ಹಗಲಿನಲ್ಲಿ ಹೊಳೆಯುವ ಬೀಚ್‌ನಲ್ಲಿ ರಾತ್ರಿಯಾದ್ರೆ ಆತ್ಮಗಳ ಓಡಾಟ – ಡುಮಾಸ್ ಬೀಚ್‌ ಭಯಾನಕ ಅನುಭವ

ಹಗಲಿನಲ್ಲಿ ಹೊಳೆಯುವ ಬೀಚ್‌ನಲ್ಲಿ ರಾತ್ರಿಯಾದ್ರೆ ಆತ್ಮಗಳ ಓಡಾಟ – ಡುಮಾಸ್ ಬೀಚ್‌ ಭಯಾನಕ ಅನುಭವ

ಹಲವು ಸ್ಥಳಗಳು ತಮ್ಮ ಸೌಂದರ್ಯದಿಂದ  ಪ್ರಸಿದ್ಧವಾದರೆ, ಇನ್ನು ಕೆಲವು ತಮ್ಮ ರಹಸ್ಯಗಳಿಂದ ನಮ್ಮನ್ನು ಸೆಳೆಯುತ್ತೆ. ಕುತೂಹಲದ ಕಣ್ಣಿನಿಂದ ನೋಡುವಂತೆ ಮಾಡುತ್ತೆ.. ನಾನು ಈ ಹೇಳುವುದ್ದಕ್ಕೆ ಹೊರಟಿರುವುದ್ದನ್ನೇ ಹಗಲಲ್ಲಿ ಸುಂದರ ಕಡಲತೀರ ರಾತ್ರಿಯಾದ್ರೆ ನಿಗೂಢ ತಾಣವಾಗುತ್ತೆ..  ಕತ್ತಾಲಾಗುತ್ತಿದ್ದಂತೆ ಕರಾಳ ಕಥೆಗಳು ಮತ್ತು ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುತ್ತೆ.

ಇದು ಡುಮಾಸ್ ಬೀಚ್..  ಗುಜರಾತಿನ ಸುಂದರ ನಗರವಾದ ಸೂರತ್‌ಗೆ ಕೇವಲ 21 ಕಿಲೋಮೀಟರ್ ದೂರದಲ್ಲಿದೆ.  ಇದು ಹಗಲಿನಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಸುಂದರ ಕಡಲತೀರ. ಆದರೆ, ಸೂರ್ಯಾಸ್ತದ ನಂತರ ಇಲ್ಲಿನ ವಾತಾವರಣ ಸಂಪೂರ್ಣವಾಗಿ ಬದಲಾಗುತ್ತದೆ. ಪ್ರತಿಯೊಂದು ಮರಳಿನ ಕಣದಲ್ಲೂ ಒಂದು ರಹಸ್ಯ ಅಡಗಿದೆ ಎನ್ನುವಂತೆ, ಈ ಕಪ್ಪು ಮರಳಿನ ಕಡಲತೀರವು ಭಾರತದ ಅತ್ಯಂತ ನಿಗೂಢ ತಾಣಗಳಲ್ಲಿ ಒಂದೆಂದು ಪ್ರಸಿದ್ಧಿ ಪಡೆದಿದೆ. ಇಲ್ಲಿ ರಾತ್ರಿಯಾದ್ರೂ ಯಾರು ಕೂಡ ಓಡಾಡುವುದಿಲ್ಲ.. ಡುಮಾಸ್ ಬೀಚ್ ಭಯಾನಕ ಕಥೆಗಳಿಗೆ ಪ್ರಸಿದ್ಧವಾಗೋಕೆ  ಕಾರಣ, ಇದನ್ನು ಹಿಂದೂಗಳ ಹಳೆಯ ಸ್ಮಶಾನಭೂಮಿ ಅಂತ  ನಂಬಲಾಗಿದೆ. ಇತಿಹಾಸದ ಪ್ರಕಾರ, ಇಲ್ಲಿ ಮರಣ ಹೊಂದಿದ ಹಲವರ ಆತ್ಮಗಳಿಗೆ ಶಾಂತಿ ಸಿಗದೆ, ಅವು ಇಲ್ಲಿಯೇ ಸುತ್ತಾಡುತ್ತಿವೆ ಎಂದು ಸ್ಥಳೀಯರು ನಂಬುತ್ತಾರೆ. ಬೀಚ್‌ನಲ್ಲಿರುವ ಕಪ್ಪು ಮರಳು ಕೂಡ ಇದೆ ಕಾರಣಕ್ಕೆ ಇಂದೆ ಅಂತ ಹೇಳಲಾಗುತ್ತದೆ. ಮೃತದೇಹಗಳನ್ನು ಸುಟ್ಟಾಗ ಉಂಟಾದ ಬೂದಿಯು ಬಿಳಿ ಮರಳಿನೊಂದಿಗೆ ಬೆರೆತು, ಈ ಪ್ರದೇಶದ ಮರಳನ್ನು ಕಪ್ಪಾಗಿಸಿದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಭಾರತದ ದೀಪಾವಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ – UNESCO ಪಟ್ಟಿಗೆ ಸೇರಿದ ಬೆಳಕಿನ ಹಬ್ಬ

   ರಾತ್ರಿಯಲ್ಲಿ ಒಬ್ಬೊಬ್ಬರೆ ಓಡಾಡುವ ಹಾಗಿಲ್ಲ

ರಾತ್ರಿ ವೇಳೆ ಈ ಬೀಚ್‌ನಲ್ಲಿ ನಡೆಯುವ ಕೆಲವು ಘಟನೆಗಳು ಜನರನ್ನು ಬೆಚ್ಚಿಬೀಳಿಸುತ್ತವೆ. ಸ್ಥಳೀಯರು ಮತ್ತು ಪ್ರವಾಸಿಗರು ಇಲ್ಲಿಂದ ಬರುವ ವಿಚಿತ್ರ ಶಬ್ದಗಳು, ನಗುವಿನ ಮತ್ತು ಕೂಗಿನ ದನಿಗಳನ್ನು ಕೇಳಿದ ಬಗ್ಗೆ ವರದಿ ಮಾಡಿದ್ದಾರೆ. ಯಾರೂ ಇಲ್ಲದಿದ್ದರೂ, ಯಾರೋ ಮಾತನಾಡುತ್ತಿರುವಂತೆ ಅನಿಸುವುದು, ನೆರಳುಗಳು ಓಡಾಡುವುದು, ಮತ್ತು ಕ್ಯಾಮೆರಾಗಳಲ್ಲಿ ವಿಚಿತ್ರ ಫೋಟೊಗಳು ಸೆರೆಯಾಗಿರುವುದು ಇಲ್ಲಿನ ರಹಸ್ಯಗಳಿಗೆ ಪುಷ್ಟಿ ನೀಡಿವೆ. ಈ ಸ್ಥಳಕ್ಕೆ ಹೋದ ಕೆಲವರು ನಾಪತ್ತೆಯಾಗಿದ್ದಾರೆ ಎಂಬ ವದಂತಿಗಳು ಇಲ್ಲಿನ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಈ ಕಥೆಗಳ ಹೊರತಾಗಿಯೂ, ಡುಮಾಸ್ ಬೀಚ್ ಸೂರತ್ ನಗರದ ಜನರಿಗೆ ಮತ್ತು ಪ್ರವಾಸಿಗರಿಗೆ ಒಂದು ಪ್ರಮುಖ ಪ್ರವಾಸಿ ತಾಣವಾಗಿ ಉಳಿದಿದೆ. ಹಗಲಿನ ವೇಳೆಯಲ್ಲಿ ಇಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಮಯ ಕಳೆಯುತ್ತಾರೆ. ಇಲ್ಲಿನ ಸ್ಥಳೀಯ ತಿಂಡಿಗಳಾದ ಭಜಿಯಾ, ಲೋಚೊ, ಗಾಠಿಯಾ ಮತ್ತು ಸೀಗಡಿ ಮೀನುಗಳನ್ನೂ ಸಹ ಜನರು ಇಷ್ಟಪಡುತ್ತಾರೆ. ಸಂಜೆ ಸೂರ್ಯಾಸ್ತದ ಸುಂದರ ನೋಟವನ್ನು ಕಣ್ತುಂಬಿಕೊಳ್ಳಲು ಜನ ಸೇರುತ್ತಾರೆ. ಆದರೆ, ಕತ್ತಲಾಗುತ್ತಿದ್ದಂತೆ ಸ್ಥಳೀಯ ಆಡಳಿತ ಮತ್ತು ಪೊಲೀಸರು ಈ ಪ್ರದೇಶವನ್ನು ಖಾಲಿ ಮಾಡಲು ಸೂಚನೆ ನೀಡುತ್ತಾರೆ. ರಾತ್ರಿ ವೇಳೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳನ್ನು ತಪ್ಪಿಸಲು, ಮತ್ತು ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂಜ  ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಒಟ್ಟಾರೆ, ಈ ಬೀಚ್ ತನ್ನ ಸೌಂದರ್ಯ ಮತ್ತು ರಹಸ್ಯದ ನಡುವೆ ಒಂದು ವಿಶಿಷ್ಟ ಸಮತೋಲನವನ್ನು ಕಾಯ್ದುಕೊಂಡಿದೆ. ಇದು ಸಾಹಸ ಪ್ರಿಯರು ಮತ್ತು ನಿಗೂಢತೆಗಳನ್ನು ಅರಿಯಲು ಬಯಸುವವರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡುವುದು ಪಕ್ಕಾ..

Kishor KV