ವಾಹನ ಸವಾರರಿಗೆ ಗುಡ್‌ನ್ಯೂಸ್! – ಅವಧಿ ಮುಗಿದ ಬಳಿಕವೂ 30 ದಿನ ಡಿಎಲ್ ಮಾನ್ಯ!

ವಾಹನ ಸವಾರರಿಗೆ ಗುಡ್‌ನ್ಯೂಸ್ ಇದೆ. ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ಎಕ್ಸ್ಪೈರಿ ಆದ್ರೆ ಚಿಂತೆ ಮಾಡಬೇಕೆಂದಿಲ್ಲ. ಇನ್ಮುಂದೆ ಚಾಲನಾ ಪರವಾನಗಿ ಅವಧಿ ಮುಗಿದ ನಂತರವೂ ಮುಂದಿನ 30 ದಿನಗಳವರೆಗೆ ಅದರ ಮಾನ್ಯತೆ ಮುಂದುವರಿಯಲಿದೆ.
ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ಆಹಾರ ಸೇವಿಸಿದ ಮಹಿಳೆ ಶಾಕ್! – ಊಟ ಮಾಡಿದ ಮೇಲೆ ಏನಾಯ್ತು?
ಎಕ್ಸ್ಪೈರಿ ದಿನಾಂಕದ ಬದಲು ಅರ್ಜಿ ಸಲ್ಲಿಸಿದ ದಿನದಿಂದಲೇ ಡಿಎಲ್ ನವೀಕರಣವಾಗುವಂತೆ ಮೋಟಾರು ವಾಹನ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಅಲ್ಲದೆ, ನಿರ್ದಿಷ್ಟ ಕಚೇರಿ ವ್ಯಾಪ್ತಿಯಲ್ಲದೆ ರಾಜ್ಯದ ಯಾವುದೇ ಆರ್ಟಿಒ ಕಚೇರಿಯಲ್ಲಿ ಬೇಕಾದರೂ ವಾಹನ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಮೋಟಾರು ವಾಹನ ಕಾಯ್ದೆ 1988ರ ಕಾಯ್ದೆಯಲ್ಲಿರುವ ಸೆಕ್ಷನ್ 8, 9 ಮತ್ತು 12ನ್ನು ತೆಗೆದು ಹಾಕಲಾಗಿದೆ. ಅದರ ಬದಲಿಗೆ ಸೆಕ್ಷನ್ 14 ಮತ್ತು 15 ಅನ್ನು ಸೇರ್ಪಡೆಗೊಳಿಸುವ ಮೂಲಕ ಡಿಎಲ್ ಅವಧಿ ಮುಕ್ತಾಯವಾದ ನಂತರವೂ 30 ದಿನಗಳವರೆಗೆ ಮಾನ್ಯತೆ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ. ಎಕ್ಸ್ ಪೈರಿ ಎಂಬ ಪದವನ್ನು ತೆರವುಗೊಳಿಸಿ ಅದರ ಬದಲಿಗೆ ನವೀಕರಣ ಎಂಬ ಪದ ಸೇರಿಸಲಾಗಿದೆ. ಡಿಎಲ್ ಅವಧಿ ಮುಗಿದ ದಿನಾಂಕದಿಂದ ನವೀಕರಿಸುವ ಬದಲು ಅರ್ಜಿ ಸಲ್ಲಿಸಿದ ದಿನಾಂಕದಿಂದ ಮುಂದಿನ ಅವಧಿಗೆ ನವೀಕರಣ ಮಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಡಿಎಲ್ ಮಾನ್ಯತೆ ಹಿನ್ನೆಲೆಯಲ್ಲಿ ವಿಮಾ ಪ್ರಮಾಣ ಪತ್ರದ ಅವಧಿಯೂ 30 ದಿನದವರೆಗೆ ವಿಸ್ತರಣೆಯಾಗಲಿದೆ. ಇದೇ ವೇಳೆ ವಾಹನ ಮಾಲೀಕತ್ವ ವರ್ಗಾವಣೆಗೆ ಸಂಬಂಧಿಸಿದಂತೆ ವಿಮಾ ಸಂಸ್ಥೆಗೆ ತಿಳಿಸುವ ಅವಧಿಯನ್ನು 14 ದಿನದಿಂದ 30 ದಿನಕ್ಕೆ ಏರಿಸಲಾಗಿದೆ. ವಾಹನದ ರಿಜಿಸ್ಟ್ರೇಷನ್ ರದ್ದುಪಡಿಸುವ ಅವಧಿಯನ್ನು ಕೂಡ 14 ದಿನದಿಂದ 30 ದಿನಗಳಿಗೆ ಹೆಚ್ಚಳ ಮಾಡಲು ಕಾಯ್ದೆಯಲ್ಲಿ ಪ್ರಸ್ತಾಪಿಸಲಾಗಿದೆ.
ವಿಮೆ ಪರಿಹಾರಕ್ಕೆ ಅನ್ವಯ
ಡಿಎಲ್ಗೆ 30 ದಿನ ಹೆಚ್ಚುವರಿ ಮಾನ್ಯತೆ ಅವಧಿಯಲ್ಲಿ ಒಂದು ವೇಳೆ ಅಪಘಾತವಾದರೆ ವಿಮೆ ಕ್ಲೇಮ್ ಆಗಲಿದೆ. 2019ರವರೆಗೆ ಡಿಎಲ್ ಅವಧಿ ಮುಕ್ತಾಯದ ನಂತರ 30 ದಿನದವರೆಗೆ ಮಾನ್ಯತೆ ಇತ್ತು. ಆದರೆ, 2019ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಗ್ರೇಸ್ ಅವಧಿಯನ್ನು ತೆಗೆದು ಹಾಕಲಾಗಿತ್ತು. 2019ರಿಂದ ಈವರೆಗೆ ಡಿಎಲ್ ಅವಧಿ ಮುಕ್ತಾಯದ ದಿನಾಂಕದವರೆಗೆ ಮಾತ್ರವೇ ಮಾನ್ಯತೆ ಇತ್ತು. ಈಗ ಪುನಃ 30 ದಿನ ಅವಕಾಶ ಕೊಡಲಾಗಿದೆ.
ಗ್ರೇಸ್ ಅವಧಿಯಲ್ಲಿ ಅಪಘಾತಕ್ಕೆ ಮಾತ್ರ ವಿಮಾ ಸೌಲಭ್ಯ ಸಿಗಲಿದೆ. ಆದರೆ, ನಿಗದಿತ ದಿನಾಂಕಕ್ಕೆ ವಿಮಾ ಪ್ರಮಾಣ ಪತ್ರ ಅವಧಿ ಮುಕ್ತಾಯವಾಗಲಿದ್ದು, ನಂತರ ವಾಹನವನ್ನು ಭೌತಿಕವಾಗಿ ಪರಿಶೀಲನೆ ನಡೆಸಿಯೇ ಹೊಸದಾಗಿ ವಿಮೆ ನೀಡಲಾಗುತ್ತದೆ. ಡಿಎಲ್ 30 ದಿನದ ಗ್ರೇಸ್ ಅವಧಿ ವಾಹನದ ಇನ್ಸುರೆನ್ಸ್ಗೆ ಅನ್ವಯವಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಹನ ದೋಷಕ್ಕೆ 6 ತಿಂಗಳ ಜೈಲು
ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ದೋಷವಿದ್ದರೆ ಹಾಗೂ ಅಪಘಾತ ಸಂಭವಿಸಿ ದೈಹಿಕ ಗಾಯ ಹಾಗೂ ಆಸ್ತಿಗೆ ಹಾನಿಯುನ್ನುಂಟು ಮಾಡಿದರೆ 6 ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂ. ವಿಧಿಸುವ ನಿಯಮವನ್ನು ಸೇರಿಸಲಾಗಿದೆ.
ಹಿಟ್ ಆಂಡ್ ರನ್ಗೆ ಜೈಲು
ತಿದ್ದುಪಡಿ ಕಾಯ್ದೆಯಲ್ಲಿ ಹಿಟ್ ಆಂಡ್ ರನ್ ಅಪಘಾತ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣವನ್ನು ಸೆಕ್ಷನ್ 161 (4) (ಬಿ) ಅನ್ವಯ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಜತೆಗೆ 1 ಲಕ್ಷ ರೂ.ಗಿಂತ ಕಡಿಮೆ ಇಲ್ಲದಂತೆ 5 ಲಕ್ಷ ರೂ.ವರೆಗೆ ದಂಡ ವಿಧಿಸುವುದನ್ನು ವಿಸ್ತರಿಸಲಾಗಿದೆ. ಈ ಮೊದಲು 25 ಸಾವಿರ ರೂ.ಗಿಂತ ಕಡಿಮೆ ಇಲ್ಲದಂತೆ 5 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶ ಇತ್ತು. ಇದೀಗ ಕನಿಷ್ಠ ದಂಡದ ಮೊತ್ತ 1 ಲಕ್ಷ ರೂ.ಗೆ ಏರಿಸಲಾಗಿದೆ.
ನಂತರದ ಅಪರಾಧಕ್ಕಾಗಿ ದೈಹಿಕ ಗಾಯ ಅಥವಾ ಆಸ್ತಿ ಹಾನಿಗಾಗಿ 1 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ರಸ್ತೆ ಸುರಕ್ಷತೆ ಅಥವಾ ವಾಯುಮಾಲಿನ್ಯ ಉಂಟು ಮಾಡಿದರೆ ಮೊದಲ ಉಲ್ಲಂಘನೆಗೆ 10 ಸಾವಿರ ರೂ.ವರೆಗೆ ದಂಡ ಮತ್ತು 3 ತಿಂಗಳ ಅವಧಿಗೆ ಪರವಾನಗಿ ಅಮಾನತುಗೊಳಿಸಲಾಗುತ್ತದೆ. 2ನೇ ಬಾರಿ ಪುನರಾವರ್ತನೆಯಾದರೆ 6 ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ 10 ಸಾವಿರ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಕರ್ಕಶ ಶಬ್ದಕ್ಕೆ 10 ಸಾವಿರ ದಂಡ!
ವಾಹನದಿಂದ ಕರ್ಕಶ ಶಬ್ದ ಉಂಟು ಮಾಡಿದರೆ ಮೊದಲ ಬಾರಿ ಉಲ್ಲಂಘನೆಗೆ ಎಚ್ಚರಿಕೆ ನೀಡಲಾಗುತ್ತದೆ. ಎರಡನೇ ಬಾರಿ ಪುನರಾವರ್ತನೆಯಾದರೆ 10 ಸಾವಿರ ರೂ. ದಂಡ ವಿಧಿಸುವ ಸೆಕ್ಷನ್ ಸೇರಿಸಲಾಗಿದೆ.

ನೋಡಿರಿ

