ಸಿಕ್ಕ ಸಿಕ್ಕವರ ಮೇಲೆ ‘ಹದ್ದು’ ದಾಳಿ – 20 ಮಂದಿಗೆ ಗಾಯ!

ಸಿಕ್ಕ ಸಿಕ್ಕವರ ಮೇಲೆ ‘ಹದ್ದು’ ದಾಳಿ – 20 ಮಂದಿಗೆ ಗಾಯ!

ತಿರುವನಂತಪುರ: ಮಾನವ, ಪ್ರಾಣಿ ಸಂಘರ್ಷದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿಂದೆ ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಜನವಸತಿ ಪ್ರದೇಶಗಳಿಗೂ ತೆರಳಿ ಪ್ರಾಣಿಗಳು  ಮನುಷ್ಯರ ಮೇಲೆ ದಾಳಿ ಮಾಡುತ್ತಿದೆ. ಆದರೆ ಕೇರಳದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಆನೆ, ಚಿರತೆ, ಬೀದಿ ನಾಯಿಗಳ ಬದಲಾಗಿ ಜನರ ಮೇಲೆ ಹದ್ದುಗಳು ದಾಳಿ ಮಾಡುತ್ತಿವೆಯಂತೆ!

ಕೇರಳದ ಅಡೂರಿನ ಚಾಲಾದಲ್ಲಿ ಹದ್ದುಗಳು ಜನರ ಮೇಲೆ ನಿರಂತವಾಗಿ ದಾಳಿ ಮಾಡುತ್ತಿದೆ. ಹದ್ದುಗಳ ಕಾಟದಿಂದಾಗಿ ಅಲ್ಲಿಯ ಜನರು ಹಗಲು ಹೊತ್ತು ಮನೆಯಿಂದ ಹೊರಬರಲಾರದ ಸ್ಥಿತಿ ಉಂಟಾಗಿದೆ. ಈಗಾಗಲೇ ಹದ್ದಿನ ದಾಳಿಯಿಂದ ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಅನೇಕರು ಆಸ್ಪತ್ರೆಗೆ ತೆರಳುವ ಅನಿವಾರ್ಯತೆ ಸಹ ಬಂದೊದಗಿದೆ.

ಇದನ್ನೂ ಓದಿ: ಕೇರಳದಲ್ಲಿ ಹೆಚ್ಚಿದ ಹಕ್ಕಿ ಜ್ವರದ ಆತಂಕ- ಕರ್ನಾಟಕದ ಗಡಿಭಾಗಗಳಲ್ಲಿ ಹೈಅಲರ್ಟ್

ಸ್ಥಳೀಯರು ಮನೆಯಿಂದ ಹೊರ ಬರುತ್ತಿದ್ದಂತೆ ಹದ್ದುಗಳು ರೆಕ್ಕೆ ಹಾಗೂ ಕೊಕ್ಕಿನಿಂದ ಗಾಯಗೊಳಿಸುತ್ತಿದೆ. ಇದರಿಂದ ಗ್ರಾಮದಲ್ಲಿ ಓಡಾಡಲು ಭಯವಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

ಈ ಬಗ್ಗೆ ಚಾಲಾದ ವಾರ್ಡ್ ಸದಸ್ಯೆ ದಿವ್ಯಾ ಅನೀಶ್ ಮಾತನಾಡಿದ್ದು, “ಬಹುತೇಕ ರೈತರಿರುವ ಈ ಗ್ರಾಮದಲ್ಲಿ ಸುಮಾರು 600 ಕುಟುಂಬಗಳು ವಾಸಿಸುತ್ತಿವೆ. ಸುಮಾರು ಎಂಟು ತಿಂಗಳ ಹಿಂದೆ ಮೊದಲ ದಾಳಿ ವರದಿಯಾಗಿತ್ತು. ನಾವು ಮೊದಲು ಇದು ಸಾಕಿದ ಹದ್ದು ಇರಬಹುದು ಅಂತ ಭಾವಿಸಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ನಾನು ಪ್ರತಿದಿನ ಕನಿಷ್ಠ 10 ದೂರುಗಳನ್ನು ಸ್ವೀಕರಿಸುತ್ತೇನೆ. ನಾವು ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ನಮಗೆ ಅದನ್ನು ಸೆರೆಹಿಡಿದು ಅವರಿಗೆ ಹಸ್ತಾಂತರಿಸಲು ಕೇಳಿದ್ದರು. ಹಾಗಾಗಿ ಈಗಾಗಲೇ ಎರಡು ಹದ್ದುಗಳನ್ನು ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದೇವೆ. ಹಳ್ಳಿಯಲ್ಲಿ ಇನ್ನೂ ಸುಮಾರು ಹತ್ತು ಹದ್ದುಗಳು ಹಾರಾಡುತ್ತಿವೆ. ಅವು ಮುಖ್ಯವಾಗಿ ಮಹಿಳೆಯರು, ಮಕ್ಕಳ ಹಾಗೂ ರೈತರ ಮೇಲೆ ದಾಳಿ ಮಾಡುತ್ತಿವೆ. ಪುರುಷರ ಮೇಲೆ ದಾಳಿ ಕಡಿಮೆ. ಈ ಸಮಸ್ಯೆಗೆ ತುರ್ತು ಪರಿಹಾರದ ಅಗತ್ಯವಿದೆ ಎಂದು ಹೇಳಿದ್ದಾರೆ.

“ಕಣ್ಣುಗಳಿಗಷ್ಟೇ ಗಾಯವಾಗದಿರುವುದು ನನ್ನ ಅದೃಷ್ಟ. ನಾನು ಅಡೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡೆ ಮತ್ತು ವೈದ್ಯರ ಸಲಹೆಯ ಮೇರೆಗೆ ಎರಡು ವಾರಗಳ ಕಾಲ ವಿಶ್ರಾಂತಿ ಪಡೆದಿದ್ದೇನೆ. ಈಗಲೂ ಹದ್ದುಗಳು ಗ್ರಾಮದ ಸುತ್ತ ಓಡಾಡುತ್ತಿವೆ. ಹಗಲಿನಲ್ಲಿ ನನ್ನ ಮನೆಯಿಂದ ಹೊರ ಬರಲು ಹೆದರುವಂತೆ ಆಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಮ್ಮ ರಕ್ಷಣೆಗೆ ಬರಬೇಕು” ಎಂದು 53 ವರ್ಷದ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ವಿಜಯಮ್ಮ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಹದ್ದುಗಳು ಬೆಳಿಗ್ಗೆ 6 ರಿಂದ ಸಂಜೆಯವರೆಗೆ ಆಕಾಶದಲ್ಲಿ ಹಾರಾಡುತ್ತಲೇ ಇರುತ್ತವೆ. ರೈತರು, ಕಾರ್ಮಿಕರು ಮುಖ್ಯವಾಗಿ ಅದರ ದಾಳಿಗೆ ಒಳಗಾಗಿದ್ದಾರೆ. ಅನೇಕರು ತಮ್ಮ ಪಕ್ಕದಲ್ಲಿ ಕೊಡೆಗಳು ಮತ್ತು ಕೋಲುಗಳನ್ನು ಇಟ್ಟುಕೊಂಡು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

suddiyaana