ಈ ಬಾರಿಯ ದಸರಾ ವಿದ್ಯುತ್ ದೀಪಾಲಂಕಾರದಲ್ಲಿ ಝಗಮಗಿಸಲಿದೆ ಚಂದ್ರಯಾನ, ಕಾಂಗ್ರೆಸ್‌ನ 5 ಗ್ಯಾರಂಟಿ!
ಮೈಸೂರು: ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರು ಮದುವಣ ಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ನಾಡಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ವಿದ್ಯುತ್ ದೀಪಾಲಂಕಾರ ಕೂಡ ಒಂದು. ಈ ಬಾರಿಯೂ ಸಾಂಸ್ಕೃತಿಕ ನಗರಿ ವಿದ್ಯುತ್ ದೀಪಗಳಿಂದ ಝಗಮಗಿಸಲಿದೆ. ಅಲ್ಲದೇ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳೊಂದಿಗೆ ಚಂದ್ರಯಾನ ಅನಾವರಣಗೊಳ್ಳಲಿವೆ.
ಮೈಸೂರು ದಸರಾದ ಸಂದರ್ಭದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲು ಈಗಾಗಲೇ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಈ ಬಾರಿಯ ದಸರಾದಲ್ಲಿ ನಗರದ ಪ್ರಮುಖ ಆಯ್ದ ಸ್ಥಳಗಳಲ್ಲಿ ಚಂದ್ರಯಾನ, ಯುನೆಸ್ಕೋ ಗುರುತಿಸಿರುವ ಸೋಮನಾಥಪುರ ದೇವಸ್ಥಾನ ಮಾದರಿ, ಜಂಬೂ ಸವಾರಿ ಮೆರವಣಿಗೆ, ಚಾಮುಂಡೇಶ್ವರಿ ಸೇರಿದಂತೆ ನಾನಾ ಕಲಾಕೃತಿ ಹಾಗೂ ಕಾಂಗ್ರೆಸ್‌ನ 5 ಗ್ಯಾರಂಟಿಗಳನ್ನು ಬಿಂಬಿಸುವ ಮಾದರಿಯಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಲಾಗಿದೆ. ಇಸ್ರೋದ ಚಂದ್ರಯಾನ, ಯುನೆಸ್ಕೋದಿಂದ ಗುರುತಿಸಿರುವ ಸೋಮನಾಥಪುರದ ಸೋಮನಾಥೇಶ್ವರ ದೇವಸ್ಥಾನದ ಮಾದರಿಗಳನ್ನು ನಿರ್ಮಿಸುತ್ತಿರುವುದು ಈ ಬಾರಿಯ ವಿಶೇಷ.
ಇದನ್ನೂ ಓದಿ: ಬರದ ಹಿನ್ನೆಲೆ ಸಿಂಪಲ್ ದಸರಾ ಆಚರಣೆ – ನಾಡಹಬ್ಬಕ್ಕೆ 18 ಕೋಟಿ ರೂ. ಅನುದಾನ
ಅ. 15ರಿಂದ 24ರವರೆಗೆ ನಡೆಯುವ ನವರಾತ್ರಿ ವೇಳೆ ದೀಪಾಲಂಕಾರದಿಂದ ಮೈಸೂರು ಕಂಗೊಳಿಸಲಿದೆ. ಕಳೆದ ಬಾರಿ ದೀಪಾಲಂಕಾರದ ವೀಕ್ಷಣೆ ಅವಧಿಯನ್ನು ಪ್ರವಾಸಿಗರ ಕೋರಿಕೆ ಮೇರೆಗೆ ವಿಸ್ತರಿಸಲಾಗಿತ್ತು. ಈ ಬಾರಿಯೂ ವೀಕ್ಷಣೆಯ ಅವಧಿಯನ್ನು ವಿಸ್ತರಿಸಲು ಸೆಸ್ಕ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. .
ನಗರದ ಪ್ರಮುಖ ರಸ್ತೆಗಳ ಅರಮನೆ ಸುತ್ತ ಸೇರಿದಂತೆ ಸಯ್ಯಾಜಿರಾವ್ ರಸ್ತೆ, ಬಿಎನ್ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ಹೊರ ವಲಯದಲ್ಲಿನ ಪ್ರಮುಖ ಹೆದ್ದಾರಿಗಳನ್ನು ಸೇರಿಸಿಕೊಂಡು 135 ಕಿ.ಮೀ. ಉದ್ದದ ರಸ್ತೆಗೆ ದೀಪಾಲಂಕಾರ ಮಾಡಲಾಗುತ್ತಿದೆ. ಜತೆಗೆ ನಗರ ವ್ಯಾಪ್ತಿಯಲ್ಲಿರುವ ಪ್ರಮುಖ 119 ವೃತ್ತಗಳಲ್ಲಿದೀಪಾಲಂಕಾರ ಮಾಡಲಾಗುತ್ತಿದೆ. ನಗರದ ದೊಡ್ಡಕೆರೆ ಮೈದಾನ, ಕೆ.ಆರ್.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ(ಹಾರ್ಡಿಂಜ್), ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್, ಎಲ್‌ಐಸಿ ವೃತ್ತ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಗಳಿಂದಲೇ ಮಾಡಿರುವ 30ಕ್ಕೂ ಹೆಚ್ಚು ಆಕೃತಿಗಳನ್ನು ನಿರ್ಮಿಸಲಾಗುತ್ತಿದೆ.
ಇನ್ನು ಮೈಸೂರು ನಗರದ ಪ್ರಮುಖ ರಸ್ತೆಗಳೊಂದಿಗೆ ವೃತ್ತಗಳು ವಿದ್ಯುದೀಪಗಳಿಂದ ಝಗಮಗಿಸುವುದರೊಂದಿಗೆ ಸರಕಾರಿ ಕಟ್ಟಡಗಳು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಮಿಂಚಿ ಮಿನುಗಲಿವೆ. ಹೊಸ ಹಾಗೂ ಹಳೆ ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ, ಮೈಸೂರು ವಿವಿಯ ಕ್ರಾಫರ್ಡ್ ಭವನ, ಮುಡಾ, ಕಾಡಾ ಕಚೇರಿ, ಕೆ.ಆರ್.ಆಸ್ಪತ್ರೆ, ರೈಲು ನಿಲ್ದಾಣ, ಮಹಾರಾಜ ಕಾಲೇಜು ಸೇರಿದಂತೆ ಹಲವು ಸರಕಾರಿ ಕಟ್ಟಡಗಳೂ ದೀಪಾಲಂಕಾರದಿಂದ ಕಂಗೊಳಿಸಲಿವೆ.
ದಸರಾ ಮಹೋತ್ಸವದ ವೇಳೆ ದೀಪಾಲಂಕಾರಕ್ಕಾಗಿ ಸೆಸ್ಕ್‌ನಿಂದ ಒಟ್ಟು 6.03 ಕೋಟಿ ರೂ.ಗಳ ಟೆಂಡರ್ ಪಕ್ರಿಯೆ ನಡೆಸಲಾಗಿದ್ದು, ಗುತ್ತಿಗೆದಾರರು ಯಾರೂ ಮುಂದೆ ಬಾರದೆ ಇರುವುದರಿಂದ ತುಂಡು ಗುತ್ತಿಗೆ ಮೂಲಕ ದೀಪಾಲಂಕಾರ ವ್ಯವಸ್ಥೆಯನ್ನು ನಡೆಸಲು ಅಧಿಕಾರಿಗಳು ಚಿಂತನೆ ಮಾಡುತ್ತಿದ್ದಾರೆ. ಸರಕಾರದಿಂದ ಅನುಮತಿ ಸಿಕ್ಕ ಕೂಡಲೇ ಎಲ್ಲಾದೀಪಾಲಂಕಾರ ವ್ಯವಸ್ಥೆಗೆ ಚಾಲನೆ ಸಿಗಲಿದೆ ಎನ್ನುತ್ತಾರೆ ಸೆಸ್ಕ್ ಅಧಿಕಾರಿಗಳು.