ಕಾಂಗ್ರೆಸ್ ಪರ ದಚ್ಚು ಪ್ರಚಾರ ಮಾಡಿದ್ದು ಯಾಕೆ? – ದರ್ಶನ್ ನಡೆ ಹಿಂದೆ ಸುಮಲತಾ ಗೇಮ್ ಪ್ಲ್ಯಾನ್?
ದಚ್ಚು ಕ್ಯಾಂಪೇನ್.. ಸುಮಲತಾ ಸೈಲೆಂಟ್!

ಕಾಂಗ್ರೆಸ್ ಪರ ದಚ್ಚು ಪ್ರಚಾರ ಮಾಡಿದ್ದು ಯಾಕೆ? – ದರ್ಶನ್ ನಡೆ ಹಿಂದೆ ಸುಮಲತಾ ಗೇಮ್ ಪ್ಲ್ಯಾನ್?ದಚ್ಚು ಕ್ಯಾಂಪೇನ್.. ಸುಮಲತಾ ಸೈಲೆಂಟ್!

ಕಡೇ ಕ್ಷಣದವರೆಗೂ ಕ್ಯೂರಿಯಾಸಿಟಿ ಹುಟ್ಟಿಸಿ ಮಂಡ್ಯ ಅಖಾಡವನ್ನ ಹೆಚ್.ಡಿ ಕುಮಾರಸ್ವಾಮಿಗೆ ಬಿಟ್ಟುಕೊಟ್ಟು ಸುಮಲತಾ ಅಂಬರೀಶ್ ಬಿಜೆಪಿಗೆ ಸೇರ್ಪಡೆಯಾಗಿದ್ರು. ಇನ್ನೇನು ಸುಮಕ್ಕ ಕುಮಾರಣ್ಣನ ಪರ ಪ್ರಚಾರಕ್ಕೆ ಬರ್ತಾರೆ. ಮಗ ಸೋತ ನೆಲದಲ್ಲಿ ಗೆದ್ದು ಹೆಚ್​ಡಿಕೆ ಸೇಡು ತೀರಿಸಿಕೊಳ್ತಾರೆ ಅಂತಾನೇ ಎಲ್ರೂ ಅಂದುಕೊಳ್ತಿದ್ರು. ಆದ್ರೆ ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಗೇ ಮಂಡ್ಯ ರಣಕಣದಲ್ಲಿ ಬೇರೆಯದ್ದೇ ಲೆಕ್ಕಾಚಾರ ನಡೀತಿದೆ. ಸುಮಲತಾ ಅವ್ರ ಮಾನಸ ಪುತ್ರ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರವೇ ಪ್ರಚಾರಕ್ಕೆ ಇಳಿದಿದ್ದಾರೆ. ಸುಮಲತಾ ಅವ್ರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿಗೆ ಬೆಂಬಲ ಘೋಷಣೆ ಮಾಡಿದ್ರೂ ಕೂಡ ದರ್ಶನ್ ಕಾಂಗ್ರೆಸ್ ಪರ ಮತಬೇಟೆಗೆ ಇಳಿದಿರೋದೇ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಆದ್ರೆ ದರ್ಶನ್ ರ ಈ ನಡೆ ಹಿಂದೆ ಬೇರೆಯದ್ದೇ ಗೇಮ್ ನಡೀತಿರೋದು ಸ್ಪಷ್ಟವಾಗ್ತಿದೆ.

ಇದನ್ನೂ ಓದಿ:ಮಕ್ಕಳ ಭವಿಷ್ಯಕ್ಕಾಗಿ ಒಂದಾದ HDK & ಸುಮಲತಾ – ಮಂಡ್ಯ ಗೆಲ್ಲಲು ‘ಕೈ’ ಪಡೆ ಮಹಾಗೇಮ್

ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌ ಅವರು ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ಹಲಗೂರಿನಲ್ಲಿ ಪ್ರಚಾರ ನಡೆಸಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗಿರುವ ಸಂಸದೆ ಸುಮಲತಾರನ್ನು ಅಮ್ಮಾ ಅಂತಲೇ ಕರೆಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರಕ್ಕಿಳಿದಿರುವುದು ಕುತೂಹಲ ಕೆರಳಿಸಿದೆ. 2019ರಲ್ಲಿ ಸುಮಲತಾ ಅಂಬರೀಷ್ ಪರ ಚುನಾವಣಾ ಪ್ರಚಾರ ನಡೆಸಿದ್ದ ದರ್ಶನ್, ಇದೀಗ ಸುಮಲತಾರ ಮಿತ್ರಪಕ್ಷದ ಅಭ್ಯರ್ಥಿ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್​​ನ ಸ್ಟಾರ್ ಚಂದ್ರು ಪರ ಮತಯಾಚನೆ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ​ ಪ್ರಚಾರ ನಡೆಸಿ ಮತಯಾಚಿಸಿದ ದರ್ಶನ್, ನಾನು ಪಕ್ಷದ ಪರ ಬಂದಿಲ್ಲ, ಅಭ್ಯರ್ಥಿ ಪರವಾಗಿ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಮತ ಹಾಕಿ. ನರೇಂದ್ರಸ್ವಾಮಿ, ಉದಯ್​ರನ್ನ ಬಲಪಡಿಸಿ ಎಂದು ಮನವಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ರೆಬೆಲ್ ಸ್ಟಾರ್ ಅಂಬರೀಶ್​ ಅವ್ರಿಗೆ ತುಂಬಾನೇ ಫ್ಯಾನ್ಸ್ ಇದ್ದಾರೆ. ಕಳೆದ ಬಾರಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲೋದಿಕ್ಕೆ ಈ ಅಭಿಮಾನಿಗಳೇ ಕಾರಣರಾಗಿದ್ರು. ಅಂಬರೀಶ್​ರನ್ನ ಬಿಟ್ರೆ ಮಂಡ್ಯದಲ್ಲಿ ದರ್ಶನ್ ಗೂ ತುಂಬಾನೇ ಫ್ಯಾನ್ಸ್ ಇದ್ದಾರೆ. ಆದ್ರೀಗ ಅದೇ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ಧುಮುಕಿದ್ದಾರೆ. ಗುರುವಾರ ಮಳವಳ್ಳಿಯ ಹಲಗೂರುನಲ್ಲಿ ಸ್ಥಳೀಯ ಶಾಸಕ ನರೇಂದ್ರ ಸ್ವಾಮಿ ಮತ್ತು ಮದ್ದೂರು ಶಾಸಕ ಕದಲೂರು ಉದಯ್ ಜೊತೆ ಮತಶಿಕಾರಿ ನಡೆಸಿದ್ರು. ಆದ್ರಿಲ್ಲಿ ಸುಮಲತಾರ ಹಿರಿಮಗ ಅಂತಾನೇ ಕರೆಸಿಕೊಳ್ಳೋ ದರ್ಶನ್ ಚಂದ್ರು ಪರ ಕಣಕ್ಕಿಳಿದಿದ್ರೂ ಸುಮಲತಾ ಮಾತ್ರ ಸೈಲೆಂಟ್ ಆಗೇ ಕ್ಷೇತ್ರದಿಂದ ದೂರ ಉಳಿದಿದ್ದಾರೆ.

2019ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಪರ ಚುನಾವಣೆ ಪ್ರಚಾರ ನಡೆಸಿದವರಲ್ಲಿ ಮೊದಲಿಗರಾಗಿ ಕಂಡುಬಂದಿದ್ದೇ ದರ್ಶನ್ ಹಾಗೂ ಯಶ್. ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರು ಸುಮಲತಾ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಸುಮಲತಾ ಅಂಬರೀಷ್ ಅವರನ್ನು ಅಮ್ಮಾ ಎಂದೇ ಕರೆಯುವ, ದರ್ಶನ್ ಅವರು ಏನು ಹೇಳಿದರೂ ಮಾಡುವೆ ಎನ್ನುತ್ತಿದ್ದ ದರ್ಶನ್ ಇದೀಗ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್​ಡಿ ಕುಮಾರಸ್ವಾಮಿಯವರ ಎದುರಾಳಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಸೇರ್ಪಡೆಯಾಗಿ ಹಲವು ದಿನಗಳು ಕಳೆದರೂ ಸುಮಲತಾ ಮಂಡ್ಯದಲ್ಲಿ ಪ್ರಚಾರ ನಡೆಸದೇ ಇರುವುದು, ಇದೀಗ ದರ್ಶನ್ ‘ಕೈ’ ಅಭ್ಯರ್ಥಿ ಪರ ಪ್ರಚಾರಕ್ಕಿಳಿದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರ ಸುಮಲತಾ ಚುನಾವಣಾ ಪ್ರಚಾರ ನಡೆಸಿದ್ದಾರೆ. ಆದರೆ, ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಇನ್ನೂ ಪ್ರಚಾರಕ್ಕೆ ಇಳಿದಿಲ್ಲ.  ಬಿಜೆಪಿಯ ರಾಜ್ಯ, ಕೇಂದ್ರ ನಾಯಕರು ಹೇಳಿದರೆ ಮಾತ್ರ ಕುಮಾರಸ್ವಾಮಿಯವೆ ಪರ ಪ್ರಚಾರ ಮಾಡುವುದಾಗಿ ಹೇಳಿದ್ದರು. ಆದರೆ ಈವರೆಗೂ ಪ್ರಚಾರಕ್ಕಿಳಿಯದೆ ಮೌನದಲ್ಲಿದ್ದಾರೆ. ಇದರ ಬೆನ್ನಲ್ಲೇ, ಅವರ ಮಾನಸ ಪತ್ರ ದರ್ಶನ್ ಮೈತ್ರಿ ಅಭ್ಯರ್ಥಿಯ ಎದುರಾಳಿ ಸ್ಟಾರ್ ಚಂದ್ರು ಪರ ಮತಯಾಚನೆ ಮಾಡಿರೋದು ತೀವ್ರ ಸಂಚಲನ ಸೃಷ್ಟಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಂತೆ ಈ ಬಾರಿಯ ಲೋಕಸಭಾ ಅಖಾಡದಲ್ಲೂ ಮಂಡ್ಯದಲ್ಲಿ ದಳಪತಿಗಳನ್ನು ಕಟ್ಟಿ ಹಾಕಬೇಕೆಂದು ಕಾಂಗ್ರೆಸ್ ನಾಯಕರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಮಂಡ್ಯ ರಣಕಣಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್​ರನ್ನೇ ಕರೆತಂದಿದ್ದಾರೆ. ಇದು ಹೆಚ್​ಡಿಕೆಗೆ ಹೇಗೆ ಎಫೆಕ್ಟ್ ಆಗುತ್ತೆ ಅನ್ನೋದನ್ನ ಕಾದು ನೋಡ್ಬೇಕು.

Sulekha