ದೇಶದಲ್ಲಿ ಹವಾಮಾನ ಬದಲಾವಣೆ – ಈ ಬಾರಿ ಎಲ್ಲೆಲ್ಲಿ ಮಳೆ ಕಡಿಮೆ?

ದೇಶದಲ್ಲಿ ಹವಾಮಾನ ಬದಲಾವಣೆ – ಈ ಬಾರಿ ಎಲ್ಲೆಲ್ಲಿ ಮಳೆ ಕಡಿಮೆ?

ಬೆಂಗಳೂರು: 2023 ರಲ್ಲಿ ‘ಎಲ್ ನಿನೋ’ ಪರಿಣಾಮದಿಂದ ಏಷ್ಯಾ ಖಂಡದಲ್ಲಿ ಒಣಹವೆ ಇರಲಿದೆ. ಇದರ ಪರಿಣಾಮ ಭಾರತದಲ್ಲಿ ಈ ವರ್ಷ ತೀರಾ ಕಡಿಮೆ ಮಳೆಯಾಗಲಿದೆ ಅಂತಾ ಖಾಸಗಿ ಹವಾಮಾನ ಮುನ್ಸೂಚನಾ ಏಜೆನ್ಸಿ ಸ್ಕೈಮೆಟ್ ವರದಿ ಮಾಡಿದೆ.

2023ರ ಮಳೆಗಾಲದಲ್ಲಿ ‘ಎಲ್ ನಿನೋ’ ಪರಿಣಾಮದಿಂದಾಗಿ ಏಷ್ಯಾ ಖಂಡದಲ್ಲಿ ಒಣ ಹವೆ ಇರಲಿದೆ. ಹೀಗಾಗಿ ದೇಶದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಕಡಿಮೆ ಆಗುವ ಸಂಭವ ಇದೆ ಅಂತಾ ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಎಫೆಕ್ಟ್ – 2 ವರ್ಷಗಳ ಬಳಿಕ ವಾಸನೆ ಗ್ರಹಿಸಿದ ಮಹಿಳೆ!

ಏನಿದು ‘ಎಲ್ ನಿನೋ’?

‘ಎಲ್ ನಿನೋ’ ಅನ್ನೋದು ಹವಾಮಾನದ ಮೇಲೆ ಪರಿಣಾಮ ಬೀರುವ ಒಂದು ‘ವಾಯುಗುಣ ಚಕ್ರ’. ಪೆಸಿಫಿಕ್ ಮಹಾಸಾಗರದ ಉಷ್ಣವಲಯದ ಪಶ್ಚಿಮ ಭಾಗದಲ್ಲಿನ ಬಿಸಿ ನೀರು ಭೂ ಮಧ್ಯ ರೇಖೆಯ ಉದ್ದಕ್ಕೂ ಸಾಗಿ ದಕ್ಷಿಣ ಅಮೆರಿಕ ಕರಾವಳಿಯತ್ತ ಪೂರ್ವಾಭಿಮುಖವಾಗಿ ಸಾಗುತ್ತದೆ. ಈ ಮೂಲಕ ‘ಎಲ್‌ ನಿನೋ’ ಹವಾಗುಣ ಚಕ್ರ ಆರಂಭ ಆಗುತ್ತದೆ. ಸಾಗರದ ಬಿಸಿ ನೀರು ಸಾಮಾನ್ಯವಾಗಿ ಇಂಡೋನೇಷ್ಯಾ ಹಾಗೂ ಫಿಲಿಪೀನ್ಸ್ ಬಳಿಗೆ ಸಾಗಿ ಬರುತ್ತದೆ. ಈ ವೇಳೆ ಭಾರತ ಮಾತ್ರವಲ್ಲ, ದಕ್ಷಿಣ ಅಮೆರಿಕ, ಇಂಡೋನೇಷ್ಯಾ, ಆಸ್ಟ್ರೇಲಿಯಾದಲ್ಲೂ ‘ಎಲ್ ನಿನೋ’ ಎಫೆಕ್ಟ್ ಇರಲಿದೆ ಅಂತಾ ತಜ್ಞರು ಮಾಹಿತಿ ನೀಡಿದ್ದಾರೆ.

ಪ್ರಪಂಚದಲ್ಲಿ ಪ್ರತಿ 3 ರಿಂದ 5 ವರ್ಷಕ್ಕೆ ಒಮ್ಮೆ ‘ಎಲ್ ನಿನೋ’ ಸಂಭವಿಸುತ್ತದೆ. ಕೆಲವೊಮ್ಮೆ 2 ವರ್ಷಕ್ಕೊಮ್ಮೆ ಕೂಡಾ ಬರಬಹುದು. ಇನ್ನು ಕೆಲವು ವೇಳೆ 7 ವರ್ಷದ ಅಂತರ ಕೂಡಾ ಇರುತ್ತದೆ. ಮಳೆ ಕಡಿಮೆ ಮಾಡುವ ಹವಾಗುಣ ಚಕ್ರವನ್ನು ‘ಎಲ್ ನಿನೋ’ ಎಂದರೆ, ಮಳೆ ಹೆಚ್ಚು ಮಾಡುವ ಹವಾಗುಣ ಚಕ್ರವನ್ನು ‘ಲಾ ನಿನೋ’ ಎನ್ನುತ್ತಾರೆ.

ಭಾರತದಲ್ಲಿನ ಸುದೀರ್ಘ ಕಾಲದ ಮಳೆಗಾಲದ ಸರಾಸರಿಯನ್ನು ಗಮನಿಸಿದರೆ, ಈ ಬಾರಿ ಶೇ. 94ರಷ್ಟು ಮಾತ್ರ ಮಳೆ ಆಗುವ ಸಾಧ್ಯತೆ ಇದೆ. ಈ ಪ್ರಮಾಣವು ರಾಜ್ಯದಿಂದ ರಾಜ್ಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಬದಲಾವಣೆ ಆಗಲಿದೆ. ದೆಹಲಿಯಲ್ಲಿ ಶೇ. 96 ರಿಂದ ಶೇ. 104 ರಷ್ಟು ಮಳೆ ಆಗಲಿದೆ. ಇದು ಖಾಸಗಿ ಹವಾಮಾನ ಸಂಸ್ಥೆಯೊಂದರ ಮುನ್ಸೂಚನೆ ಆಗಿದ್ದು, ಭಾರತ ಸರ್ಕಾರದ ಹವಾಮಾನ ಇಲಾಖೆ ಇನ್ನಷ್ಟೇ ತನ್ನ ವಾರ್ಷಿಕ ಮಳೆಗಾಲದ ಮುನ್ಸೂಚನಾ ವರದಿ ನೀಡಬೇಕಿದೆ.

ಇನ್ನು ಖಾಸಗಿ ಹವಾಮಾನ ಸಂಸ್ಥೆ ನೀಡಿರುವ ಮಳೆಯ ಅಂದಾಜನ್ನು ಗಮನಿಸಿದರೆ ಭಾರತದ ಉತ್ತರ ಭಾಗ ಹಾಗೂ ಕೇಂದ್ರ ಭಾಗದಲ್ಲಿ ಮಳೆ ಕಡಿಮೆ ಆಗುವ ಸಾಧ್ಯತೆಗಳಿವೆ. ಈ ಪೈಕಿ ಪಂಜಾಬ್, ಹರಿಯಾಣ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತಾ ಕಡಿಮೆ ಮಳೆ ಆಗಲಿದೆ ಎಂದು ವರದಿಗಳು ಹೇಳಿವೆ.

suddiyaana