ಮಂಡ್ಯದಲ್ಲಿ ಅಪ್ಪ ಮಗ ಎಲೆಕ್ಷನ್‌ಗೆ ನಿಲ್ಲಲ್ಲ ಅಂದಿದ್ದು ಇದೇ ಕಾರಣಕ್ಕಾ? – ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್ ಮಂಜುನಾಥ್ ಕಣಕ್ಕೆ?

ಮಂಡ್ಯದಲ್ಲಿ ಅಪ್ಪ ಮಗ ಎಲೆಕ್ಷನ್‌ಗೆ ನಿಲ್ಲಲ್ಲ ಅಂದಿದ್ದು ಇದೇ ಕಾರಣಕ್ಕಾ? –  ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್ ಮಂಜುನಾಥ್ ಕಣಕ್ಕೆ?

ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಂಡ್ಯ ಕ್ಷೇತ್ರಕ್ಕೆ ಇದೀಗ ಅಚ್ಚರಿಯ ಅಭ್ಯರ್ಥಿ ಹೆಸರು ಕೇಳಿ ಬರ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್ ಮಂಜುನಾಥ್ ಕಣಕ್ಕಿಳಿಯಬೇಕು ಎಂಬ ಚರ್ಚೆ ಶುರುವಾಗಿದೆ. ಆರಂಭದಲ್ಲಿ ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸುವ ಕುರಿತ ಚರ್ಚೆಗಳು ನಡೆದಿದ್ದವು. ಆದರೆ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆಗೆ ಮಂಜುನಾಥ್ ಒಪ್ಪಿರಲಿಲ್ಲ. ಹೀಗಾಗಿ ಡಿ.ವಿ ಸದಾನಂದಗೌಡ ಅವರು ಪ್ರತಿನಿಧಿಸುತ್ತಿರುವ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕರೆತರುವ ಪ್ರಯತ್ನಗಳು ನಡೆದಿದ್ದವು. ಇದೀಗ ಡೈರೆಕ್ಟ್ ಮಂಡ್ಯ ಕ್ಷೇತ್ರದಲ್ಲೇ ಸ್ಪರ್ಧೆಗಿಳಿಸೋ ತಂತ್ರ ನಡೀತಿದೆ. ಹಾಗಾದ್ರೆ ಹೆಚ್​.ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಅನ್ನುತ್ತಿರೋದು ಇದೇ ಕಾರಣಕ್ಕಾ..? ಮಂಜುನಾಥ್ ಮಂಡ್ಯಕ್ಕೆ ಬಂದ್ರೆ ಸುಮಲತಾ ಕಥೆ ಏನು..? ಕಾಂಗ್ರೆಸ್ ಪ್ಲ್ಯಾನ್ ಹೇಗಿದೆ..? ಏನಿದು ಲೆಕ್ಕಾಚಾರ..? ಈ ಬಗೆಗಿನ ಕಂಪ್ಲೀಟ್ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್ ಮಂಜುನಾಥ್ ರಾಜಕೀಯಕ್ಕೆ ಬರುತ್ತಾರಾ? – ಮೈತ್ರಿ ಲೆಕ್ಕಾಚಾರಗಳೇನು?

ಚುನಾವಣೆ ಹತ್ತಿರವಾದಂತೆಲ್ಲಾ ಮಂಡ್ಯ ಕ್ಷೇತ್ರದ ಕಾವು ಹೆಚ್ಚಾಗ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ನಡುವೆ ಯಾರಿಗೆ ಕ್ಷೇತ್ರ ಅನ್ನೋದೇ ಫೈನಲ್ ಆಗಿಲ್ಲ. ಇದರ ನಡುವೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವ್ರೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರೆ ಎನ್ನಲಾಗಿತ್ತು. ಆದ್ರೆ ಕುಮಾರಣ್ಣ ಮಾತ್ರ ನಾನು ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರಕ್ಕೆ ಹೋಗಲ್ಲ ಎನ್ನುವ ಮೂಲಕ ಸ್ಪರ್ಧೆ ಗೊಂದಲಕ್ಕೆ ತೆರೆ ಎಳೆದಿದ್ದರು. ಮತ್ತೊಂದೆಡೆ ಸ್ಥಳೀಯ ನಾಯಕರು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಪಟ್ಟು ಹಿಡಿದಿದ್ದಾರೆ. ಆದ್ರೆ ನಿಖಿಲ್ ಕೂಡ ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್ ಮಂಜುನಾಥ್ ಹೆಸರು ಹರಿದಾಡ್ತಿದೆ.

ದೊಡ್ಡಗೌಡರ ಅಳಿಯ ಡಾ.ಸಿ.ಎನ್ ಮಂಜುನಾಥ್ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ?

ದೊಡ್ಡಗೌಡರ ಅಳಿಯ ಡಾ.ಸಿ.ಎನ್ ಮಂಜುನಾಥ್ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ. ಆದಿಚುಂಚನಗಿರಿ ಮಠದಲ್ಲಿ ನಡೆದ ಕಾರ್ಯಕ್ರಮದ ವೇಳೆ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ. ಡಾ.ಮಂಜುನಾಥ್ ಅಭ್ಯರ್ಥಿ ಆಗಲು ನಿರ್ಮಲಾನಂದನಾಥ ಶ್ರೀಗಳು ಆಶೀರ್ವಾದ ಮಾಡಬೇಕು ಎಂದು ಕೇಳಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಮಂಜುನಾಥ್ ಅವರು ಮೂಲತಃ ಹಾಸನ ಜಿಲ್ಲೆಯವರು. ಆದ್ರೆ ಅವರ ವ್ಯವಹಾರ, ಭೂಮಿ ಇರೋದೆಲ್ಲಾ ಮಂಡ್ಯ ಜಿಲ್ಲೆಯಲ್ಲಿ. ರೈಸ್​ಮಿಲ್, ತೋಟ ಅವರು ಓದಿದ್ದು ಅವರ ಸಂಬಂಧಿಕರು ಇರೋದೆಲ್ಲಾ ಮಂಡ್ಯ ಜಿಲ್ಲೆಯಲ್ಲಿ. ಹಾಗಾಗಿ ಇಲ್ಲಿಂದಲೇ ಸ್ಪರ್ಧೆ ಮಾಡಲಿ. ಚುನಾವಣೆಯಲ್ಲಿ ಗೆದ್ದು ಆರೋಗ್ಯ ಸಚಿವರಾದ್ರೆ ಅವರ ಸೇವೆ  ರಾಷ್ಟ್ರಕ್ಕೂ ಸಿಗಲಿದೆ ಎಂದಿದ್ದಾರೆ.

ಹೀಗೆ ಮೈತ್ರಿ ಪಕ್ಷಗಳಲ್ಲಿ ಅಭ್ಯರ್ಥಿಗಳ ರೇಸ್​ನಲ್ಲಿ ಹೊಸ ಹೊಸ ಹೆಸರುಗಳು ಕೇಳಿ ಬರ್ತಿವೆ. ಮತ್ತೊಂದೆಡೆ ಹಾಲಿ ಸಂಸದೆ ಸುಮಲತಾ ಅಂಬರೀಶ್ ತಾವು ಮತ್ತೆ ಮಂಡ್ಯದಿಂದಲೇ ಸ್ಪರ್ಧಿಸೋದಾಗಿ ಘೋಷಣೆ ಮಾಡಿದ್ದಾರೆ. ನಟ ದರ್ಶನ್ ಅವರ ಬೆಳ್ಳಿ ಹಬ್ಬದ ಆಚರಣೆ ವೇಳೆಯೂ ನಾನು ಮಂಡ್ಯದ ಗುಣ ಮತ್ತು ಋಣ ಎರಡನ್ನೂ ಮರೆಯಲ್ಲ ಎನ್ನುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್​ಗೆ ಟಾಂಗ್ ಕೊಟ್ಟಿದ್ದಾರೆ. ಹಾಗೇ ಕಾಂಗ್ರೆಸ್ ನಾಯಕರು ಕೂಡ ಕಳೆದ ಭಾನುವಾರವಷ್ಟೇ ಮಂಡ್ಯದ ಮಳವಳ್ಳಿಯಲ್ಲಿ ಗ್ಯಾರಂಟಿ ಸಮಾವೇಶ ನಡೆಸಿ ಶಕ್ತಿಪ್ರದರ್ಶನ ಮಾಡಿದ್ದಾರೆ. ಹೀಗಾಗೇ ಸುಮಲತಾ ಹಾಗೂ ಕಾಂಗ್ರೆಸ್​ಗೆ ಟಕ್ಕರ್ ಕೊಡಲು ಮೈತ್ರಿ ಅಭ್ಯರ್ಥಿಯಾಗಿ ಮಂಜುನಾಥ್ ಕಣಕ್ಕಿಳಿದ್ರೂ ಅಚ್ಚರಿ ಪಡಬೇಕಿಲ್ಲ. ಅಷ್ಟಕ್ಕೂ ಡಾ.ಮಂಜುನಾಥ್ ಸ್ಪರ್ಧೆ ಚರ್ಚೆ ಹಿಂದಿನ ಲೆಕ್ಕಾಚಾರದ ಬಗ್ಗೆ ನೋಡೋದಾದ್ರೆ..

ದೊಡ್ಡಗೌಡರ ಅಳಿಯ ಎಂಬ ಅಸ್ತ್ರ! 

ಡಾ.ಸಿ.ಎನ್. ಮಂಜುನಾಥ್ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಅಳಿಯರಾಗಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಮಂಡ್ಯ ಮತಕ್ಷೇತ್ರದಲ್ಲೂ ಒಕ್ಕಲಿಗರದ್ದೇ ಪ್ರಾಬಲ್ಯ ಇದೆ. ವೈದ್ಯಕೀಯ ಲೋಕದಲ್ಲಿ ಒಳ್ಳೆಯ ಹೆಸರಿದ್ದು, ಜನರಿಗೂ ಚಿರಪರಿಚಿತರಾಗಿದ್ದಾರೆ. ಜನವರಿ 31ರಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಹುದ್ದೆಯಿಂದ ನಿವೃತ್ತರಾಗಿದ್ದು ರಾಜಕೀಯಕ್ಕೆ ಕರೆತರಲು ಎಲ್ಲಾ ಪ್ರಯತ್ನಗಳೂ ನಡೆಯುತ್ತಿವೆ. ಇದೀಗ ಮಂಡ್ಯ ಕ್ಷೇತ್ರದಿಂದಲೇ ಕಣಕ್ಕಿಳಿಸಿದ್ರೆ ಅನುಕೂಲ ಆಗುತ್ತೆ ಎಂಬ ಲೆಕ್ಕಾಚಾರ ಇದೆ. ಹೆಚ್.ಡಿ ದೇವೇಗೌಡರ ಕುಟುಂಬಕ್ಕೆ ಸೇರಿದವರಾಗಿರೋದ್ರಿಂದ ಮತಗಳಿಕೆ ಅನುಕೂಲ ಆಗಲಿದೆ ಎಂಬ ಅಭಿಪ್ರಾಯವಿದೆ.

ಸದ್ಯಕ್ಕಂತೂ ಮಂಡ್ಯ ಕ್ಷೇತ್ರದಿಂದ ಯಾರೆಲ್ಲಾ ಅಭ್ಯರ್ಥಿಗಳಾಗ್ತಾರೆ ಅನ್ನೋ ಬಗ್ಗೆ ಕ್ಲಾರಿಟಿ ಇಲ್ಲ. ಒಂದ್ಕಡೆ ಸುಮಲತಾ ಬಿಜೆಪಿ ಟಿಕೆಟ್ ಸಿಕ್ಕರೂ ಸಿಗದಿದ್ದರೂ ಸ್ಪರ್ಧೆ ಫಿಕ್ಸ್ ಅಂದಿದ್ದಾರೆ. ಕಾಂಗ್ರೆಸ್ ಕೂಡ ಸಕಲ ತಯಾರಿ ಮಾಡಿಕೊಳ್ತಿದೆ. ಆದ್ರೆ ಮೈತ್ರಿ ಅಭ್ಯರ್ಥಿ ಯಾರು ಅನ್ನೋದೇ ಫೈನಲ್ ಆಗ್ತಿಲ್ಲ. ಹೆಚ್​ಡಿಕೆ, ನಿಖಿಲ್ ಹೆಸರಿನ ಬೆನ್ನಲ್ಲೇ ಮಂಜುನಾಥ್ ಹೆಸರು ಕೇಳಿ ಬರ್ತಿದೆ. ಆದ್ರೆ ಅಂತಿಮವಾಗಿ ಮಂಡ್ಯ ಯುದ್ಧಕ್ಕೆ ಧುಮುಕೋದು ಯಾರು ಅನ್ನೋದನ್ನ ಕಾದು ನೋಡ್ಬೇಕು.

Sulekha