ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಸಗಣಿಯಿಂದ ತಯಾರಾದ ಪೇಂಟ್ ಬಳಸಿ – ಛತ್ತೀಸ್‌ಗಡ್ ಸರ್ಕಾರ ಆದೇಶ
ಛತ್ತೀಸ್‌ಗಡ್: ತಟ್ಟಿದರೆ ಬೆರಣಿ, ಸುಟ್ಟರೆ ವಿಭೂತಿಯಾಗುತ್ತದೆ ಸಗಣಿ. ಗೋವಿನ ಸಗಣಿಯಿಂದ ಅನೇಕ ಪ್ರಯೋಜನಗಳಿವೆ. ಈಗ ಇದೇ ಸಗಣಿಯಿಂದ ಸಾವಯವ ಪೇಂಟ್ ಕೂಡಾ ತಯಾರಾಗುತ್ತಿದೆ. ಸಗಣಿಯಿಂದ ತಯಾರಿಸಲಾಗಿರುವ ಪೇಂಟ್‌ನ್ನ ಕಟ್ಟಡಗಳಿಗೂ ಬಳಸಲಾಗುತ್ತಿದೆ. ಇದೀಗ ಗೋವುಗಳ ಸಗಣಿಯಿಂದ ತಯಾರಿಸಲಾದ ಸಾವಯವ ಬಣ್ಣವನ್ನು ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಬಳಸಲು ಛತ್ತೀಸ್‌ಗಢ ಸರ್ಕಾರ ಮುಂದಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಸಗಣಿಯಿಂದ ತಯಾರಾದ ಪೇಂಟ್ ಬಳಿಯುವಂತೆ ಛತ್ತೀಸ್‌ಗಡ್ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಮೃತದೇಹದ ಮೇಲಿತ್ತು ಗಾಯದ ಗುರುತು – ಮತ್ತೊಂದು ಗಂಭೀರ ಆರೋಪ
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಸೂಚನೆ ಮೇರೆಗೆ ರಾಜ್ಯದ ಕೃಷಿ ಇಲಾಖೆಯು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳಿಗೆ ಗೋಶಾಲೆಗಳಲ್ಲಿ ಪೇಂಟ್ ಉತ್ಪಾದನಾ ಘಟಕಗಳ ಸ್ಥಾಪನೆಯನ್ನು ವೇಗಗೊಳಿಸಲು ನಿರ್ದೇಶನ ನೀಡಲಾಗಿದೆ. ಅಲ್ಲದೇ ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ರಾಸಾಯನಿಕ ಬದಲಿಗೆ ಸೆಗಣಿಯಿಂದ ತಯಾರಿಸಿದ ಬಣ್ಣ ಬಳಿಯಲು ಸೂಚಿಸಲಾಗಿದೆ.
ಗೋ ಸಗಣಿಯಿಂದ ಪೇಂಟ್ ತಯಾರಿಸುವುದಕ್ಕಾಗಿ ರಾಯ್‌ಪುರ ಮತ್ತು ಕಾಂಕೇರ್‌ನಲ್ಲಿನ ಗೋಶಾಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಿದೆ. 2023ರ ಜನವರಿ ಅಂತ್ಯದ ವೇಳೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಾವಯವ ಪೇಂಟ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲಿದೆ. ಸಾವಯವ ಪೇಂಟ್ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರ ನಿಗ್ರಹ ಅಂಶಗಳನ್ನು ಒಳಗೊಂಡಿವೆ. ನೈಸರ್ಗಿಕ ಪೇಂಟ್‌ನ ಬಳಕೆಯು ಪರಿಸರ ಸ್ನೇಹಿ ಮಾತ್ರವಲ್ಲ. ಗೋಶಾಲೆಗಳಲ್ಲಿನ ಘಟಕಗಳಲ್ಲಿ ಸ್ಥಳೀಯ ಮಹಿಳೆಯರು ಕಾರ್ಯನಿರ್ವಹಿಸುವುದರಿಂದ ಗ್ರಾಮೀಣ ಆರ್ಥಿಕತೆ ಬಲಪಡಿಸಲು ಸಹಕಾರಿಯಾಗಲಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಸೂರಜಿ ಗಾಂವ್ ಯೋಜನೆಯ ಭಾಗವಾಗಿ 2 ವರ್ಷಗಳ ಹಿಂದೆ ಗೋಧನ್ ನ್ಯಾಯ್ ಯೋಜನೆಗೆ ಚಾಲನೆ ನೀಡಲಾಗಿತ್ತು. ಇದರ ಅಡಿಯಲ್ಲಿ 8,000 ಕ್ಕೂ ಹೆಚ್ಚು ಗೋಶಾಲೆಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಗೋವುಗಳ ಸಗಣಿ ಪ್ರತಿ ಕೆಜಿಗೆ 2 ರೂ. ಹಾಗೂ ಮೂತ್ರಕ್ಕೆ ಪ್ರತಿ ಪ್ರತಿ ಲೀಟರ್‌ಗೆ 4 ರೂ.ನಿಗದಿಪಡಿಸಲಾಗಿದೆ.