ಕನ್ನಡ ಸಾರಸ್ವತ ಲೋಕದ ಗಿರಿಶೃಂಗವೇರಿದವರು – ನಾಟಕ ಕ್ಷೇತ್ರದ ಸಾಹಿತಿ ಗಿರೀಶ್ ಕಾರ್ನಾಡ್

ಕನ್ನಡ ಸಾರಸ್ವತ ಲೋಕದ ಗಿರಿಶೃಂಗವೇರಿದವರು – ನಾಟಕ ಕ್ಷೇತ್ರದ ಸಾಹಿತಿ ಗಿರೀಶ್ ಕಾರ್ನಾಡ್

ಗಿರೀಶ್ ಕಾರ್ನಾಡ್. ನಾಟಕ ಸಾಹಿತ್ಯಕಾರರಾಗಿ, ರಂಗಭೂಮಿ ತಜ್ಞರಾಗಿ, ಕಲಾವಿದರಾಗಿ, ನಿರ್ದೇಶಕರಾಗಿ, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದವರು. ಇವರ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: ಕನ್ನಡ ಸಾಹಿತ್ಯಲೋಕ ಕಂಡ ವಿಶಿಷ್ಟಪ್ರತಿಭೆ – ಕರುನಾಡು ಕಂಡ ಪ್ರಬುದ್ಧ ಸಾಹಿತಿ ಯು.ಆರ್ ಅನಂತಮೂರ್ತಿ

ಕನ್ನಡ ಸಾಹಿತ್ಯದಲ್ಲಿ ನಾಟಕ ಕ್ಷೇತ್ರದ ಸಾಹಿತಿ ಎಂದು ಕರೆಯಲ್ಪಡುವ ಗಿರೀಶ್ ಕಾರ್ನಾಡರು 1934ರ ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ  ಪಡೆದ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಇವರು. ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡಿನಲ್ಲಿ ನೆಹರೂ ಸೆಂಟರಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪೂನಾ ಫಿಲ್ಮ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ಮುಂತಾದವು ಕಾರ್ನಾಡರ ಪ್ರಮುಖ ನಾಟಕ ಕೃತಿಗಳು. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದರು. ಸಾಹಿತ್ಯಕ್ಷೇತ್ರದಲ್ಲಿ ನಾಟಕಗಳನ್ನು ರಚಿಸಿ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದವರಲ್ಲಿ ಕಾರ್ನಾಡರು ಮೊದಲಿಗರು. ಹಾಗಾಗಿ ಈ ಗೌರವ ಕಾರ್ನಾಡರಿಗೆ ಸಂದ ಗೌರವ ಮಾತ್ರವಲ್ಲ, ಇಡೀ ಭಾರತೀಯ ರಂಗಭೂಮಿಗೆ ಸಂದ ಗೌರವವೆಂದು ಪರಿಗಣಿತವಾಯಿತು. ಪುರಾಣ ಬಳಸಿ ಕಾರ್ನಾಡರು ಯಯಾತಿ ಬರೆದರು.  ಇತಿಹಾಸ ಬಳಸಿ ತುಘಲಖ್ ಬರೆದರು.  ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕೆಲವು ಗಣ್ಯರು ಭಾರತೀಯ ರಂಗಭೂಮಿಯನ್ನು ಪಾಶ್ಚಾತ್ಯ ಪ್ರಭಾವದಿಂದ ಬಿಡಿಸಿ ಕಟ್ಟಬೇಕೆಂದು ಮಾಡಿದ ಆಲೋಚನೆ, ತೋರಿದ ಕಾಳಜಿಗೆ ಸ್ಪಂದಿಸಿದ ಕಾರ್ನಾಡರು ಜಾನಪದ ತಂತ್ರಗಳನ್ನು ಬಳಸಿ ‘ಹಯವದನ’ ಬರೆದರು. ಸತ್ಯ ದೇವ ಧುಬೆ, ಬಿ.ವಿ.ಕಾರಂತರಂತಹ ಹಲವಾರು ಶ್ರೇಷ್ಠ ನಿರ್ದೇಶಕರು ‘ಹಯವದನ’ವನ್ನು ನಿರ್ದೇಶಿಸಿದರು. ತಲೆದಂಡ, ನಾಗಮಂಡಲ ನಾಟಕಗಳು ಕಾರ್ನಾಡರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತು. ಕಾರ್ನಾಡರ ‘ಅಗ್ನಿ ಮತ್ತು ಮಳೆ’ ಅವರಿಂದಲೇ ಇಂಗ್ಲಿಷಿಗೆ ‘Fire and Rain’ ಆಗಿ ರೂಪುಗೊಂಡು ಆಂಗ್ಲರಂಗ ವಲಯದಲ್ಲಿ ಭಾರೀ ಯಶಸ್ಸನ್ನು ಪಡೆಯಿತು.  ‘ಅಂಜುಮಲ್ಲಿಗೆ’ ಹಿಂದಿಯಲ್ಲಿ ಹೆಚ್ಚು ಯಶಸ್ಸನ್ನು ಗಳಿಸಿತು. ಚಲನಚಿತ್ರ ಕ್ಷೇತ್ರಕ್ಕೂ ಅವರ ಕೊಡುಗೆ ಗಣನೀಯ. ಅರವತ್ತರ ದಶಕದಲ್ಲಿ ಚಿತ್ರಕತೆ ರಚಿಸಿ ಅಭಿನಯಿಸಿದ ‘ಸಂಸ್ಕಾರ’ ರಾಷ್ಟ್ರಪಶಸ್ತಿಯನ್ನು ಗಳಿಸಿದ್ದಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತು. ಒಂದಾನೊಂದು ಕಾಲದಲ್ಲಿ, ಕಾಡು, ಕಾನೂರು ಹೆಗ್ಗಡತಿ, ಹಿಂದಿಯಲ್ಲಿ ಉತ್ಸವ್, ಚೆಲ್ವಿ ಇತ್ಯಾದಿ ಸಿನಿಮಾಗಳನ್ನು ಕಾರ್ನಾಡರು ನಿರ್ದೇಶಿಸಿ ಖ್ಯಾತಿ ಪಡೆದರು. ಕನ್ನಡದ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರು. ಬಹುಮುಖ ಪ್ರತಿಭೆಯ ಗಿರೀಶ್ ಕಾರ್ನಾಡರು ಕನ್ನಡದಲ್ಲಿ ಹೊಸ ಅಲೆಯ ನಾಟಕಗಳನ್ನು ರಚಿಸಿ, ರಂಗಪ್ರಯೋಗ ಮಾಡಿದ್ದಲ್ಲದೆ, ನಾಟಕ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಕನ್ನಡ ನಾಟಕಗಳಲ್ಲಿ ಅತಿ ಹೆಚ್ಚು ಭಾಷೆಗಳಿಗೆ ಅನುವಾದಗೊಂಡು ರಂಗ ಪ್ರಯೋಗ ಕಂಡ ನಾಟಕಗಳು ಗಿರೀಶ್ ಕಾರ್ನಾಡ್ ಅವರದ್ದೇ ಆಗಿವೆ. ಕನ್ನಡ ಸಾಹಿತ್ಯ ಲೋಕದಲ್ಲಿ ಗಿರೀಶ್​ ಕಾರ್ನಾಡ್​ ಅವರ ಸಾಧನೆ ಅಪಾರ. ತಮ್ಮ ನಾಟಕಗಳ ಮೂಲಕ ಮಹತ್ವದ ಚಿಂತನೆಗಳನ್ನು ಓದುಗರ ಹೃದಯದಲ್ಲಿ ಬಿತ್ತಿದ ಗಿರೀಶ್ ಕಾರ್ನಾಡರನ್ನು ಕರುನಾಡು ಹೆಮ್ಮೆಯಿಂದ ಸದಾ ನೆನೆಯುತ್ತಿರುತ್ತದೆ.

Sulekha