ದೆಹಲಿಯಲ್ಲಿ ‘ಡ್ರೈಡೇ’ ಆಚರಣೆ – ನಾಲ್ಕು ದಿನಗಳ ಕಾಲ ಮದ್ಯ ಇರೋದಿಲ್ಲ!
ನವದೆಹಲಿ: ಮದ್ಯ ಪ್ರಿಯರಿಗೆ ಕಹಿ ಸುದ್ದಿಯೊಂದಿದೆ. ದೆಹಲಿಯಲ್ಲಿ ನಾಲ್ಕು ದಿನಗಳ ಕಾಲ ಅಲ್ಲಿನ ಸರ್ಕಾರ ‘ಡ್ರೈಡೇ’ ಆಚರಿಸಲು ಮುಂದಾಗಿದೆ. ಈ ಹಿನ್ನೆಲೆ ಸ್ವಾತಂತ್ರ್ಯ ದಿನಾಚರಣೆ, ಮೊಹರಂ ಸೇರಿದಂತೆ ನಾಲ್ಕು ಹಬ್ಬಗಳಂದು ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ಮಹಿಳೆಯರ ಸಿಂಗಾರಕ್ಕೂ ಸರ್ಕಾರದ ತಕರಾರು – ಸಾವಿರಾರು ಬ್ಯೂಟಿ ಪಾರ್ಲರ್ಗಳಿಗೆ ಬೀಗಮುದ್ರೆ..!
ಪ್ರತಿ ತ್ರೈಮಾಸಿಕಕೊಮ್ಮೆ ದೆಹಲಿ ಸರ್ಕಾರ ‘ಡ್ರೈಡೇ’ (ಮದ್ಯ ಮಾರಾಟ ನಿಷೇಧ ದಿನ) ದಿನಾಂಕ ಘೋಷಿಸುತ್ತದೆ. ಇದರಂತೆ ಈ ತ್ರೈಮಾಸಿಕದ ‘ಡ್ರೈ ಡೇ’ ದಿನಾಂಕಗಳನ್ನು ಘೋಷಿಸಿ ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.
‘ಮೊಹರಂ (ಜುಲೈ 29), ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15), ಕೃಷ್ಣ ಜನ್ಮಾಷ್ಟಮಿ (ಸೆಪ್ಟೆಂಬರ್ 7), ಈದ್-ಎ-ಮಿಲಾದ್ (ಸೆಪ್ಟೆಂಬರ್ 28) ಈ ನಾಲ್ಕು ದಿನಗಳಂದು ಮದ್ಯ ಮಾರಾಟ ನಿಷೇಧಿಸುವ ಅಬಕಾರಿ ಇಲಾಖೆಯ ಪ್ರಸ್ತಾವನೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಅನುಮೋದಿಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆ ದೆಹಲಿಯಲ್ಲಿ ನಾಲ್ಕು ಹಬ್ಬಗಳಂದು ಮದ್ಯ ಮಾರಾಟ ನಿಷೇಧಿಸಲಾಗಿದೆ.