ಖ್ಯಾತ ನೇತ್ರತಜ್ಞ ಡಾ.ಭುಜಂಗ ಶೆಟ್ಟಿ ಇನ್ನಿಲ್ಲ – ಡಾ.ರಾಜ್ & ಪುನೀತ್ ಕಣ್ಣುಗಳಿಂದ ಹಲವರಿಗೆ ಬೆಳಕು  

ಖ್ಯಾತ ನೇತ್ರತಜ್ಞ ಡಾ.ಭುಜಂಗ ಶೆಟ್ಟಿ ಇನ್ನಿಲ್ಲ – ಡಾ.ರಾಜ್ & ಪುನೀತ್ ಕಣ್ಣುಗಳಿಂದ ಹಲವರಿಗೆ ಬೆಳಕು  

ಸಾವಿರಾರು ಅಂಧರ ಬಾಳಿಗೆ ಬೆಳಕಾಗಿದ್ದರು. ಜಗತ್ತನೇ ನೋಡದವರಿಗೆ ದಾರಿ ದೀಪವಾಗಿದ್ರು. ಕಣ್ಣಿಲ್ಲದವರಿಗೆ ಕಣ್ಣಾಗಿ ಜಗತ್ತನ್ನ ತೋರಿಸುತ್ತಿದ್ದ ಖ್ಯಾತ ನೇತ್ರ ತಜ್ಞ ಭುಜಂಗಶೆಟ್ಟಿ ವಿಧಿವಶರಾಗಿದ್ದಾರೆ. ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ದೇಶದ ಖ್ಯಾತ ನೇತ್ರ ತಜ್ಞರಾಗಿದ್ದ ಭುಜಂಗ ಶೆಟ್ಟಿ ಅವರು ಯಶವಂತಪುರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶುಕ್ರವಾರ ಸಂಜೆ ಹೃದಯಾಘಾತ ಸಂಭವಿಸಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ನೀಡಿ ಮನೆಗೆ ವಾಪಸ್ಸಾಗಿದ್ದ ಭುಜಂಗ ಶೆಟ್ಟಿ ಅವರಿಗೆ ತೀವ್ರ ಹೃದಯಾಘಾತ ಉಂಟಾಗಿದ್ದು ನಿಧನರಾಗಿದ್ದಾರೆ. ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಲು ಕಾರಣರಾಗಿದ್ದರು. ಅವರು ಕಣ್ಣಿನ ಪೊರೆ ಮತ್ತು ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿದ್ದರು. ಅವರು ನಾರಾಯಣ ನೇತ್ರಾಲಯದ ಅಧ್ಯಕ್ಷರೂ ಆಗಿದ್ದರು.

ಇದನ್ನೂ ಓದಿ : ಸಿದ್ದು ಸಂಪುಟಕ್ಕೆ 8 ಮಂದಿ ಸಚಿವರ ಆಯ್ಕೆ – ಇಂದೇ ಪ್ರಮಾಣ ವಚನ

ಹೃದಯಾಘಾತದಿಂದ ನಿಧನ ಹೊಂದಿರುವ ಭುಜಂಗಶೆಟ್ಟಿ ಅವರು ಡಾ. ರಾಜ್​ಕುಮಾರ್ ಕುಟುಂಬದ ಜೊತೆಗೆ ಒಳ್ಳೆಯ ಒಡನಾಟ ಹೊಂದಿದ್ದರು. ರಾಜ್​ಕುಮಾರ್ (Rajkumar) ಅವರಿಗೆ ಕಣ್ಣಿನ ದಾನ ಮಾಡುವಂತೆ ಪ್ರೇರೇಪಣೆ ನೀಡಿದ್ದು ಭುಜಂಗ ಶೆಟ್ಟಿ ಅವರೇ ಅನ್ನೋದು ವಿಶೇಷ. ಅಣ್ಣಾವ್ರು ನೇತ್ರದಾನ ಮಾಡಲು ನೋಂದಣಿ ಮಾಡಿಸಿದ ನಂತರ ‘ರಾಜ್​ಕುಮಾರ್ ನೇತ್ರದಾನ ಕೇಂದ್ರ’ವನ್ನು ಭುಜಂಗ ಶೆಟ್ಟಿ ಸ್ಥಾಪಿಸಿದರು. ರಾಜ್​ಕುಮಾರ್ ಅವರಿಂದ ಪ್ರೇರಿತರಾಗಿ ಅದೆಷ್ಟೋ ಮಂದಿ ನೇತ್ರದಾನ ಮಾಡಲು ಮುಂದೆ ಬಂದಿದ್ದಾರೆ. ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರ ಕಣ್ಣುಗಳಿಂದ ಅನೇಕರಿಗೆ ದೃಷ್ಟಿ ಬಂದಿದೆ.

1993ರಲ್ಲಿ ನಾರಾಯಣ ನೇತ್ರಾಲಯವನ್ನು ಉದ್ಘಾಟನೆ ಮಾಡಿದ್ದು ರಾಜ್​ಕುಮಾರ್. ನಂತರ 1994ರಲ್ಲಿ ‘ರಾಜ್​ಕುಮಾರ್ ನೇತ್ರದಾನ ಕೇಂದ್ರ’ ಆರಂಭ ಆಗುತ್ತದೆ. ಇದನ್ನು ಉದ್ಘಾಟನೆ ಮಾಡಿದ್ದು ಕೂಡ ರಾಜ್​ಕುಮಾರ್ ಅವರೇ. ಅಂದು ರಾಜ್​ಕುಮಾರ್ ಅವರು ತಮ್ಮ ಜೊತೆ ಕುಟುಂಬದವರೂ ಕಣ್ಣುಗಳನ್ನು ದಾನ ಮಾಡುವ ಘೋಷಣೆ ಮಾಡಿದರು. ಕೆಲ ತಿಂಗಳ ಹಿಂದೆ ಕಲಾಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಡಾ. ಭುಜಂಗ ಶೆಟ್ಟಿ ಅವರು ಮಾತನಾಡಿದ್ದರು. ‘ರಾಜ್​ಕುಮಾರ್ ಅವರು ಮೃತಪಟ್ಟಾಗ ರಾಘಣ್ಣ ಅವರ ಕಾಲ್ ಬಂತು. ಅಣ್ಣಾವ್ರ ಕಣ್ಣನ್ನು ತೆಗೆದುಕೊಂಡು ಹೋಗಬೇಕು ಅಂದರು. ನಾನು ಮನೆಗೆ ಹೋಗಿ ಕಣ್ಣನ್ನು ತೆಗೆದುಕೊಂಡು ಬಂದೆ. ಅಂದು ಬೆಂಗಳೂರು ಹೊತ್ತಿ ಉರಿಯುತ್ತಿತ್ತು. ಇದರ ಮಧ್ಯೆಯೂ ರಾಜ್​ಕುಮಾರ್ ಕಣ್ಣನ್ನು ಇಬ್ಬರಿಗೆ ನೀಡಲಾಯಿತು’ ಎಂದಿದ್ದರು ಭುಜಂಗ ಶೆಟ್ಟಿ.

‘ಕಣ್ಣುಗಳಿಂದ ಕರಿಗುಡ್ಡೆಯನ್ನು ಮಾತ್ರ ತೆಗೆದುಕೊಳ್ಳುತ್ತೇವೆ. ಕಣ್ಣಿನ ಕರಿಗುಡ್ಡೆ ಡ್ಯಾಮೇಜ್ ಆದಂತಃ ಸಾಕಷ್ಟು ಜನರು ಇರುತ್ತಾರೆ. ಮೃತರ ಕಣ್ಣಿನ ಕರಿಗುಡ್ಡೆಯನ್ನು ನಾವು ಕಣ್ಣು ಇಲ್ಲದವರಿಗೆ ಹಾಕುತ್ತೇವೆ. ಪುನೀತ್ ರಾಜ್​ಕುಮಾರ್ ಅವರ ಕಾರ್ನಿಯಾನ ಬೇರ್ಪಡಿಸಿ ನಾಲ್ಕು ಜನರಿಗೆ ನೀಡಿದೆವು. ಆ ರೀತಿ ಆಗಿದ್ದು ಇದೇ ಮೊದಲು’ ಎಂದು ಮಾಹಿತಿ ನೀಡಿದ್ದರು ಭುಜಂಗ ಶೆಟ್ಟಿ. ಕೆಲವರಿಗೆ ಕಾರ್ನಿಯಾ ಮುಂಭಾಗ ಡ್ಯಾಮೇಜ್ ಆದರೆ, ಇನ್ನೂ ಕೆಲವರಿಗೆ ಹಿಂಭಾಗ ಡ್ಯಾಮೇಜ್ ಆಗಿರುತ್ತದೆ. ಪುನೀತ್ ಕಾರ್ನಿಯಾನ ಬೇರ್ಪಡಿಸಿದ್ದರಿಂದ ಹಿಂಭಾಗ ಡ್ಯಾಮೇಜ್ ಆದವರಿಗೆ ಹಿಂಭಾಗದ ಕಾರ್ನಿಯಾ, ಮುಂಭಾಗ ಡ್ಯಾಮೇಜ್ ಆದವರಿಗೆ ಮುಂಭಾಗದ ಕಾರ್ನಿಯಾ ಹಾಕಲಾಯಿತು.

suddiyaana