ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಘೋಷಣೆ

ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಘೋಷಣೆ

ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಪುರಸ್ಕರಿಸಿ ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಘೋಷಿಸಲಾಗಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಮಹತ್ತರ ನಿರ್ಧಾರ ಕೈಗೊಳ್ಳಲಾಗಿದೆ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡುವಂತೆ ಬೇಡಿಕೆ ಹೆಚ್ಚಾಗಿತ್ತು. ಕೊನೆಗೂ ಇಬ್ಬರು ಮಹನೀಯರಿಗೆ ಗೌರವ ಸಿಕ್ಕಿದೆ.

ಡಾ. ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಮತ್ತು ಮಾಳವಿಕ ಅವಿನಾಶ್ ಮನವಿ ಮಾಡಿದ್ದರು. ಅದಕ್ಕೂ ಮುನ್ನ ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ಅಳಿಯ ಅನಿರುದ್ಧ್ ಕೂಡ ಸಿಎಂ ಬಗ್ಗೆ ಈ ಬಗ್ಗೆ ವಿನಂತಿಸಿದ್ದರು. ಅದರಂತೆ ಮರಣೋತ್ತರ ಕರ್ನಾಟಕ ರತ್ನ ಘೋಷಣೆ ಮಾಡಿದೆ.

ಮುಂದಿನ ವಾರ ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ತಯಾರಿ ನಡೆಸಿದ್ದಾರೆ. ಇಂತಹ ಹೊತ್ತಲ್ಲೇ ಕರ್ನಾಟಕ ರತ್ನ ಘೋಷಣೆ ಆಗಿರುವುದು ಸಂತಸ ತಂದಿದೆ. ಪುನೀತ್ ರಾಜ್‌ಕುಮಾರ್ ಬಳಿಕ ಇಬ್ಬರೂ ಕಲಾವಿದರಿಗೆ ಈ ಗೌರವ ಸಿಕ್ಕಂತಾಗಿದೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ದಾದಾ ನಟಿಸಿದ್ದಾರೆ. ಅಣ್ಣಾವ್ರ ಬಳಿಕ ಕನ್ನಡ ಚಿತ್ರರಂಗಕ್ಕೆ ವಿಷ್ಣು ಕೊಡುಗೆ ಅಪಾರ. ಇದೇ ವರ್ಷ ಜುಲೈ 14ರಂದು ಬಹುಭಾಷಾ ನಟಿ ಬಿ. ಸರೋಜಾ ದೇವಿ ವಿಧಿವಶರಾಗಿದ್ದರು. ಅವರು ಕನ್ನಡ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರು. ಇವರಿಬ್ಬರಿಗೂ ಕರ್ನಾಟಕ ರತ್ನ ಘೋಷಣೆ ಆಗಿರುವುದು ಸಿನಿರಸಿಕರಿಗೆ ಖುಷಿ ತಂದಿದೆ. ಈ ಬಗ್ಗೆ ಆಪ್ತರು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸುತ್ತಿದ್ದಾರೆ. ದಾದಾಗೆ ಬಹಳ ಹಿಂದೆಯೇ ಸಿಗಬೇಕಿದ್ದ ಗೌರವ ಅಂತೂ ಇಂತೂ ಸಿಕ್ಕಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ

Kishor KV