ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನ – ಶನಿವಾರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನ – ಶನಿವಾರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ. ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಶನಿವಾರ ನಡೆಯಲಿದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಏನಿದು ಸ್ವಾಮಿತ್ವ ಯೋಜನೆ? ಬ್ಯಾಂಕ್ಗಳಲ್ಲಿ ಹಳ್ಳಿ ಜನರಿಗೆ ಸಾಲ ಸೌಲಭ್ಯ

2004 ರಿಂದ 2014 ರವರೆಗೆ ಭಾರತದ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್, ಅನಾರೋಗ್ಯದಿಂದಾಗಿ ಗುರುವಾರ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಉಸಿರಾಟದ ತೊಂದರೆ ಇತ್ತು. ಅವರ ಪಾರ್ಥಿವ ಶರೀರವನ್ನು ಗುರುವಾರ ರಾತ್ರಿಯೇ ಅವರ ನಿವಾಸಕ್ಕೆ ತರಲಾಗಿದೆ. ಶುಕ್ರವಾರ ರಾತ್ರಿ 9-10 ಗಂಟೆಯ ನಂತರ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ನಿಧನದ ಹಿನ್ನೆಲೆಯಲ್ಲಿ ದೇಶದಲ್ಲಿ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ

ಮನಮೋಹನ್ ಸಿಂಗ್ ನಿಧನದ ನಂತರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ. ಕೇಂದ್ರ ಸರ್ಕಾರ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ ಮತ್ತು 7 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶನಿವಾರ ದೆಹಲಿ ರಾಜ್‌ಘಾಟ್ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ರಾತ್ರಿ ಡಾ. ಸಿಂಗ್ ನಿವಾಸಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಬೆಳಗಾವಿಯಲ್ಲಿ ‘ಗಾಂಧಿ ಭಾರತ’ ಕಾಂಗ್ರೆಸ್ ಅಧಿವೇಶನದಲ್ಲಿದ್ದ ಇಬ್ಬರೂ ನಾಯಕರು ಮನಮೋಹನ್ ನಿಧನದ ಸುದ್ದಿ ತಿಳಿದ ತಕ್ಷಣ ದೆಹಲಿಗೆ ತೆರಳಿದ್ದರು.

ಮನಮೋಹನ್ ಅವರ ಮಗಳು ವಿದೇಶದಿಂದ ಬರಬೇಕಿದ್ದು, ಇಂದು ಮಧ್ಯಾಹ್ನ ಅಥವಾ ಸಂಜೆ ದೆಹಲಿ ತಲುಪಬಹುದು. ಆ ನಂತರವೇ ಎಲ್ಲದರ ಬಗ್ಗೆಯೂ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ‘ಎಎನ್​ಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಮೆರಿಕ ಸರ್ಕಾರದಿಂದ ನುಡಿ ನಮನ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅಮೆರಿಕ ಸರ್ಕಾರ ಗೌರವ ಸಲ್ಲಿಸಿದೆ. ಮನಮೋಹನ್ ಸಿಂಗ್ ಅವರು ಆರ್ಥಿಕ ಸುಧಾರಣೆಗಳಿಗಾಗಿ ನೆನಪಿಸಿಕೊಳ್ಳುತ್ತಾರೆ ಎಂದು ಅಮೆರಿಕ ಹೇಳಿದೆ. ಅವರು ಭಾರತದ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಿದರು. ಅವರು ಅಮೆರಿಕ-ಭಾರತದ ಕಾರ್ಯತಂತ್ರದ ಪಾಲುದಾರಿಕೆಯ ಬೆಂಬಲಿಗರಾಗಿದ್ದರು ಎಂದು ನುಡಿ ನಮನದಲ್ಲಿ ಅಮೆರಿಕ ಸರ್ಕಾರ ಉಲ್ಲೇಖಿಸಿದೆ. ಇಂದು ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು.

Shwetha M

Leave a Reply

Your email address will not be published. Required fields are marked *