ಭೀಕರ ಭೂಕಂಪಕ್ಕೆ ಮಹಾ ಮಾರಣಹೋಮ – 5,000ಕ್ಕೂ ಅಧಿಕ ಮಂದಿ ಬಲಿ, ಎಲ್ಲೆಲ್ಲೂ ನೋವಿನ ಚೀತ್ಕಾರ

ಭೀಕರ ಭೂಕಂಪಕ್ಕೆ ಮಹಾ ಮಾರಣಹೋಮ – 5,000ಕ್ಕೂ ಅಧಿಕ ಮಂದಿ ಬಲಿ, ಎಲ್ಲೆಲ್ಲೂ ನೋವಿನ ಚೀತ್ಕಾರ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಮಹಾ ಮಾರಣ ಹೋಮವೇ ನಡೆದಿದೆ. ಇದುವರೆಗೆ 5,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಇನ್ನೂ ಕೆಲವು ಸಾವಿರ ಮಂದಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಯಾಕಂದ್ರೆ, ಅದೆಷ್ಟೋ ಮಂದಿ ಕುಸಿದುಬಿದ್ದ ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದಾರೆ. ಈ ಪೈಕಿ ಈಗಾಗ್ಲೇ ಕೆಲವರನ್ನ ರಕ್ಷಿಸಲಾಗಿದೆ. ಆದ್ರೆ, ತಜ್ಞರು ಹೇಳುವ ಪ್ರಕಾರ ಅವಶೇಷಗಳಡಿ ಸಿಲುಕಿದವರು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇದೆಯಂತೆ. ಯಾಕಂದ್ರೆ, ಟರ್ಕಿಯಲ್ಲಿ ಈಗ ವಿಪರೀತ ಚಳಿ ಕೂಡ ಇದೆ. ಚಳಿಯ ಹೊಡೆತದಿಂದಾಗಿ ಅವಶೇಷಗಳಡಿ ಸಿಲುಕಿದವರು ಬದುಕೋ ಸಾಧ್ಯತೆ ಕಡಿಮೆ ಅಂತಾ ತಜ್ಞರು ಹೇಳುತ್ತಿದ್ದಾರೆ. ಆದ್ರೆ, ರಕ್ಷಣಾ ಸಿಬ್ಬಂದಿ, ಜನ ಸಾಮಾನ್ಯರೆಲ್ಲಾ ಸೇರಿ ಅವಶೇಷಗಳಡಿ ಸಿಲುಕಿದವರ ಜೀವ ಉಳಿಸೋಕೆ ಶತಪ್ರಯತ್ನ ಮಾಡ್ತಿದ್ದಾರೆ. ಬರಿಗೈನಲ್ಲೇ ಅವಶೇಷಗಳನ್ನ ಸರಿಸಿ ತಮ್ಮವರಿಗಾಗಿ ಹುಡುಕಾಡುತ್ತಿದ್ದಾರೆ. ಪುಟ್ಟ ಪುಟ್ಟ ಕಂದಮ್ಮಗಳು, ಮಕ್ಕಳು ಅವಶೇಷಗಳಡಿ ಸಿಲುಕಿ ಒದ್ದಾಡ್ತಿವೆ. ಅವಶೇಷಗಳ ಅಡಿಯಿಂದ ಮಕ್ಕಳ ಆಕ್ರಂದನ ಕೇಳಿ ಬರ್ತಿದೆ. ಮಕ್ಕಳು ಮಾತ್ರವಲ್ಲ, ಮಹಿಳೆಯರು, ವೃದ್ಧರು ಕೂಡ ಅವಶೇಷಗಳಡಿ ಸಿಲುಕಿದ್ದಾರೆ. ಇನ್ನು ತಮ್ಮ ಕನಸಿನ ಸೂರು ಕುಸಿದು ಹಲವು ಕುಟುಂಬಗಳೇ ಅವಶೇಷಗಳಡಿಯಲ್ಲಿವೆ.

ಇದನ್ನೂ ಓದಿ:  40 ದಿನಗಳಿಂದಲೂ ‘ಹುಚ್ಚು ದೊರೆ’ ನಾಪತ್ತೆ – ಅನಾರೋಗ್ಯವೋ.. ಶಕ್ತಿಪ್ರದರ್ಶನದ ತಂತ್ರವೋ..!?

ಮನೆಯಲ್ಲಿದ್ದ ಅಷ್ಟೂ ಮಂದಿಯೂ ಸಾವನ್ನಪ್ಪಿರೋ ಪ್ರಕರಣಗಳು ಕೂಡ ಬೆಳಕಿಗೆ ಬರ್ತಿದೆ. ಅದೆಷ್ಟು ಕುಟುಂಬಗಳ ಕುಡಿಯೇ ನಾಶವಾಗಿವೆಯೋ ಗೊತ್ತಿಲ್ಲ. ಟರ್ಕಿ, ಸಿರಿಯಾದಲ್ಲಿನ ಒಂದೊಂದು ದೃಶ್ಯವೂ ಕರುಳು ಹಿಂಡುವಂತಿದೆ. ಮತ್ತೊಂದು ಪ್ರಮುಖ ಸಂಗತಿ ಏನಂದ್ರೆ, ರಕ್ಷಣಾ ಕಾರ್ಯ ಕೂಡ ಈಗ ದೊಡ್ಡ ಸವಾಲಾಗಿಬಿಟ್ಟಿದೆ. ಯಾಕಂದ್ರೆ, ಅವಶೇಷಗಳಡಿ ಎಷ್ಟು ಮಂದಿ ಸಿಲುಕಿದ್ದಾರೆ ಅನ್ನೋ ಅಂದಾಜು ಕೂಡ ಸಿಗ್ತಿಲ್ಲ. ಬುಲ್ಡೋಜರ್​​ಗಳ ಮೂಲಕ ಅವಶೇಷಗಳನ್ನ ಸರಿಸೋದು ಕೂಡ ಕಷ್ಟ. ಯಾಕಂದ್ರೆ, ಅವಶೇಷದ ಯಾವ ಭಾಗದಲ್ಲಿ ಬೇಕಾದ್ರೂ, ಜನರು ಸಿಲುಕಿರಬಹುದು. ಸಣ್ಣ ಮಕ್ಕಳಂತೂ ಅಷ್ಟು ಬೇಗನೆ ಕಣ್ಣಿಗೂ ಕಾಣಿಸೋದಿಲ್ಲ. ಜೆಸಿಬಿ ಸೇರಿದಂತೆ ಯಂತ್ರಗಳ ಬಳಕೆಗೆ ಮುಂದಾದ್ರೆ, ಅವಶೇಷಗಳಡಿ ಸಿಲುಕಿದವರ ದೇಹಕ್ಕೆ ಮತ್ತಷ್ಟು ಗಾಯಗಳಾಗುವ ಸಾಧ್ಯತೆ ಇದೆ. ಹೀಗಾಗಿ ಬರಿಗೈಯ್ಯಲ್ಲೇ ಅವಶೇಷಗಳನ್ನ ಬದಿಗೆ ಸರಿಸಿ ಹೆಚ್ಚಿನ ಹುಡುಕಾಟ ನಡೀತಿದೆ. ಇದ್ರಿಂದಾಗಿ ರಕ್ಷಣಾ ಕಾರ್ಯ ಕೂಡ ವಿಳಂಬವಾಗುತ್ತಿದೆ. ಇಷ್ಟು ಸಾಲದ್ದಕ್ಕೆ, ಟರ್ಕಿಯಲ್ಲಿ ಈಗ ಮೇಲಿಂದ ಮೇಲೆ ಭೂಮಿ ಕಂಪಿಸುತ್ತಲೇ ಇದೆ. ಈಗಾಗ್ಲೇ ಗಂಭೀರವಾಗಿರುವ ಗಾಯದ ಮೇಲೆ ಪದೇ ಪದೆ ಬರೆ ಬೀಳುತ್ತಲೇ ಇದೆ. ಭೂಕಂಪದ ತೀವ್ರತೆಗೆ ಏರ್​​ಪೋರ್ಟ್​ ಒಂದರ ರನ್​​ವೇ ಎರಡು ಭಾಗಗಳಾಗಿ ಒಡೆದು ಹೋಗಿದೆ.

suddiyaana