ನಡೆದಾಡುವ ವಿಶ್ವಕೋಶ ಶಿವರಾಮ ಕಾರಂತರು – ಕರುನಾಡಿನ ಹೆಮ್ಮೆ ಕಡಲತೀರದ ಭಾರ್ಗವ
ನಡೆದಾಡುವ ವಿಶ್ವಕೋಶ ಡಾ.ಕೆ ಶಿವರಾಮ ಕಾರಂತರು ನಾಡು ನುಡಿ ಕಟ್ಟಲು ಶ್ರಮಿಸಿದ ಹಾದಿಯೇ ವಿಭಿನ್ನ. ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಸಾಹಿತ್ಯಲೋಕಕ್ಕೆ ಅನನ್ಯ ಮತ್ತು ಅಭೂತಪೂರ್ವ.
ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ ೧೯೦೨, ಅಕ್ಟೋಬರ್ ೧೦ರಂದು. ಎಲ್ಲಾ ಸಾಹಿತಿಗಳಂತೆ ಇವರು ಕೂಡಾ ತನ್ನ ಪೆನ್ನಿನಿಂದ ಮೊನಚಾದ ಪದಗಳಿಂದಲೇ ಕರ್ನಾಟಕ ಏಕೀಕರಣ ವಿರೋಧಿಗಳನ್ನ ಚುಚ್ಚಿದ್ದವರು. 10ನೇ ತರಗತಿ ಓದುತ್ತಿರುವಾಗಲೇ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ಬ್ರಿಟಿಷರ ವಿರುದ್ಧ ಹೋರಾಡಲು ಕಾಲೇಜು ಶಿಕ್ಷಣವನ್ನೇ ಬಿಟ್ಟಿದ್ದರು ಕಾರಂತರು. ಗಾಂಧೀಜಿಯವರ ಅನುಯಾಯಿಯಾಗಿದ್ದ ಕರಾವಳಿಗರಲ್ಲಿ ಕಾರಂತರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತೆ. ಖಾದಿ ಮತ್ತು ಸ್ವದೇಶಿ ವಿಚಾರಗಳನ್ನ ಪ್ರಚಾರ ಮಾಡ್ತಿರುವಾಗಲೇ ಕಾರಂತರಲ್ಲಿದ್ದ ಸಾಹಿತ್ಯ ಕೃಷಿ ಬೀಜವಾಗಿ ಮೊಳಕೆಯೊಡೆದು ಹೆಮ್ಮರವಾಗತೊಡಗಿತ್ತು. ನುಡಿಯ ಆಧಾರದ ಮೇಲೆ ಕರುನಾಡನ್ನ ಒಂದಾಗಿಸಲೇ ಬೇಕೆಂಬ ಕರೆ ಕೊಟ್ಟವರಲ್ಲಿ ಶಿವರಾಮ ಕಾರಂತರೂ ಒಬ್ಬರು. ತಮ್ಮ ಹರಿತವಾದ ಬರಹಗಳ ಮೂಲಕವೇ ಕರ್ನಾಟಕ ಏಕೀಕರಣದ ಹೋರಾಟದ ಕಿಚ್ಚಿಗೆ ತುಪ್ಪ ಸುರಿದರು. ಮೈಸೂರಿನ ಹಲವು ನಾಯಕರಲ್ಲಿ ಏಕೀಕರಣದ ಬಗ್ಗೆ ಭಿನ್ನ ಅನಿಸಿಕೆಗಳಿದ್ದರೂ ಸಾಹಿತಿಗಳೆಲ್ಲರೂ ಏಕೀಕರಣದ ಪರವಾಗಿದ್ದರು. ಅಂದಿನ ಕರ್ನಾಟಕ ಸಾಹಿತ್ಯ ಪರಿಷತ್ ಬರವಣಿಗೆಯ ಮೂಲಕವೇ ಕರ್ನಾಟಕ ಏಕೀಕರಣದ ಹೋರಾಟಕ್ಕೂ ಬೆಂಬಲ ನೀಡಿತು.
1955ರಲ್ಲಿ ಮೈಸೂರಿನಲ್ಲಿ ನಡೆದ 37ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕಡಲತೀರದ ಭಾರ್ಗವ ಶಿವರಾಮ ಕಾರಂತರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡ ಏಕೀಕರಣ ವಿಚಾರ ಬಂದಾಗಲೆಲ್ಲಾ ಆಡಳಿತ ಸೌಕರ್ಯದ ಮಾತು ಹೇಳುತ್ತಾರೆ. ಹಣಕಾಸಿನ ಭಯ ತೋರಿಸುತ್ತಾರೆ. ಶಾಂತಿ ಕೋಮುಗಳ ಭೂತ ದೆವ್ವಗಳನ್ನ ಎತ್ತಿ ಹಿಡಿಯುತ್ತಾರೆ. ಎರಡು ಕನ್ನಡ ನಾಡಾಗಲಿ ಅನ್ನುವವರೂ ಇದ್ದಾರೆ. ಈ ದೇಶದಲ್ಲಿ ಮಂತ್ರಿಗಳಾಗುವ ಹೆಬ್ಬಯಕೆಯೊಂದೇ ರಾಜಕೀಯದಲ್ಲಿ ತಾಂಡವವಾಡುತ್ತಿದ್ದರೆ ಎರಡಲ್ಲ. ಮಂತ್ರಿ ಪದಾಕಾಂಕ್ಷಿಗಳಿಗೆ ಸಮನಾದ ಸಂಖ್ಯೆಯಲ್ಲಿ ಬಹುಖಂಡ ಕರ್ನಾಟಕವಾಗಬೇಕಾದೀತು ಎಂದು ಕರ್ನಾಟಕದ ಏಕೀಕರಣವನ್ನು ವಿರೋಧಿಸುತ್ತಿದ್ದವರನ್ನು ತಮ್ಮದೇ ಮಾತಿನಲ್ಲಿ ಖಂಡಿಸಿದ್ದರು.
ಸಾಹಿತ್ಯದ ಜೊತೆ ಯಕ್ಷಗಾನ ಕಲೆ ಕಾರಂತರ ಮತ್ತೊಂದು ಆಸಕ್ತಿಯ ಕ್ಷೇತ್ರವಾಗಿತ್ತು. ಮಕ್ಕಳ ಶಿಕ್ಷಣದಲ್ಲಿ ಕಾರಂತರಿಗೆ ತುಂಬಾ ಆಸಕ್ತಿ. ಮಕ್ಕಳಿಗಾಗಿ ಸಾಹಿತ್ಯರಚನೆ ಮಾಡಿದ ಅವರು ಮಕ್ಕಳ ಪ್ರೀತಿಯ ಕಾರಂತಜ್ಜ ಎಂದೇ ಖ್ಯಾತರಾದರು. ವಿಜ್ಞಾನದ ಅನೇಕ ಮುಖಗಳನ್ನು ಮಕ್ಕಳಿಗೆ ಪರಿಚಯಿಸಲು ಅವರು ಬರೆದ ಅದ್ಭುತ ಜಗತ್ತು, ಬಾಲ ಪ್ರಪಂಚ ಕನ್ನಡದ ಮಟ್ಟಿಗೆ ಅದ್ಭುತ ಏಕವ್ಯಕ್ತಿ ಜ್ಞಾನಕೋಶ. ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕಾದಂಬರಿಕಾರ. ಕನ್ನಡ ವೈಚಾರಿಕತೆಯ ಧೀಮಂತ ಪ್ರತಿನಿಧಿಯಂತಿದ್ದ ಕಾರಂತರ ಬಾಳ್ವೆಯೇ ಒಂದು ಪ್ರಯೋಗಶಾಲೆಯಂತಿತ್ತು. ತಮ್ಮ ಸಾಹಿತ್ಯ ಸಾಧನೆಗಾಗಿ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಕಾರಂತರು, ಕನ್ನಡಿಗರಿಗೆ ಕನ್ನಡದ ಒಂದು ವಿಶಿಷ್ಟ ಬದುಕಿನ ಮಾದರಿಯಾಗಿ ಚಿರಕಾಲ ಸ್ಮರಣೀಯರಾಗಿದ್ದಾರೆ. ಸಾಹಿತ್ಯ ದಿಗ್ಗಜ ಡಾ. ಶಿವರಾಮ ಕಾರಂತರು ೧೯೯೭, ಡಿಸೆಂಬರ್ ೦೯ ರಂದು ನಿಧನ ಹೊಂದಿದರು. ನಡೆದಾಡುವ ವಿಶ್ವಕೋಶವೇ ಆಗಿದ್ದ, ಕಡಲತೀರದ ಭಾರ್ಗವ ಶಿವರಾಮ ಕಾರಂತರು ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿ ಬಾಳಿ, ಅರ್ಥಪೂರ್ಣ ಬದುಕು ಹೊಂದಿದ್ದರು.