ವಿಮಾನವೇರಿದ ವ್ಯಕ್ತಿ ಫುಲ್ ಟೈಟ್- ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿ ಕಿರಿಕ್
ಅವಮಾನ ಮಾಡಿದ ಪ್ರಯಾಣಿಕನ ಮೇಲೆ ಯಾಕಿಲ್ಲ ಕ್ರಮ ? – ನೊಂದ ಮಹಿಳೆಯಿಂದ ಪತ್ರ

ವಿಮಾನವೇರಿದ ವ್ಯಕ್ತಿ ಫುಲ್ ಟೈಟ್- ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿ ಕಿರಿಕ್ಅವಮಾನ ಮಾಡಿದ ಪ್ರಯಾಣಿಕನ ಮೇಲೆ ಯಾಕಿಲ್ಲ ಕ್ರಮ ? – ನೊಂದ ಮಹಿಳೆಯಿಂದ ಪತ್ರ

ವಿಮಾನ ಪ್ರಯಾಣದಲ್ಲಿ ವ್ಯಕ್ತಿಯೊಬ್ಬನ ಮದ್ಯದ ಅಮಲಿನಿಂದಾಗಿ ಮಹಿಳೆಯೊಬ್ಬರು ಮುಜುಗರಕ್ಕೊಳಗಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ, ಅವಮಾನ ಮಾಡಿದ ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದನ್ನು ಪ್ರಶ್ನಿಸಿ ಮಹಿಳೆ ಟಾಟಾ ಸಮೂಹದ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದಿದ್ದಾರೆ. ಅಮೆರಿಕದಿಂದ ದಿಲ್ಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬಿಜಿನೆಸ್ ಕ್ಲಾಸ್‌ಲ್ಲಿ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದ. ಅಷ್ಟೇ ಅಲ್ಲ, 70 ವರ್ಷದ ವೃದ್ಧ ಮಹಿಳೆಯೆದುರು ತನ್ನ ಪ್ಯಾಂಟ್ ಬಿಚ್ಚಿದ್ದಲ್ಲದೇ ಮೂತ್ರ ಮಾಡಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ. ಇದರಿಂದ ಅವಮಾನ ಮತ್ತು ತೀವ್ರ ಮುಜುಗರಕ್ಕೀಡಾದ ಮಹಿಳೆಯ ಪರಿಸ್ಥಿತಿ ಹೇಳತೀರಾದಾಗಿತ್ತು. ನವೆಂಬರ್ 26 ರಂದು ನ್ಯೂಯಾರ್ಕ್- ಜೆಕೆಎಫ್ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೊರಟ ಏರ್ ಇಂಡಿಯಾ ಎಐ-102 ವಿಮಾನದಲ್ಲಿನ ಬಿಜಿನೆಸ್ ದರ್ಜೆಯಲ್ಲಿ ಈ ಘಟನೆ ನಡೆದಿತ್ತು. ಇದೀಗ ಮಹಿಳೆ ಈ ಬಗ್ಗೆ ಪತ್ರ ಬರೆದ ಮೇಲೆ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ:  ಅವೇಂಜರ್ಸ್ ಖ್ಯಾತಿಯ ಜೆರ್ಮಿ ರೆನ್ನರ್ ಸ್ಥಿತಿ ಚಿಂತಾಜನಕ- ಹಾಲಿವುಡ್ ನಟನಿಗೆ ಮುಂದುವರಿದ ಚಿಕಿತ್ಸೆ

ವಿಮಾನದ ಸಿಬ್ಬಂದಿ ಬಳಿ ಮಹಿಳೆ ದೂರು ನೀಡಿದ್ದರೂ, ಅಸಭ್ಯವಾಗಿ ವರ್ತಿಸಿದ್ದ ಪ್ರಯಾಣಿಕನನ್ನು ಬಂಧಿಸಲಿಲ್ಲ. ಬದಲಾಗಿ ವಿಮಾನ ಇಳಿಯುತ್ತಿದ್ದಂತೆಯೇ ಯಾವುದೇ ವಿಚಾರಣೆ ಕೂಡ ಇಲ್ಲದೆ ನಿರ್ಗಮಿಸಲು ಅವಕಾಶ ನೀಡಲಾಗಿದೆ. ವಿಮಾನದಲ್ಲಿ ತಾವು ಎದುರಿಸಿದ ಅವಮಾನಕರ ಸನ್ನಿವೇಶ ಹಾಗೂ ಏರ್ ಇಂಡಿಯಾ ಸಿಬ್ಬಂದಿ ನಿರ್ಲಕ್ಷ್ಯದ ಕುರಿತಂತೆ ಟಾಟಾ ಸಮೂಹದ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಮಹಿಳೆ ಪತ್ರ ಬರೆದ ಬಳಿಕವಷ್ಟೇ ತನಿಖೆ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. “ಬಹಳ ಸೂಕ್ಷ್ಮ ಹಾಗೂ ಆಘಾತಕಾರಿ ಸನ್ನಿವೇಶವನ್ನು ಸಂವೇದನೆಯಿಂದ ನಿರ್ವಹಿಸುವುದರಲ್ಲಿ ಸಿಬ್ಬಂದಿ ಎಡವಿದ್ದಾರೆ. ಈ ವಿಚಾರವಾಗಿ ಇಷ್ಟರವರೆಗೂ ನನ್ನ ಪರವಾಗಿ ನಾನೇ ಹೋರಾಟ ನಡೆಸಿಕೊಂಡು ಬರುತ್ತಿದ್ದೇನೆ. ಪ್ರತಿಕ್ರಿಯೆ ಪಡೆಯಲು ಸುದೀರ್ಘ ಸಮಯದವರೆಗೆ ಕಾಯುತ್ತಿದ್ದೇನೆ. ಈ ಘಟನೆ ಸಂದರ್ಭದಲ್ಲಿ ನನ್ನ ಸುರಕ್ಷತೆ ಅಥವಾ ಹಿತ ಕಾಪಾಡಲು ವಿಮಾನಯಾನ ಸಂಸ್ಥೆ ಯಾವುದೇ ಪ್ರಯತ್ನ ನಡೆಸದೆ ಇರುವುದು ನನಗೆ ಯಾತನೆ ಉಂಟುಮಾಡುತ್ತಿದೆ” ಎಂದು ಮಹಿಳೆ ಪತ್ರದಲ್ಲಿ ಹೇಳಿದ್ದಾರೆ. ‘ನನ್ನ ಬಟ್ಟೆಗಳು, ಶೂಸ್ ಮತ್ತು ಬ್ಯಾಗ್ ಸಂಪೂರ್ಣವಾಗಿ ಮೂತ್ರದಲ್ಲಿ ನೆಂದು ಹೋಗಿತ್ತು. ವ್ಯವಸ್ಥಾಪಕಿಯು ನನ್ನ ಜತೆ ಸೀಟಿನ ಬಳಿ ಬಂದು, ಅದು ಮೂತ್ರದ ವಾಸನೆಯೇ ಎಂದು ಪರಿಶೀಲಿಸಿದ್ದರು. ಬಳಿಕ ನನ್ನ ಚೀಲ ಹಾಗೂ ಶೂಸ್‌ಗೆ ಸೋಂಕು ನಿವಾರಕವನ್ನು ಸಿಂಪಡಿಸಿದ್ದರು” ಎಂದು ವಿವರಿಸಿದ್ದಾರೆ. ಬೇರೆ ಸೀಟು ನೀಡಲಿಲ್ಲ ವಿಮಾನದ ಶೌಚಾಲಯದಲ್ಲಿ ಮಹಿಳೆ ತಮ್ಮ ದೇಹವನ್ನು ಸ್ವಚ್ಛಗೊಳಿಸಿಕೊಂಡ ಬಳಿಕ ವಿಮಾನದ ಸಿಬ್ಬಂದಿ ಆಕೆಗೆ ಪೈಜಾಮಾದ ಸೆಟ್ ಹಾಗೂ ಬಳಸಿ ಎಸೆಯಬಹುದಾದ ಚಪ್ಪಲಿಗಳನ್ನು ನೀಡಿದ್ದರು. ಕೆಟ್ಟ ವಾಸನೆ ಬರುತ್ತಿದ್ದ ಸೀಟಿಗೆ ಮರಳಲು ಬಯಸದ ಮಹಿಳೆ, ಶೌಚಾಲಯದಲ್ಲಿಯೇ ಸುಮಾರು 20 ನಿಮಿಷ ಕುಳಿದಿದ್ದರು. ಸಿಬ್ಬಂದಿ ಕೂರುವ ಕಿರಿದಾದ ಸೀಟಲ್ಲಿ ಒಂದು ಗಂಟೆ ಕೂರಲು ಅವಕಾಶ ನೀಡಿದ ನಂತರ ತಮ್ಮ ಸೀಟಿಗೆ ಮರಳುವಂತೆ ಹೇಳಲಾಗಿತ್ತು. ಸಿಬ್ಬಂದಿಗೆ ಆಸನದ ಮೇಲೆ ಶೀಟ್ ಹಾಕಿದ್ದರೂ, ಆ ಜಾಗದಲ್ಲಿ ಮೂತ್ರದ ದುರ್ನಾತ ಹೊಡೆಯುತ್ತಿತ್ತು ಎಂದಿದ್ದಾರೆ. ಎರಡು ಗಂಟೆಯ ಬಳಿಕ ಆಕೆಗೆ ಮತ್ತೊಂದು ಸಿಬ್ಬಂದಿ ಸೀಟು ನೀಡಲಾಯಿತು. ದಿಲ್ಲಿಗೆ ಬರುವವರೆಗೂ ಅವರು ಅಲ್ಲಿಯೇ ಕುಳಿತು ಬಂದಿದ್ದರು. ಮೊದಲ ದರ್ಜೆಯಲ್ಲಿ ಅನೇಕ ಸೀಟುಗಳು ಖಾಲಿ ಇದ್ದವು ಎನ್ನುವುದು ಸಹ ಪ್ರಯಾಣಿಕರಿಂದ ಆಕೆಗೆ ಗೊತ್ತಾಗಿದೆ. “ಆಘಾತಕ್ಕೆ ಒಳಗಾದ ಪ್ರಯಾಣಿಕರನ್ನು ಆದ್ಯತೆ ಮೇರೆಗೆ ಕಾಳಜಿ ವಹಿಸಬೇಕು ಎಂಬ ಭಾವನೆ ವಿಮಾನದ ಸಿಬ್ಬಂದಿಯಲ್ಲಿ ಮೂಡಿರಲಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿದೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಈ ಬಗ್ಗೆ ಏರ್ ಇಂಡಿಯಾ ಪ್ರತಿಕ್ರಿಯೆ ನೀಡಿದ್ದು, ‘ಈ ಘಟನೆಯ ಬಗ್ಗೆ ಪೊಲೀಸರು ಮತ್ತು ನಿಯಂತ್ರಣ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನೊಂದ ಪ್ರಯಾಣಿಕರ ಜತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ತಿಳಿಸಿದೆ.

suddiyaana