ಶಿಕ್ಷಣ ಇಲಾಖೆಯಿಂದ ಮತ್ತೊಂದು ಎಡವಟ್ಟು! – SSLC ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತನ್ನಿ!

ಶಿಕ್ಷಣ ಇಲಾಖೆಯಿಂದ ಮತ್ತೊಂದು ಎಡವಟ್ಟು! – SSLC ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತನ್ನಿ!

ರಾಜ್ಯ ಶಿಕ್ಷಣ ಇಲಾಖೆ ಮೇಲಿಂದ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಲೇ ಇದೆ. ಇದೀಗ ಮತ್ತೊಂದು ಮಹಾ ಎಡವಟ್ಟು ಮಾಡಿಕೊಂಡಿದೆ. ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ದತಾ ಪರೀಕ್ಷೆಗೆ ಇಲಾಖೆ ಪ್ರಶ್ನೆ ಪತ್ರಿಕೆಯನ್ನು ಮಾತ್ರ ನೀಡುತ್ತದೆ. ಉತ್ತರ ಪತ್ರಿಕೆಗಳನ್ನು ತರುವ ಜವಾಬ್ದಾರಿ ಶಾಲೆಗಳದ್ದು ಇಲ್ಲವೇ ವಿದ್ಯಾರ್ಥಿಗಳದ್ದು ಎಂದು ಮೌಖಿಕ ಆದೇಶ ಹೊರಡಿಸಿದೆ.

ಇದನ್ನೂ ಓದಿ: ದೆಹಲಿ ಚಲೋ ವೇಳೆ ಪೊಲೀಸರೊಂದಿಗೆ ಘರ್ಷಣೆ –  ರೈತ ಸಾವು, 2 ದಿನಗಳ ಕಾಲ ಪ್ರತಿಭಟನೆ ತಾತ್ಕಾಲಿಕ ಸ್ಥಗಿತ

ಹೌದು, ಒಟ್ಟಿನಲ್ಲಿ ಶಿಕ್ಷಣ ಇಲಾಖೆ ಒಂದಾದ ಮೇಲೊಂದು ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದೆ. ಮೊದಲಿಗೆ ಏನೋ ಮಾಡಲು ಹೋಗುತ್ತೆ. ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿ ಯುಟರ್ನ್ ಹೊಡೆಯುತ್ತೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳ ಪ್ರವೇಶದ್ವಾರದ ಮೇಲೆ ಹಾಕಲಾಗಿದ್ದ ಕೈಮುಗಿದು ಬನ್ನಿ ಘೋಷವಾಕ್ಯದ ಬದಲಾಗಿ ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಾವಣೆ ವಿವಾದ ಸೃಷ್ಟಿ ಮಾಡಿತ್ತು. ಸಾರ್ವಜನಿಕ ಆಕ್ರೋಶ, ಖಂಡನೆ ವ್ಯಕ್ತವಾಗುತ್ತಿದ್ದಂತೆ, ಯುಟರ್ನ್ ಹೊಡೆದ ಸರ್ಕಾರ ಹಾಗೆ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿ ಮತ್ತೆ ಯಥಾಸ್ಥಿತಿ ಘೋಷವಾಕ್ಯ ಬರೆಸಿತು. ಅದಾದ ಮೇಲೆ ಮತ್ತೆ ಸರ್ಕಾರ ಖಾಸಗಿ ಶಾಲೆಗಳಲ್ಲಿ ಇನ್ನುಮುಂದೆ ನಾಡಗೀತೆ ಕಡ್ಡಾಯವಲ್ಲ ಎಂಬಂತ ಹೇಳಿಕೆ ನೀಡಿ ಆದೇಶ ಹೊರಡಿಸಿತು. ಇಲ್ಲಿಯೂ ಸಹ ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಲ್ಲ ಶಾಲೆಗಳಿಗೆ ಕಡ್ಡಾಯ ಎಂದಿತು. ಇದೀಗ ಫೆಬ್ರವರಿ 26ರಿಂದ ಮಾರ್ಚ್ 2ರ ತನಕ ನಡೆಯಲಿರುವ ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕೆಂದು ಶಿಕ್ಷಣ ಇಲಾಖೆ ಮೌಖಿಕ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ಪರೀಕ್ಷೆ ವೆಚ್ಚವೆಂದು ವಿದ್ಯಾರ್ಥಿಗಳಿಂದ 50 ರೂ, ವಸೂಲಿ ಮಾಡಿದ್ದ ಸರ್ಕಾರ. ಪರೀಕ್ಷೆ ಶುಲ್ಕ ವಸೂಲಿ ಮಾಡಿದ್ದಲ್ಲದೇ ಇದೀಗ ಹತ್ತನೇ ತರಗತಿಗೆ ನಡೆಯುವ ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆಗಳನ್ನ ತರುವಂತೆ ಶಾಲೆಯಿಂದ ಮೌಖಿಕ ಸೂಚನೆ ನೀಡಿದೆ. ಈ ಸಂಬಂಧ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯಿಸಿದ್ದು, ಮಕ್ಕಳಿಂದ ಉತ್ತರ ಪತ್ರಿಕೆ ತರುವಂತೆ ಹೇಳಿರುವ ಶಿಕ್ಷಣ ಇಲಾಖೆ ನಡೆಯನ್ನು ಖಂಡಿಸಿದ್ದಾರೆ.

ಪರೀಕ್ಷೆ ವೆಚ್ಚವೆಂದು ಶಾಲಾ ಮಕ್ಕಳಿಂದ 50ರೂ. ವಸೂಲಿ ಮಾಡಿದ್ದಲ್ಲದೆ ಈಗ ಪತ್ರಿಕೆಗಳನ್ನ ವಿದ್ಯಾರ್ಥಿಗಳೇ ತರಬೇಕು ಎಂದಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಪರೀಕ್ಷೆ ವೇಳೆ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ರೀತಿ ಮಾಡುತ್ತಿದ್ದಾರೆ ಎಂದು ನನಗನಿಸುತ್ತಿದೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೂರ್ವಸಿದ್ಧತೆ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕೆಂದು ಶಾಲೆಗಳಿಗೆ ಕೊಟ್ಟಿರುವ ಮೌಖಿಕ ಆದೇಶ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.

Shwetha M