ದ್ಯಾಮೇಶನ ಲಾಲಿಗೆ ಕರುನಾಡು ಫಿದಾ.. ಸಿಂಪಥಿಗಿಂತ ಟ್ಯಾಲೆಂಟ್ ಗೇ ಇಲ್ಲಿ ಬೆಲೆ – ಕಾರಟಗಿ ಹೈದನಿಗೆ ಸರಿಗಮಪ ಕಿರೀಟ?

ಅಪ್ಪ ಅಮ್ಮ ಇಲ್ಲ.. ಈತನಿಗೆ ಸಂಗೀತವೇ ಎಲ್ಲ.. ಸಣ್ಣದ್ರಿಂದಲೇ ಅಜ್ಜಿ ಆಶ್ರಯದಲ್ಲಿ ಬೆಳೆದ ದ್ಯಾಮೇಶ್ ಈಗ ಕರುನಾಡಿನ ಮನೆಮಗ ಆಗಿದ್ದಾರೆ. ಜೀ ಕನ್ನಡ ವಾಹಿನಿ ಜನಪ್ರೀಯ ಶೋ ಸರಿಗಮಪ ಸೀಸನ್ 21 ರಲ್ಲಿ ತಮ್ಮ ಹಾಡಿನ ಮೂಲಕ ಜನಮನ ಗೆದ್ದಿದ್ದಾರೆ. ದ್ಯಾಮೇಶ್ ಸುಮುಧುರ ಕಂಠಕ್ಕೆ ಜಡ್ಜಸ್ ಮನಸೋತಿದ್ದಾರೆ. ಈ ವಾರದ ಸಂಚಿಕೆಯಲ್ಲಿ ದ್ಯಾಮೇಶ್ ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ ಎಂಬ ಹಾಡನ್ನ ಹಾಡಿದ್ದಾರೆ. ಕಾರಟಗಿ ಹಾಡನ್ನ ಕೇಳಿ ಶಿವಣ್ಣ ಫಿದಾ ಆಗಿದ್ದಾರೆ. ದ್ಯಾಮೇಶ್ ಧ್ವನಿಯನ್ನ ಹಾಡಿ ಹೊಗಳಿದ್ದಾರೆ.
ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ‘ಸರಿಗಮಪ’ ಕೂಡ ಒಂದು. ಈಗಾಗಲೇ ಕನ್ನಡ ಸಂಗೀತ ಲೋಕಕ್ಕೆ ಈ ಶೋನಿಂದಾಗಿ ಅನೇಕ ಗಾಯಕರು ಸಿಕ್ಕಿದ್ದಾರೆ. ಎಲೆಮರೆಕಾಯಿಯಂತಿದ್ದ ಪ್ರತಿಭೆಗಳನ್ನು ಕರೆತಂದು ಅವರಿಗೊಂದು ದೊಡ್ಡ ವೇದಿಕೆ ಕಲ್ಪಿಸಿಕೊಡುತ್ತಾ ಬಂದಿದೆ ಸರಿಗಮಪ. ಸದ್ಯ ಈ ಸೀಸನ್‌ನಲ್ಲಿ ಎಲ್ಲರ ಗಮನಸೆಳೆದಿರುವ ಪ್ರತಿಭೆ ಅಂದ್ರೆ ಅದು ದ್ಯಾಮೇಶ. ಹೌದು, ದ್ಯಾಮೇಶ ಯಾವುದೇ ಸಂಗೀತ ಶಾಲೆಯಲ್ಲಿ ಅಭ್ಯಾಸ ಮಾಡಿಲ್ಲ. ಹೂ ಮಾರ್ಕೊಂಡು ಜೀವನ ಮಾಡ್ತಿದ್ರು. ಸರಿಗಮಪ ಟೀಮ್ ದ್ಯಾಮೇಶನ ಟ್ಯಾಲೆಂಟ್ ಗುರುತಿಸಿ ವೇದಿಕೆಗೆ ಕತೆತಂದಿತ್ತು. ದ್ಯಾಮೇಶ್ ಕೂಡ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡಿದ್ದಾರೆ. ದ್ಯಾಮೇಶ್ ಗಾಯನಕ್ಕೆ ಮರುಳಾಗದವರಿಲ್ಲ. ದಿನದಿಂದ ದಿನಕ್ಕೆ ದ್ಯಾಮೇಶ್ ತಮ್ಮ ಗಾಯನದ ಮೂಲಕ ಎಲ್ಲರ ಮನಸ್ಸು ಗೆಲ್ತಿದ್ದಾರೆ. ಈ ವಾರದ ಸಂಚಿಕೆಯಲ್ಲಿ ದ್ಯಾಮೇಶ್ ಸುಮಾರು 28 ವರ್ಷಗಳ ಹಿಂದಿನ ಹಾಡನ್ನ ಹಾಡಿ ಎಲ್ಲರ ಮನಗೆದ್ದಿದ್ದಾರೆ.
ಹೌದು, ದ್ಯಾಮೇಶ್ 1997 ರಲ್ಲಿ ತೆರೆಕಂಡ ಜೋಡಿ ಹಕ್ಕಿ ಸಿನಿಮಾದ ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ ಹಾಡನ್ನ ಹಾಡಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಾಯಕನಾಗಿ, ನಟಿ ಚಾರುಲತಾ ಹಾಗೂ ನಟಿ ವಿಜಯಲಕ್ಷ್ಮೀ ಲೀಡ್ ರೋಲ್‌ನಲ್ಲಿ ನಟಿಸಿದ್ರು. ಸುಮಾರು 28 ವರ್ಷಗಳ ಹಿಂದೆ ರಿಲೀಸ್ ಆದ ಎವರ್‌ಗ್ರೀನ್ ಹಾಡಿನ ಸಾಹಿತ್ಯವನ್ನ ವಿ ಮನೋಹರ್ ಬರೆದಿದ್ದು, ಎಲ್‌ಎನ್ ಶಾಸ್ತ್ರಿ ಹಾಡಿದ್ರು. ಇದೀಗ ಇದೇ ಹಾಡನ್ನ ಹಳ್ಳಿ ಪ್ರತಿಭೆ ದ್ಯಾಮೇಶ್ ರೀ ಕ್ರಿಯೇಟ್ ಮಾಡಿದ್ದಾರೆ. 28 ವರ್ಷದ ಹಿಂದಿನ ಹಾಡಾದ್ರೂ ಇಂದಿಗೂ ಈ ಹಾಡಿನ ಕ್ರೇಜ್ ಕಡಿಮೆ ಆಗಿಲ್ಲ. ಮತ್ತೆ ಮತ್ತೆ ಕೇಳ್ಬೇಕು ಅನ್ನೋತರ ಸಾಹಿತ್ಯ ಬರ್ದಿದ್ದಾರೆ. ಇದೀಗ ಹಾಡನ್ನ ದ್ಯಾಮೇಶ್ ಸರಿಗಮಪ ವೇದಿಕೆ ಮೇಲೆ ಹಾಡಿದ್ರು. ದ್ಯಾಮೇಶ್ ಸುಮಧುರ ಕಂಠಕ್ಕೆ ಹ್ಯಾಟ್ರಿಕ್ ಹಿರೋ ಫುಲ್ ಫಿದಾ ಆಗಿದ್ದಾರೆ. ನೀವು ಹೂ ಮಾರ್ತಿದ್ದೀರಂತೆ.. ನಿಮ್ಮ ವಾಯ್ಸ್ ಕೂಡ ಹೂ ತರ ಇದೆ ಅಂತಾ ಹಾಡಿ ಹೊಗಳಿದ್ದಾರೆ.
ಸ್ನೇಹಿತರೇ.. ದ್ಯಾಮೇಶ್ ಹಳ್ಳಿ ಪ್ರತಿಭೆ.. ಕಿತ್ತು ತಿನ್ನೋ ಬಡತನ.. ತನ್ನವರು ಯಾರು ಇಲ್ಲ.. ತನ್ನಿಂದ ಏನೋ ಸಾಧ್ಯ ಇಲ್ಲ ಅಂತಾ ಕೈಕಟ್ಟಿ ಕುಳಿತಿಲ್ಲ.. ಇದೆಲ್ಲಾ ಕಾರಣ ಇಟ್ಕೊಂಡು ಸಿಂಪತಿ ಗಿಟ್ಟಿಸ್ಕೊಂಡಿಲ್ಲ.. ತನ್ನ ಪ್ರತಿಭೆಯಿಂದಲೇ ಈಗ ಕರ್ನಾಟಕದ ಜನರ ಮನಗೆದ್ದಿದ್ದಾರೆ. ತನ್ನ ಮಧುರ ಕಂಠದಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸರಿಗಮಪ ವೇದಿಕೆಯಲ್ಲಿ ಗುರುತಿಸಿಕೊಂಡ ಹಳ್ಳಿ ಹೈದನಿಗೆ ಈಗ ಒಂದೊಂದೇ ಅವಕಾಶಗಳು ಹುಡುಕಿಕೊಂಡು ಬರ್ತಿದೆ. ಅರ್ಜುನ್ ಜನ್ಯ ಕೂಡ ದ್ಯಾಮೇಶ್ ಹಾಡಿಗೆ ಫಿದಾ ಆಗಿದ್ದಾರೆ. ಈ ಹಿಂದೆ ತನ್ನ ಸಿನಿಮಾದಲ್ಲಿ ಚಾನ್ಸ್ ಕೊಡೋದಾಗಿ ಹೇಳಿದ್ರು. ಅದಕ್ಕೂ ಮುನ್ನ ಕಿಚ್ಚ ಸುದೀಪ್ ಕೂಡ ದ್ಯಾಮೇಶ್ ಹಾಡಿಗೆ ಮನಸೋತಿದ್ರು.. ಅನುಶ್ರೀ ದ್ಯಾಮೇಶನಿಗೆ ಒಂದು ಅಪ್ಪುಗೆ ಕೊಡಿ ಅಂದಾಗ ಹಗ್ ಯಾಕೆ.. ಸಿನಿಮಾನೇ ಕೊಟ್ಟು ಬಿಡ್ತೀನಿ.. ಅರ್ಜುನ್ ಜನ್ಯ ಸಂಗೀತದಲ್ಲಿ ಪಾದಾರ್ಪಣೆ ಮಾಡ್ತೀರಿ.. ಅಂತಾ ಬಾದ್ ಶಾ ಹೇಳಿದ್ರು. ಇದೀಗ ಕಷ್ಟದ ಹಾದಿಯಲ್ಲಿ ಬೆಳೆದು ಬಂದ ದ್ಯಾಮೇಶ್ ಗೆ ಒಂದೊಳ್ಳೆಯ ವೇದಿಕೆ ಸಿಕ್ಕಿದೆ. ಸರಿಗಮಪ ಶೋನಿಂದ ಒಳ್ಳೆಯ ಅವಕಾಶ ದ್ಯಾಮೇಶ್ ನ ಹುಡುಕಿಕೊಂಡು ಬಂದಿದೆ. ಹಳ್ಳಿ ಪ್ರತಿಭೆಗೆ ಇನ್ನೂ ಉತ್ತಮ ಅವಕಾಶಗಳು ಸಿಗ್ಲಿ. ತನ್ನ ಕಂಠದ ಮೂಲಕ ಇನ್ನಷ್ಟು ಯಶಸ್ಸು ಕಾಣ್ಲಿ ಅನ್ನೋದೇ ನಮ್ಮ ಆಶಯ.