40 ಲಕ್ಷ ಖರ್ಚು ಮಾಡಿ ಮದ್ವೆ ಮಾಡಿಸಿದ್ರೂ 4 ತಿಂಗಳು ಉಳಿಯಲಿಲ್ಲ ದಾಂಪತ್ಯ! – ಹನಿಮೂನ್‌ನ ಅರ್ಧಕ್ಕೆ ಬಿಟ್ಟು ಬಂದ ನವವಿವಾಹಿತೆ ದುರಂತ ಅಂತ್ಯ!

ಆಕೆ ಸುಂದರ ಸಂಸಾರದ ಕನಸು ಕಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಮದುವೆಯನ್ನ ಕೂಡ ಅದ್ದೂರಿಯಾಗಿ ನಡೆಸಲಾಗಿತ್ತು. ಈ ಜೋಡಿ ಹನಿಮೂನ್‌ಗೆ ಕೂಡ ಹೋಗಿತ್ತು. ಆದ್ರೆ ಈ ವೇಳೆ ಇವರಿಬ್ಬರ ಮಧ್ಯೆ ಜಗಳ ಶುರುವಾಗಿದ್ದು. ಅರ್ಧದಲ್ಲೇ ಹನಿಮೂನ್‌ನಿಂದ ವಾಪಾಸ್ ಬಂದಿದ್ದಾರೆ. ಮದುವೆಯಾದ ಕೆಲವೇ ದಿನಕ್ಕೆ ತವರುಮನೆ ಸೇರಿದ ನವವಿವಾಹಿತೆ ಸಾವಿನ ಹಾದಿ ಹಿಡಿದಿದ್ದಾಳೆ.
ಇದನ್ನೂ ಓದಿ: ಚಿತ್ರದುರ್ಗ ಬಸ್ ದುರಂತ – ಗಂಭೀರವಾಗಿ ಗಾಯಗೊಂಡಿದ್ದ ಬಸ್ ಚಾಲಕ ರಫೀಕ್ ಸಾವು
ಈ ಹೃದಯವಿದ್ರಾವಕ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಮೃತ ಗಾನವಿ ಹಾಗೂ ಸೂರಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು. ಮದುವೆಗಾಗಿ ಬರೋಬ್ಬರಿ 40 ಲಕ್ಷ ರೂಪಾಯಿ ಖರ್ಚು ಮಾಡಿದ್ರು. ಆದ್ರೆ ಈ ಜೋಡಿ ದಾಂಪತ್ಯ ಜೀವನ 4 ತಿಂಗಳು ಉಳಿಯಲಿಲ್ಲ. ಸುಂದರ ಜೀವನ ಕಟ್ಟಿಕೊಳ್ಳಬೇಕಿದ್ದ ಈ ನವಜೋಡಿ ಕೆಲವೇ ದಿನದಲ್ಲಿ ದೂರವಾಗಿದ್ದಾರೆ. ಅರ್ಧದಲ್ಲೇ ಹನಿಮೂನ್‌ನಿಂದ ವಾಪಸ್ಸಾಗಿ ಆತ್ಮಹತ್ಯೆ ಯತ್ನಿಸಿದ್ದ ನವವಧು ಗಾನವಿ(26) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಗಾನವಿ ಹಾಗೂ ಸೂರಜ್ ಮದುವೆ ಮುಗಿಯುತ್ತಿದ್ದಂತೆ ಹನಿಮೂನ್‌ಗೆ ತೆರಳಿದ್ದರು. ಕಳೆದ ಹತ್ತು ದಿನಗಳ ಹಿಂದೆ ಶ್ರೀಲಂಕಾಗೆ ಹನಿಮೂನ್‌ಗೆಂದು ಹೋಗಿದ್ದರು. ಆದರೆ ಶ್ರೀಲಂಕಾದಲ್ಲಿರುವಾಗಲೇ ಇಬ್ಬರ ಮಧ್ಯೆ ಜಗಳ ನಡೆದಿದೆ. ಇದ್ರಿಂದಾಗಿ ಭಾನುವಾರ (ಡಿ.21) ಹನಿಮೂನ್ ಮುಗಿಸದೇ ಅರ್ಧಕ್ಕೆ ಶ್ರೀಲಂಕಾದಿಂದ ಇಬ್ಬರು ವಾಪಸ್ಸಾಗಿದ್ದರು. ಜಗಳದ ಹಿನ್ನೆಲೆ ಸೋಮವಾರ (ಡಿ.22) ಗಾನವಿ ಕುಟುಂಬಸ್ಥರು ಆಕೆಯನ್ನು ಮನೆಗೆ ಕರೆ ತಂದಿದ್ದರು. ಆದ್ರೆ ಡಿ.23ರ ಮಧ್ಯಾಹ್ನ ಹೊತ್ತಿಗೆ ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಮನೆಯವರು ಗಾನವಿಯನ್ನ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಾಗಲೇ ಗಾನವಿ ಬ್ರೈನ್ ಡೆಡ್ ಆಗಿತ್ತು. ಹೀಗಾಗಿ ಆಕೆಯನ್ನ ವೈದ್ಯರು ವೆಂಟಿಲೇಟರ್‌ನಲ್ಲಿ ಇರಿಸಿದ್ದರು. ಆದರೆ ಗುರುವಾರ (ಡಿ.25) ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಗಾನವಿ ಸಾವನ್ನಪ್ಪುತ್ತಿದ್ದಂತೆ ಆಕೆಯ ಕುಟುಂಬಸ್ಥರು ಸೂರಜ್ ಕುಟುಂಬಸ್ಥರ ಕಿರುಕುಳದ ಆರೋಪ ಮಾಡಿದ್ದಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಸೂರಜ್ ಕುಟುಂಬದ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆಗೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಸೂರಜ್ ಕುಟುಂಬಸ್ಥರ ವಿಚಾರಣೆ ನಡೆಸಲಿದ್ದಾರೆ.

ನೋಡಿರಿ

