ವರನಟ ಡಾ.ರಾಜ್‌ಕುಮಾರ್ ಜನ್ಮದಿನ – ಕರುನಾಡಿನಲ್ಲಿ ಅಣ್ಣಾವ್ರ ನೆನಪು

ವರನಟ ಡಾ.ರಾಜ್‌ಕುಮಾರ್ ಜನ್ಮದಿನ – ಕರುನಾಡಿನಲ್ಲಿ ಅಣ್ಣಾವ್ರ ನೆನಪು

ಕನ್ನಡ ಚಿತ್ರರಂಗದ ಮೇರುನಟ, ವರನಟ ಡಾ.ರಾಜ್​ಕುಮಾರ್ ಜನ್ಮದಿನ ಏಪ್ರಿಲ್ 24. ಈ ದಿನ ಅಣ್ಣಾವ್ರ ಅಭಿಮಾನಿಗಳು ಅಭಿಮಾನದಿಂದ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ದೊಡ್ಮನೆ ಕುಟುಂಬಕ್ಕೂ ಕೂಡಾ ಈ ದಿನ ಬಹಳ ವಿಶೇಷ. ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಡೀ ಕರುನಾಡು ಅವರನ್ನು ಸ್ಮರಿಸುತ್ತಿದೆ. ಅಭಿಮಾನಿ ದೇವ್ರುಗಳು ಅಣ್ಣಾವ್ರ ನೆನಪಿನಲ್ಲಿ ರಾಜ್ಯಾದ್ಯಂತ ನಾನಾ ರೀತಿಯಲ್ಲಿ ಒಳ್ಳೆಯ ಕಾರ್ಯಗಳನ್ನು ನಡೆಸುತ್ತಿದ್ದಾರೆ.

ಡಾ.ರಾಜ್ ಕುಮಾರ್. ಕನ್ನಡಿಗರ ಹೃದಯ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆದವರು ಮೇರುನಟ ಡಾ. ರಾಜ್ ಕುಮಾರ್. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ಚಾಮರಾಜನಗರದ ಸಿಂಗಾನಲ್ಲೂರು ಎಂಬ ಕುಗ್ರಾಮದ ಪುಟ್ಟ ಬಾಲಕ ಮುತ್ತುರಾಜನನ್ನು ಡಾ.ರಾಜಕುಮಾರನನ್ನಾಗಿ ಮಾಡಿದ್ದು ಅಭಿಮಾನಿ ದೇವರುಗಳು. ಡಾ.ರಾಜ್ ಕುಮಾರ್ ಹುಟ್ಟಿದ್ದು 1929, ಏಪ್ರಿಲ್ 24ರಂದು. ಪುಟ್ಟಸ್ವಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿ ಹಿರಿಮಗನೇ ಈ ಗಾಜನೂರಿನ ಗಂಡು. ಬಡತನ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದ ಡಾ.ರಾಜ್, ಓದಿದ್ದು ನಾಲ್ಕನೇ ಕ್ಲಾಸ್. ಆದರೆ ಸಾಧನೆ ಮಾತ್ರ ಶಿಖರದಷ್ಟು. ಭಾರತೀಯ ಚಿತ್ರರಂಗದಲ್ಲಿ ಅಣ್ಣಾವ್ರ ಕಲಾಸೇವೆ ಎಂದೆಂದಿಗೂ ಅಜರಾಮರ.

ನಾಯಕ ನಟರಾಗಿ ಗುರುತಿಸಿಕೊಂಡು ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಕಲಾವಿದ ಡಾ.ರಾಜ್​ಕುಮಾರ್. ಅವರಿಗೆ ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ, ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಡಾ.ರಾಜ್ ನಟಿಸಿರುವ 34 ಚಿತ್ರಗಳು 9 ಭಾಷೆಗಳಲ್ಲಿ ಒಟ್ಟಾರೆ 58 ಬಾರಿ ರಿಮೇಕ್ ಆಗಿವೆ. ಒಟ್ಟು 34 ನಾಯಕ ನಟರು ರಾಜ್ ನಿರ್ವಹಿಸಿದ್ದ ಪಾತ್ರಗಳನ್ನು ವಿವಿಧ ಭಾಷೆಗಳಲ್ಲಿ ನಿರ್ವಹಿಸಿದ್ದಾರೆ. ಮೊದಲ ಬಾರಿಗೆ ಒಬ್ಬ ನಟನ ಚಿತ್ರಗಳು 50ಕ್ಕೂ ಹೆಚ್ಚು ಬಾರಿ ರಿಮೇಕ್ ಆಗಿರುವುದು ಹಾಗೂ 9 ಭಾಷೆಗಳಲ್ಲಿ ರಿಮೇಕ್ ಆಗಿ ತೆರೆಕಂಡಿರುವುದು ಡಾ.ರಾಜ್​ ಹೆಗ್ಗಳಿಕೆ. ಭಾರತೀಯ ಚಿತ್ರರಂಗದಲ್ಲಿನ ಇದುವರೆಗಿನ ಇತಿಹಾಸದಲ್ಲಿ ಅತ್ಯುದ್ಭುತ ನಟನೆಯ 25 ಸಿನಿಮಾಗಳನ್ನು ಫೋರ್ಬ್ಸ್ ಪಟ್ಟಿಮಾಡಿತ್ತು. ಅದರಲ್ಲಿ ಡಾ.ರಾಜ್ ನಟನೆಯ ‘ಬಂಗಾರದ ಮನುಷ್ಯ’ವೂ ಸ್ಥಾನ ಪಡೆದಿತ್ತು.

Sulekha