₹122 ಕೋಟಿ ನೀಡಿ ಕಾರಿನ ನಂಬರ್ ಪ್ಲೇಟ್ ಖರೀದಿ – ಫ್ಯಾನ್ಸಿ ನಂಬರ್ ಎಷ್ಟು..? ಯಾರ ಪಾಲಾಯ್ತು..?

₹122 ಕೋಟಿ ನೀಡಿ ಕಾರಿನ ನಂಬರ್ ಪ್ಲೇಟ್ ಖರೀದಿ – ಫ್ಯಾನ್ಸಿ ನಂಬರ್ ಎಷ್ಟು..? ಯಾರ ಪಾಲಾಯ್ತು..?

ಕೆಲವರಿಗೆ ಕಾರು ಅನ್ನೋದು ದುಡಿಯುವ ಮಾರ್ಗ. ಇನ್ನೂ ಕೆಲವರಿಗೆ ಪ್ರಯಾಣ ಮಾಡಲು ಬೇಕಾದ ವಾಹನ. ಆದರೆ ದುಡ್ಡಿದ್ದವರಿಗೆ ಮಾತ್ರ ಕಾರು ಅನ್ನೋದು ಪ್ರತಿಷ್ಠೆ. ಓಡಾಡೋಕೆ ಒಂದೇ ಕಾರು ಸಾಕಿದ್ರೂ ಕೂಡ ಮನೆಯಲ್ಲಿ ಹತ್ತಾರು ಕಾರುಗಳನ್ನ ನಿಲ್ಲಿಸಿರುತ್ತಾರೆ. ಇನ್ನೂ ಕೆಲವರು ಕಾರಿನ ಜೊತೆ ಅದರ ನಂಬರ್ ಪ್ಲೇಟ್ ಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುತ್ತಾರೆ. ಇದೇ ಕಾರಣಕ್ಕೆ ಕೆಲ ಫ್ಯಾನ್ಸಿ ನಂಬರ್ ಗಳಿಗೆ ಅವರು ಹೇಳಿದಷ್ಟು ದುಡ್ಡು ಕೊಡುತ್ತಾರೆ. ಇದೇ ರೀತಿ ಇಲ್ಲೊಬ್ಬ ಕಾರಿನ ನಂಬರ್ ಪ್ಲೇಟ್ ಗೆ ನೀಡಿರುವ ಹಣ ಎಷ್ಟು ಅನ್ನೋದು ಗೊತ್ತಾದರೆ ನೀವೇ ಶಾಕ್ ಆಗುತ್ತೀರಾ.

ಇದನ್ನೂ ಓದಿ : ನೆರೆಮನೆಯಾತನ ಮೇಲೆ ಸೇಡು – 1,100 ಕೋಳಿಗಳನ್ನು ಬೆದರಿಸಿ ಕೊಂದಿದ್ದು ಹೇಗೆ ಗೊತ್ತಾ?  

ಕಾರು ಕ್ರೇಜ್​ ಇದ್ದವರು ಕಾರನ್ನು ಇಷ್ಟಪಡುವ ರೀತಿಯಲ್ಲೇ ಅದರ ನಂಬರ್​ಗಳಿಗೂ ಅಷ್ಟೇ ಮಹತ್ವ ನೀಡುತ್ತಾರೆ. ಕೆಲವೊಮ್ಮೆ ಆ ನಂಬರ್​ಗಳಿಗೆ ಒಂದಷ್ಟು ಲಕ್ಷಗಳಿಂದ ಹೆಚ್ಚೆಂದರೆ ಕೋಟಿ ರೂಪಾಯಿ ನೀಡಿ ಖರೀದಿಸಿರುವುದನ್ನ ಕೇಳಿರುತ್ತೇವೆ. ಆದರೆ ಇಲ್ಲೊಂದು ಕಾರಿನ ನಂಬರ್ ಹರಾಜಿನಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ದಾಟಿದೆ. ದುಬೈನಲ್ಲಿ ಫ್ಯಾನ್ಸಿ ಕಾರ್ ನಂಬರ್​ ಹರಾಜಿಗಿಡಲಾಗಿದ್ದು, ಅದು ಬರೋಬ್ಬರಿ 122 ಕೋಟಿ ರೂಪಾಯಿಗೆ ಮಾರಾಟವಾಗಿ ಅಚ್ಚರಿ ಮೂಡಿಸಿದೆ.

ಅರೇ ಕಾರಿನ ನಂಬರ್ ಪ್ಲೇಟ್ ಗೆ ಶತಕೋಟಿ ಕೊಟ್ಟಿದ್ದಾರಾ ಅಂತಾ ನೀವು ಬಾಯಿ ಮೇಲೆ ಬೆರಳಿಟ್ಟುಕೊಂಡರೂ ಅಚ್ಚರಿ ಇಲ್ಲ ಬಿಡಿ. ಯಾಕಂದರೆ ದುಬೈನಲ್ಲಿ ಇಂಥಾದ್ದೊಂದು ಘಟನೆ ನಡೆದಿದೆ. ದುಬೈನಲ್ಲಿ ನಡೆದ ಮೋಸ್ಟ್ ನೋಬಲ್ ನಂಬರ್ಸ್ (ಶುಭ ಸಂಖ್ಯೆಗಳ ಹರಾಜು) ಹರಾಜಿನಲ್ಲಿ ವಾಹನದ ನಂಬರ್ ಪ್ಲೇಟ್ ‘P7’ ದಾಖಲೆಯ 55 ಮಿಲಿಯನ್ ದಿರ್ಹಾಮ್​ಗಳಿಗೆ ಹರಾಜಾಗಿದೆ. ಶನಿವಾರ ರಾತ್ರಿ 15 ಮಿಲಿಯನ್ ದಿರ್ಹಾಮ್​ನಿಂದ ಶುರುವಾದ ಬಿಡ್‌, ಕೆಲವೇ ಸೆಕೆಂಡುಗಳಲ್ಲಿ 30 ಮಿಲಿಯನ್ ದಿರ್ಹಾಮ್‌ಗೆ ಏರಿದೆ. ಟೆಲಿಗ್ರಾಮ್ ಅಪ್​ನ ಸಂಸ್ಥಾಪಕ ಮತ್ತು ಮಾಲೀಕ ಫ್ರೆಂಚ್ ಎಮಿರಾಟಿ ಬ್ಯುಸಿನೆಸ್ಮ್ಯಾನ್​ ಪಾವೆಲ್ ವ್ಯಾಲೆರಿವಿಚ್ ಡುರೊವ್ ಈ ನಂಬರ್​ ಪ್ಲೇಟ್​ಗೆ 35 ದಿರ್ಹಮ್​ ಬಿಡ್ ಮಾಡಿದ್ದರು. ಈ ಬಿಡ್ ನಂತರ ಹಲವಾರು ನಿಮಿಷಗಳ ಕಾಲ ಅದೇ ಮೊತ್ತಕ್ಕೆ ಸ್ಥಿರವಾಗಿತ್ತು. ಇದಾಗಿ ಕೆಲವೇ ಕ್ಷಣಗಳಲ್ಲಿ ಮತ್ತೆ ಬಿಡ್​ನಲ್ಲಿ ದಿಢೀರ್ ಏರಿಕೆ ಕಂಡು 55 ಮಿಲಿಯನ್​ ದಿರ್ಹಾಮ್​ಗಳಿಗೆ (122.61ಕೋಟಿ ರೂಪಾಯಿ) ತಲುಪಿದೆ. ಅನಾಮಿಕನೊಬ್ಬ ಇಷ್ಟೊಂದು ಮೊತ್ತಕ್ಕೆ ಬಿಡ್ ಮಾಡಿ ಈ ನಂಬರ್ ನ ತನ್ನದಾಗಿಸಿಕೊಂಡಿದ್ದಾರೆ. ಆದರೆ ಅವರು ತಮ್ಮ ಹೆಸರನ್ನು ಬಹಿರಂಗಪಡಿಸಲಿಲ್ಲ.

ಇದೇ ವೇಳೆ ವಿಶೇಷ ನಂಬರ್​ ಪ್ಲೇಟ್‌ಗಳು ಮತ್ತು ಫೋನ್ ಸಂಖ್ಯೆಗಳ ಹರಾಜು ಮಾಡಲಾಗಿದೆ. ಕಾರ್​  ನಂಬರ್​ ಪ್ಲೇಟ್​ನಿಂದ ಒಟ್ಟು 100 ಮಿಲಿಯನ್ ದಿರ್ಹಾಮ್​ (222 ಕೋಟಿ ರೂಪಾಯಿ) ಸಂಗ್ರಹಿಸಲಾಗಿದೆ. ಹರಾಜಿನಲ್ಲಿ ಸಂಗ್ರಹವಾದ ಮೊತ್ತವನ್ನು ರಂಜಾನ್​ ಹಬ್ಬದ ಸಮಯದಲ್ಲಿ ಬಡವರಿಗೆ ಆಹಾರ ಹಂಚಲು ಬಳಸಲಾಗುವುದು.

suddiyaana