ತೈವಾನ್‌ನಲ್ಲಿ ಪ್ರಬಲ ಭೂಕಂಪ –  ಹಲವು ಕಟ್ಟಡಗಳು ನೆಲಸಮ, ಸುನಾಮಿ ಎಚ್ಚರಿಕೆ

ತೈವಾನ್‌ನಲ್ಲಿ ಪ್ರಬಲ ಭೂಕಂಪ –  ಹಲವು ಕಟ್ಟಡಗಳು ನೆಲಸಮ, ಸುನಾಮಿ ಎಚ್ಚರಿಕೆ

ತೈವಾನ್‌ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಬುಧವಾರ ಬೆಳ್ಳಂಬೆಳಗ್ಗೆ  ಪೂರ್ವದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಭೂಕಂಪನದ ಹಿನ್ನೆಲೆಯಲ್ಲಿ ಪೂರ್ವ ತೈವಾನ್ ಹಾಗೂ ಜಪಾನ್ ದಕ್ಷಿಣ ಭಾಗ, ಫಿಲಿಪೈನ್ಸ್‌ನ ಕೆಲವು ಭಾಗಗಳಿಗೆ ಸುನಾಮಿ ಅಲರ್ಟ್‌ ಘೋಷಿಸಲಾಗಿದೆ. ಸದ್ಯ ಭೂಕಂಪನದ ತೀವ್ರತೆಗೆ ಕಟ್ಟಡಗಳು ನೆಲಸಮವಾಗಿದೆ. ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಕಳೆದ 25 ವರ್ಷಗಳಲ್ಲೇ ಅತೀ ತೀವ್ರ ಪ್ರಮಾಣದ ಭೂಕಂಪನ ಇದಾಗಿದೆ ಎನ್ನಲಾಗ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ.

ಇದನ್ನೂ ಓದಿ: ತವರಿನಲ್ಲೇ ಆರ್​ಸಿಬಿಗೆ ಹೀನಾಯ ಸೋಲು – ಲಕ್ನೋ ಸೂಪರ್​ ಜೈಂಟ್ಸ್​ಗೆ 28 ರನ್‌ಗಳ ಸೂಪರ್‌ ಜಯ

ಸುನಾಮಿ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ತೀರ ಪ್ರದೇಶದಿಂದ ದೂರ ತೆರಳುವಂತೆ ಸೂಚಿಸಲಾಗಿದೆ. ಭೂಕಂಪದ ತೀವ್ರತೆಗೆ ಬೃಹತ್‌ ಗಾತ್ರದ ಕಟ್ಟಡಗಳು ನೆಲಕ್ಕೆ ಉರುಳಿದೆ. ತೈವಾನ್‌ನ ಹುವಾಲಿಯನ್ ಸಿಟಿಯಿಂದ ದಕ್ಷಿಣಕ್ಕೆ 18 ಕಿಲೋಮೀಟರ್ ದೂರದಲ್ಲಿ 34.8 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.

ಜಪಾನ್‌ನ ಹವಾಮಾನ ಸಂಸ್ಥೆಯು ಮಿಯಾಕೊಜಿಮಾ ದ್ವೀಪ ಸೇರಿದಂತೆ ಈ ಪ್ರದೇಶದಲ್ಲಿನ ದೂರದ ಜಪಾನಿನ ದ್ವೀಪಗಳಿಗೆ ಮೂರು ಮೀಟರ್‌ಗಳಷ್ಟು (10 ಅಡಿ) ಎತ್ತರದ ಸುನಾಮಿ ಅಲೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಕರಾವಳಿ ಪ್ರದೇಶಗಳಲ್ಲಿನ ಜನರು ಜಾಗರೂಕರಾಗಿರಬೇಕು. ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳಬಹುದು ಎಂದು ತೈವಾನ್‌ ತನ್ನ ಪ್ರಜೆಗಳಿಗೆ ಪಠ್ಯ ಸಂದೇಶವನ್ನು ಕಳುಹಿಸುವ ಮೂಲಕ ಎಚ್ಚರಿಕೆ ನೀಡಿದೆ.

Shwetha M