ದುಬಾರೆ ದುರಂತಕ್ಕೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ! – 2019ರಲ್ಲೇ ಎಚ್ಚರಿಕೆ ನೀಡಿದ್ದ ತಜ್ಞರ ಸಮಿತಿ!

ದುಬಾರೆ ಆನೆ ಶಿಬಿರದಲ್ಲಿ ಕಳೆದ ಎರಡು ದಿನಗಳ ಹಿಂದೆ ದೊಡ್ಡ ದುರಂತವೇ ನಡೆದು ಹೋಗಿದೆ. ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದರು. ಇದ್ರ ಬೆನ್ನಲೇ ಗಂಭೀರ ಗಾಯಗೊಂಡಿದ್ದ ಮಾರ್ತಾಂಡ ಆನೆಯೂ ಮೃತಪಟ್ಟಿತ್ತು. ಇದೀಗ ಈ ಅವಘಡಕ್ಕೆ ಅರಣ್ಯ ಇಲಾಖೆಯ ಬೇಜವಾಬ್ದಾರಿತನ ಹಾಗೂ ತಜ್ಞರ ವರದಿಯ ಕಡೆಗಣನೆಯೇ ಮುಖ್ಯ ಕಾರಣ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ಮೆಲೋನಿಗೆ ಪ್ರಧಾನಿ ಮೋದಿ ಮೆಲೋಡಿ ಗಿಫ್ಟ್! – ಭಾರತದ ಸ್ಪೆಷಲ್ ಉಡುಗೊರೆಗೆ ಇಟಲಿ ಪ್ರಧಾನಿ ಫುಲ್ ಫಿದಾ!
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಆನೆಗಳ ನಡುವಿನ ಕಾದಾಟಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಶಿಬಿರದಲ್ಲಿ ಆನೆಗಳ ಸಂಖ್ಯೆ ಮಿತಿಗೊಳಿಸಲು ಮತ್ತು ಪ್ರವಾಸಿಗರಿಂದ ದೂರವಿಡಲು 2019ರಲ್ಲೇ ಹೈಕೋರ್ಟ್ ತಜ್ಞರ ಸಮಿತಿ ನೀಡಿದ್ದ ನೆಗೆಟಿವ್ ವರದಿ ಹಾಗೂ ಪ್ರಮುಖ ಶಿಫಾರಸುಗಳನ್ನು ಅರಣ್ಯ ಇಲಾಖೆ ಸಂಪೂರ್ಣ ನಿರ್ಲಕ್ಷಿಸಿದ್ದೇ ಈ ದಾರುಣ ದುರಂತಕ್ಕೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಜ್ಞರ ಸಮಿತಿಯ ವರದಿಯನ್ನು ಅರಣ್ಯ ಇಲಾಖೆ ಸಕಾಲದಲ್ಲಿ ಜಾರಿಗೊಳಿಸಿದ್ದರೆ ಈ ಅಮೂಲ್ಯ ಜೀವಗಳನ್ನು ಉಳಿಸಬಹುದಿತ್ತು ಎಂದು ಸಾರ್ವಜನಿಕರು ಹಾಗೂ ವನ್ಯಜೀವಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ ತಜ್ಞರ ವರದಿಯಲ್ಲೇನಿದೆ?
ದುಬಾರೆ ಶಿಬಿರಕ್ಕೆ ಮಿತಿಮೀರಿ ಭೇಟಿ ನೀಡುವ ಪ್ರವಾಸಿಗರಿಂದಾಗಿ ಆನೆಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿವೆ. ಪ್ರವಾಸಿಗರ ಅತಿಯಾದ ಒಡನಾಟದಿಂದ ಆನೆಗಳ ನಡವಳಿಕೆಯಲ್ಲಿ ಅಪಾಯಕಾರಿ ಬದಲಾವಣೆಗಳಾಗುತ್ತಿವೆ ಎಂದು ಚಿತ್ರಸಹಿತ ವರದಿ ನೀಡಲಾಗಿತ್ತು. ಪ್ರವಾಸಿಗರನ್ನು ಆನೆಗಳ ತೀರಾ ಹತ್ತಿರಕ್ಕೆ ಬಿಡಬಾರದು ಮತ್ತು ಅವುಗಳಿಂದ ದೂರವಿಡಬೇಕು ಎಂದು 2019ರಲ್ಲೇ ಹೈಕೋರ್ಟ್ ಆದೇಶದಂತೆ ವನ್ಯಜೀವಿ ತಜ್ಞ ಕೆ.ಎಂ. ಚಿಣ್ಣಪ್ಪ, ಪಶುವೈದ್ಯ ಸರ್ಜನ್ ಡಾ. ಕಲೈವಣ್ಣನ್ ಮತ್ತು ಮುಖ್ಯ ಪಶುವೈದ್ಯ ಡಾ. ಅಶ್ರಫ್ ಅವರನ್ನೊಳಗೊಂಡ ತಜ್ಞರ ಸಮಿತಿಯು ಕರ್ನಾಟಕದ ಎಲ್ಲಾ ಆನೆ ಶಿಬಿರಗಳಿಗೆ ಭೇಟಿ ನೀಡಿ ಅರಣ್ಯ ಇಲಾಖೆಗೆ ಸಮಗ್ರ ವರದಿ ಸಲ್ಲಿಸಿತ್ತು. ಅಲ್ಲದೇ ಒಂದು ಶಿಬಿರದಲ್ಲಿ ಗರಿಷ್ಠ 15 ಆನೆಗಳಿಗಿಂತ ಹೆಚ್ಚು ಇರಬಾರದು ಎಂದು ಶಿಫಾರಸು ಮಾಡಲಾಗಿತ್ತು. ಆದರೆ, ಪ್ರಸ್ತುತ ದುಬಾರೆ ಶಿಬಿರದಲ್ಲಿ ನಿಯಮ ಮೀರಿ ಬರೋಬ್ಬರಿ 30 ಆನೆಗಳನ್ನು ಇರಿಸಲಾಗಿದೆ. ಈ ಮೊದಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುತ್ತಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು. ಆದರೆ ಅರಣ್ಯ ಇಲಾಖೆ ಇದನ್ನು ಸಂಪೂರ್ಣವಾಗಿ ಕಡೆಗಣಿಸಿದೆ.

ನೋಡಿರಿ

