ಪ್ರವಾಹದ ಬೆನ್ನಲ್ಲೇ ತಮಿಳುನಾಡಿಗೆ ಭೂಕಂಪನದ ಬಿಸಿ – ಕರ್ನಾಟಕದಲ್ಲೂ  ನಡುಗಿದ ಭೂಮಿ!

ಪ್ರವಾಹದ ಬೆನ್ನಲ್ಲೇ ತಮಿಳುನಾಡಿಗೆ ಭೂಕಂಪನದ ಬಿಸಿ – ಕರ್ನಾಟಕದಲ್ಲೂ  ನಡುಗಿದ ಭೂಮಿ!

ತಮಿಳುನಾಡಿನಲ್ಲಿ ಮಿಚಾಂಗ್‌ ಚಂಡಮಾರುತದ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದೆ. ಕಳೆದ ಐದು ದಿನಗಳಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಜನರು ಗಂಜಿಕೇಂದ್ರಗಳಲ್ಲಿ ದಿನಕಳೆಯುತ್ತಿದ್ದಾರೆ. ಇದೀಗ ಮಳೆ ನಿಂತರೂ ಪ್ರವಾಹದ ನೀರು ತಗ್ಗಿಲ್ಲ. ಇದೀಗ ಗಾಯದ ಮೇಲೆ ಬರೆ ಎಳೆಯುವಂತೆ ತಮಿಳುನಾಡಿನಲ್ಲಿ ಭೂಕಂಪನ ಸಂಭವಿಸಿದೆ.

ಹೌದು, ತಮಿಳುನಾಡಿನ ಹಲವೆಡೆ ಭಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ, ಚೆನ್ನೈನಂತಹ ಮಹಾನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರ ಚಿಂತೆಯಲ್ಲೇ ಕಾಲಕಳೆಯುವಂತಾಗಿದೆ. ಈ ಬೆನ್ನಲ್ಲೇ ತಮಿಳು ಪ್ರದೇಶದಲ್ಲಿ ಭೂಕಂಪನದ ಬಿಸಿ ತಾಗಿದೆ. ಕರ್ನಾಟಕದ ವಿಜಯಪುರದಲ್ಲೂ ಭೂಕಂಪ ಸಂಭವಿಸಿದೆ.

ಇದನ್ನೂ ಓದಿ: ಮಿಚಾಂಗ್ ಚಂಡಮಾರುತ ಎಫೆಕ್ಟ್‌ – ತಮಿಳುನಾಡಿನಲ್ಲಿ ಮಳೆ ಮುಂದುವರಿಕೆ, ಸತತ ಐದನೇ ದಿನವೂ ಶಾಲಾ-ಕಾಲೇಜುಗಳಿಗೆ ರಜೆ

ಶುಕ್ರವಾರ ಬೆಳಗ್ಗೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಸುಮಾರು 10 ಕಿ.ಮೀ ಪ್ರದೇಶದಲ್ಲಿ ಇಂದು ಬೆಳಗ್ಗೆ 07: 39ರ ಸುಮಾರಿಗೆ 3.2 ತೀವ್ರತೆಯ ಭೂಕಂಪ ಸಂಭವಿಸಿದೆ. ಅಂಬೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಾದ ವಿನ್ನಮಂಗಲಂ, ಪೆರಿಯಂಕುಪ್ಪಂ, ಚಂದೋರ್ಕುಪ್ಪಂ, ಕರುಂಬೂರು, ಆಲಂಕುಪ್ಪಂ, ಪಾಲೂರು ಸೇರಿದಂತೆ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಲಘು ಭೂಕಂಪನದ ಅನುಭವವಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಇನ್ನೂ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲೂ 3.1 ತೀವ್ರತೆಯ ಭೂಕಂಪ ಸಂಭವಿಸಿದೆ. ವಿಜಯಪುರ ಅಷ್ಟೇ ಅಲ್ಲ ಗುಜರಾತ್‌ನಲ್ಲೂ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.9 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ವರದಿಯಾಗಿದೆ. ಕಚ್‌ನಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಕೋಲಜಿ ಹೇಳಿದೆ.

Shwetha M