್ಕೆ ದೇಣಿಗೆ ನೀಡಿದೆ ಎನ್ನುವ ಮಾಹಿತಿಯಿಲ್ಲ. ಏಪ್ರಿಲ್ 12, 2019 ರಿಂದ ಜನವರಿ 24, 2024ರ ವರೆಗಿನ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ನೀಡಿದೆ. ಪಟ್ಟಿಯಲ್ಲಿ ದೇಣಿಗೆ ನಗದೀಕರಿಸಿಕೊಂಡ ಪಕ್ಷಗಳಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ, ಬಾಂಡ್ ಖರೀದಿಸಿದ ಸಂಸ್ಥೆಗಳಲ್ಲಿ ಫ್ಯೂಚರ್ ಗೇಮಿಂಗ್ ಮೊದಲ ಸ್ಥಾನದಲ್ಲಿದೆ.ಟಾಪ್ 10 ದೇಣಿಗೆದಾರ ಸಂಸ್ಥೆಗಳಲ್ಲಿ ಫ್ಯೂಚರ್ ಗೇಮಿಂಗ್, ಮೇಘಾ ಇಂಜಿನಿಯರಿಂಗ್, ಕ್ವಿಕ್ ಸಪ್ಲೈ ಚೈನ್, ವೇದಾಂತ, ಹಾಲ್ದಿಯಾ ಎನರ್ಜಿ ಮತ್ತು ಭಾರ್ತಿ ಗ್ರೂಪ್ ಸಂಸ್ಥೆಗಳು ಟಾಪ್ ಸಿಕ್ಸ್ ಪಟ್ಟಿಯಲ್ಲಿದೆ. ಪಕ್ಷಗಳ ವಿಚಾರಕ್ಕೆ ಬಂದ್ರೆ ಬಿಜೆಪಿ – 6,060 ಕೋಟಿ, ತೃಣಮೂಲ ಕಾಂಗ್ರೆಸ್ – 1,609 ಕೋಟಿ, ಕಾಂಗ್ರೆಸ್ – 1,421, ಭಾರತ್ ರಾಷ್ಟ್ರ ಸಮಿತಿ -1,214.70, ಬಿಜು ಜನತಾ ದಳ-775 ಕೋಟಿ ದೇಣಿಗೆಯನ್ನ ಪಕ್ಷಗಳು ಬಾಂಡ್ ನಗದೀಕರಿಸಿಕೊಂಡಿದೆ. ಆ ಮೂಲಕ ಅಂದಾಜು ಶೇ. 85ರಷ್ಟು ದೇಣಿಗೆ ಈ ಐದು ಪಕ್ಷಗಳಿಗೆ ಖಜಾನೆಗೆ ಹೋಗಿದೆ.
2018ರಿಂದ ಈವರೆಗೂ 30 ಕಂತುಗಳಲ್ಲಿ ಒಟ್ಟು 16,518 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಎಸ್‌ಬಿಐ ವಿತರಿಸಿದೆ. ಕೇಂದ್ರ ಸರಕಾರ ಜಾರಿಗೆ ತಂದಿದ್ದ ಈ ಚುನಾವಣಾ ಬಾಂಡ್ ಯೋಜನೆಯನ್ನು ಫೆ.15ರಂದು ಸುಪ್ರೀಂಕೋರ್ಟ್ ರದ್ದುಪಡಿಸಿ ಮಹತ್ವದ ತೀರ್ಪು ನೀಡಿತ್ತು. ಇದು ಅಸಾಂವಿಧಾನಿಕ ಎಂದಿದ್ದ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಖರೀದಿಸಿದವರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಬೇಕು ಎಂದು ಎಸ್‌ಬಿಐಗೆ ಖಡಕ್ ನಿರ್ದೇಶನ ನೀಡಿತ್ತು. ಅದ್ರಂತೆ ಚುನಾವಣಾ ಬಾಂಡ್ ಗಳ ವಿವರ ಪ್ರಕಟವಾಗಿದೆ. ಆದ್ರೆ ಕೇಂದ್ರ ಚುನಾವಣಾ ಆಯೋಗದೊಂದಿಗೆ ಚುನಾವಣಾ ಬಾಂಡ್‌ಗಳ ಅಸಮರ್ಪಕ ಮಾಹಿತಿ ಹಂಚಿಕೊಂಡ ಭಾರತೀಯ ಸ್ಟೇಟ್ ಬ್ಯಾಂಕ್ ಅನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಯಾರು ಯಾರಿಗೆ ಚುನಾವಣಾ ಬಾಂಡ್ ನೀಡಿದರು ಎನ್ನುವುದರ ಜೊತೆಗೆ ಯಾವ ದಿನಾಂಕದಂದು ನೀಡಿದರು ಮತ್ತು ಬಾಂಡ್‌ನ ಸೀರಿಯಲ್ ಸಂಖ್ಯೆ ಏನು ಎನ್ನುವುದನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ. ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದುಕೊಂಡ ವಿಚಾರ ಸುಪ್ರೀಂ ಕೋರ್ಟ್ ಮೂಲಕ ಬಹಿರಂಗವಾದ ಹಿನ್ನೆಲೆಯಲ್ಲಿ, ವಿಶೇಷ ತನಿಖೆಯ ಅಗತ್ಯವಿದೆ. ಹೀಗಾಗಿ ಬಿಜೆಪಿ ಬ್ಯಾಂಕ್ ಖಾತೆ ಸ್ಥಗಿತ ಮಾಡಿ ಎಂದು ಆಗ್ರಹಿಸಿದ್ದಾರೆ.