ಇರುವಲ್ಲಿಂದಲೇ ಇನ್ಮುಂದೆ ಮತದಾನ! – ಐತಿಹಾಸಿಕ ಹೆಜ್ಜೆ ಇರಿಸಿದ ಚುನಾವಣಾ ಆಯೋಗ

ಇರುವಲ್ಲಿಂದಲೇ ಇನ್ಮುಂದೆ ಮತದಾನ! – ಐತಿಹಾಸಿಕ ಹೆಜ್ಜೆ ಇರಿಸಿದ ಚುನಾವಣಾ ಆಯೋಗ

ನವದೆಹಲಿ: ದೇಶದ ನಾಗರಿಕರು ಮತ ಹಾಕಲು ಇನ್ನುಮುಂದೆ ತಮ್ಮ ಸ್ವಂತ ಊರಿಗೆ ಮರಳಬೇಕಿಲ್ಲ. ಜನರು ತಮ್ಮ ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಯಲ್ಲಿ ಯಾವುದೇ ಪ್ರದೇಶದಿಂದ ಮತ ಚಲಾಯಿಸಬಹುದು. ಇದಕ್ಕಾಗಿ ಚುನಾವಣಾ ಆಯೋಗ, ರಿಮೋಟ್ ಇವಿಎಂಗಳನ್ನು ಸಿದ್ದಪಡಿಸಿದೆ.

ರಿಮೋಟ್ ಇವಿಎಂಗಳನ್ನು ರಾಜಕೀಯ ಪಕ್ಷಗಳೆದುರು ಪ್ರದರ್ಶಿಸಲು ಆಯೋಗ ನಿರ್ಧರಿಸಿದ್ದು, ಜ.16ರಂದು ಪ್ರದರ್ಶನಕ್ಕೆ ಪಕ್ಷಗಳನ್ನು ಆಹ್ವಾನಿಸಿದೆ.  ಒಂದು ವೇಳೆ ಯಂತ್ರವು ತೃಪ್ತಿದಾಯಕವೆಂದು ಕಂಡುಬಂದಲ್ಲಿ ಪಕ್ಷಗಳ ಸಲಹೆ ಸೂಚನೆ ಆಧರಿಸಿ ಇದನ್ನು ಅಧಿಕೃತವಾಗಿ ಜಾರಿಗೆ ತರಲಾಗುತ್ತದೆ. ಹೀಗಾಗಿ ವಲಸಿಗರು ಮತ ಹಾಕಲು ತಮ್ಮ ಸ್ವಂತ ಊರಿಗೆ ಮರಳಬೇಕಿಲ್ಲ. ಇದ್ದಲ್ಲಿಂದಲೇ ಮತ ಹಾಕಬಹುದಾಗಿದೆ. ಅಸ್ತಿತ್ವದಲ್ಲಿರುವ ವಿದ್ಯುನ್ಮಾನ ಮತಯಂತ್ರಗಳಂತೆಯೇ ಈ ಮತಯಂತ್ರಗಳು ಕೂಡ ಇಂಟರ್ನೆಟ್‌ಗೆ ಸಂಪರ್ಕ ಹೊಂದಿರುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ: ಜಗತ್ತಿನಾದ್ಯಂತ ವರ್ಷಕ್ಕೆ 100 ಕೋಟಿ ಟನ್ ಆಹಾರ ವ್ಯರ್ಥ!

ಇದನ್ನು ಜಾರಿಗೆ ತರಲು 8 ರಾಷ್ಟ್ರೀಯ ಪಕ್ಷಗಳು ಹಾಗೂ 57 ರಾಜ್ಯಮಟ್ಟದ ಪಕ್ಷಗಳಿಂದ ಆಯೋಗವು ಅಭಿಪ್ರಾಯ ಬಯಸಿದೆ. ಕಾನೂನು, ಆಡಳಿತಾತ್ಮಕ ಮತ್ತು ತಾಂತ್ರಿಕ ಸವಾಲುಗಳ ಕುರಿತು ಪಕ್ಷಗಳ ಸಲಹೆಗಳನ್ನು ಬಯಸಿದೆ. ಜ.31ರೊಳಗೆ ಅಭಿಪ್ರಾಯ ಸಲ್ಲಿಸಲು ಪಕ್ಷಗಳಿಗೆ ಕೋರಿದೆ.

ಸಾರ್ವಜನಿಕ ಸ್ವಾಮ್ಯದ ಉದ್ದಿಮೆಯೊಂದು ರಿಮೋಟ್‌ ಮತಯಂತ್ರದ ಮಾದರಿ ಅಭಿವೃದ್ಧಿಪಡಿಸಿದೆ. ಒಂದೇ ಒಂದು ರಿಮೋಟ್‌ ಇವಿಎಂ, 72 ಕ್ಷೇತ್ರಗಳನ್ನು ನಿರ್ವಹಿಸಬಹುದಾಗಿದೆ. ಅನೇಕ ಬಾರಿ ವಲಸಿಗರು, ತಾವು ವಲಸೆ ಬಂದ ಕೆಲಸದ ಸ್ಥಳದಲ್ಲಿ ಮತದಾರರಾಗಲು ಹಿಂಜರಿಯುತ್ತಾರೆ. ಏಕೆಂದರೆ ಅವರಿಗೆ ಸ್ವಂತ ಊರಿನ ಜತೆ ಭಾವನಾತ್ಮಕ ಸಂಬಂಧ ಇರುತ್ತದೆ. ಹೀಗಾಗಿ ಈ ಉಪಕ್ರಮವು ಕಾರ್ಯರೂಪಕ್ಕೆ ಬಂದರೆ, ವಲಸಿಗರಿಗೆ ಸಾಮಾಜಿಕ ರೂಪಾಂತರ ಕ್ಕೆ ಕಾರಣವಾಗಬಹುದು ಎಂದು ಆಯೋಗ ಹೇಳಿದೆ.

ರಿಮೋಟ್‌ ವೋಟಿಂಗ್‌ ಪರಿಚಯಿಸಲು ಪ್ರಜಾಪ್ರತಿನಿಧಿ ಕಾಯ್ದೆ-1950 ಮತ್ತು 1951, ಚುನಾವಣಾ ನಿಯಮಗಳು-1961 ಮತ್ತು ಮತದಾರರ ನೋಂದಣಿ ನಿಯಮಗಳು-1960 ಅನ್ನು ತಿದ್ದುಪಡಿ ಮಾಡಬೇಕಾಗಿದೆ. ಅಲ್ಲದೆ, ಇಂಥ ಮಗತಟ್ಟೆ ಎಲ್ಲಿ ಸ್ಥಾಪಿಸಬೇಕು? ವಲಸಿಗರು ಎಂದು ಅವರನ್ನು ಗುರುತಿಸುವುದು ಹೇಗೆ? ಮತದಾನದ ಗೌಪ್ಯತೆ ಕಾಪಾಡುವಿಕೆ, ವಲಸಿಗ ಮತದಾರರನ್ನು ಗುರುತಿಸಲು ಪೋಲಿಂಗ್‌ ಏಜೆಂಟ್‌ಗಳ ಸೌಲಭ್ಯ, ರಿಮೋಟ್‌ ಮತ ಎಣಿಕೆ ಪ್ರಕ್ರಿಯೆಯ ವಿಧಾನ, ಮತಗಳನ್ನು ಮತದಾರರ ಸ್ವಂತ ಕ್ಷೇತ್ರಕ್ಕೆ ವರ್ಗಾಯಿಸುವುದು, ಇತ್ಯಾದಿಗಳನ್ನು ಆಯೋಗ ಇತ್ಯರ್ಥಪಡಿಸಿಕೊಳ್ಳಬೇಕಿದೆ.

suddiyaana