ಶ್ವಾನ ಕಳ್ಳತನಕ್ಕೆ ಬಂದಿದ್ದ ಎಂದು ವ್ಯಕ್ತಿಯನ್ನು ನಾಯಿ ಗೂಡಿನಲ್ಲಿ ಬಂಧಿಸಿದ ಬಾರ್ ಸಿಬ್ಬಂದಿ!

ಶ್ವಾನ ಕಳ್ಳತನಕ್ಕೆ ಬಂದಿದ್ದ ಎಂದು ವ್ಯಕ್ತಿಯನ್ನು ನಾಯಿ ಗೂಡಿನಲ್ಲಿ ಬಂಧಿಸಿದ ಬಾರ್ ಸಿಬ್ಬಂದಿ!

ಇತ್ತೀಚಿನ ದಿನಗಳಲ್ಲಿ ಜನರು ಮಾನವೀಯತೆಯನ್ನೇ ಮರೆಯುತ್ತಿದ್ದಾರೆ. ಸತ್ಯಾಸತ್ಯತೆಯನ್ನು ತಿಳಿಯದೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದೀಗ ಇಂತಹದ್ದೇ ಘಟನೆಯೊಂದು ನಡೆದಿದೆ. ಸಾಕು ನಾಯಿಯನ್ನು ಕದಿಯಲು ಯತ್ನಿಸಿದ್ದಾನೆ ಎಂಬ ಕಾರಣಕ್ಕೆ ಬಾರ್ ಸಿಬ್ಬಂದಿಯು ಪಾನಮತ್ತ ವ್ಯಕ್ತಿಗೆ ಮನಬಂದಂತೆ ಥಳಿಸಿದ್ದಾರೆ. ಬಳಿಕ ಆತನನ್ನು ಪಂಜರದಲ್ಲಿ ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಚುನಾವಣೆಯಲ್ಲೂ ಪಾಕಿಸ್ತಾನದಲ್ಲಿ ಮಹಾ ಮೋಸದಾಟ – ಪ್ರಾಮಾಣಿಕತೆಗೆ ಇನ್ನೊಂದು ವಿರೋಧಾರ್ಥಕ ಪದವೇ ಪಾಕಿಸ್ತಾನ..!

ಈ ಅಮಾನುಷ ಘಟನೆ ವಿಜಯಪುರದಲ್ಲಿ ನಡೆದಿದೆ. ಇಲ್ಲಿನ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ್ ಬಾರ್ ನಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಬಾರ್​​​ನ ಸಾಕು ನಾಯಿಯನ್ನು ಕದ್ದುಕೊಂಡು ಹೋಗಿದ್ದಾನೆ ಎಂಬ ಕಾರಣಕ್ಕೆ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ನಾಯಿ ಗೂಡಿನಲ್ಲಿ ಬಂಧಿಸಿ ಶಿಕ್ಷಿಸಿದ್ದಾರೆ.

ಬಾರ್ ಸಿಬ್ಬಂದಿಯಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ಸೋಮು ಎಂದು ಗುರುತಿಸಲಾಗಿದೆ. ನಾಯಿ ಮುದ್ದಾಗಿದೆ ಎಂಬ ಕಾರಣಕ್ಕೆ ನಾನು ಆ ಶ್ವಾನವನ್ನು ಎತ್ತಿಕೊಂಡು ಮುದ್ದಾಡಿದ್ದು ಅಷ್ಟೇ, ನಾನು ಯಾವುದೇ ಕಾರಣಕ್ಕೂ ಆ ಶ್ವಾನವನ್ನು ಕಳ್ಳತನ ಮಾಡಲು  ಯತ್ನಿಸಿಲ್ಲ ಎಂದು  ಸೋಮು ಮನವಿ ಮಾಡಿದರೂ, ಬಾರ್ ಸಿಬ್ಬಂದಿ ಆತನಿಗೆ ಅಮಾನುಷವಾಗಿ ಥಳಿಸಿದ್ದಾನೆ. ನಂತರ ಸ್ಥಳೀಯರ ಮನವಿಯ ಮೇರೆಗೆ ಸೋಮುವನ್ನು ನಾಯಿ ಬೋನಿನಿಂದ  ಬಿಡುಗಡೆಗೊಳಿಸಲಾಗಿದೆ. ಈ ಘಟನೆಯಿಂದಾಗಿ ಬೇಸರಗೊಂಡ ಸ್ಥಳೀಯರು ಬಾರ್ ಮಾಲೀಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕಾನೂನು, ಪೊಲೀಸರು ಇದ್ದಾರೆ, ನಿವ್ಯಾಕೆ ಕಾನೂನನ್ನು ಕೈಗೆತ್ತಿಕೊಳ್ಳಬೇಕು, ಹೀಗೆ ಅಮಾನವೀಯ ರೀತಿಯಲ್ಲಿ ವರ್ತಿಸಬೇಕು ಎಂದು ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shwetha M