ಅರ್ಜುನನನ್ನು ಕೊಂದು ಕಾಡಾನೆಗೆ ಕೊಲೆಗಾರನ ಪಟ್ಟ ಕಟ್ಟಿದ್ರಾ – ಅಧಿಕಾರಿಗಳೇ ಸತ್ಯ ಮುಚ್ಚಿಟ್ಟಿದ್ದೇಕೆ?

ಅರ್ಜುನನನ್ನು ಕೊಂದು ಕಾಡಾನೆಗೆ ಕೊಲೆಗಾರನ ಪಟ್ಟ ಕಟ್ಟಿದ್ರಾ – ಅಧಿಕಾರಿಗಳೇ ಸತ್ಯ ಮುಚ್ಚಿಟ್ಟಿದ್ದೇಕೆ?

ಕಾಡು ಮೇಡು ಅಲೆಯುತ್ತಾ ನಾನು ನಡೆದಿದ್ದೇ ದಾರಿ ಎಂದು ಬದುಕಿದ್ದ ಬಲಿಶಾಲಿ ಆನೆ ಅದು. ಜನರ ಕಣ್ಣಲ್ಲಿ ಪುಂಡಾನೆ ಅಂತಾನೇ ಕರೆಸಿಕೊಂಡಿದ್ದ ಆ ಗಜರಾಜ ಕೊನೆಗೊಂದು ದಿನ ಖೆಡ್ಡಾಗೆ ಬಿದ್ದ. ಹಠ, ಒರಟುತನ, ರೋಷ, ರಂಪಾಟ ಎಲ್ಲಾ ಮರೆತ. ಮಾವುತ ಹೇಳಿದ ಒಂದೊಂದು ಮಾತನ್ನೂ ಮನದಟ್ಟು ಮಾಡಿಕೊಂಡು ಮಗುವಿನಂತೆ ಮೃದುವಾಗಿದ್ದ. ದಸರಾ ಅಂಬಾರಿಯಲ್ಲಿ ನಾಡದೇವಿಯನ್ನ ಹೊತ್ತು ಮೆರೆಸುತ್ತಾ ಕರುನಾಡ ಮನೆ ಮಗನೇ ಆಗಿಬಿಟ್ಟ. ಖಳನಾಯಕನಾಗಿ ಸಿಕ್ಕ ಆತ ಕೊನೆಗೆ ಅರ್ಜುನ ಅಂತಾ ಹೆಸರಿಟ್ಟುಕೊಂಡು ಕನ್ನಡಿಗರ ಮನಸ್ಸನ್ನೇ ಗೆದ್ದು ಬಿಟ್ಟ. ಸತತ 8 ಬಾರಿ ದಸರೆಯಲ್ಲಿ ಅಂಬಾರಿ ಹೊತ್ತು ಜಗವನ್ನೇ ಸೆಳೆದ. ಇನ್ನೇನು ನಿವೃತ್ತನಾಗಿ ತಿಂದುಂಡು ಕಾಲ ಕಳೆಯಬೇಕಿದ್ದ ಅರ್ಜುನ ಕೊಲೆಯಾಗಿ ಹೋಗಿದ್ದಾನೆ. ಇಳಿ ವಯಸ್ಸಿನ ಅರ್ಜುನನನ್ನ ಕರೆದೊಯ್ದು ಅಧಿಕಾರಿಗಳೇ ಕೊಂದು ಬಿಟ್ಟಿದ್ದಾರೆ. ಅರಿವಳಿಕೆ ತಜ್ಞರು ಮಾಡಿದ ಒಂದು ಎಡವಟ್ಟಿನಿಂದ ನಮ್ಮ ನಿಮ್ಮೆಲ್ಲರ ಪ್ರೀತಿಯ ಅರ್ಜುನ ಇನ್ನೆಂದೂ ಬಾರದ ಲೋಕ ಸೇರಿದ್ದಾನೆ.

ಇದನ್ನೂ ಓದಿ : ಮುಗಿಯಿತು ಗಾಂಭೀರ್ಯದ ಪಯಣ – ಮಣ್ಣಲ್ಲಿ ಮಣ್ಣಾದ ಮಾಜಿ ಕ್ಯಾಪ್ಟನ್‌ ಅರ್ಜುನ

ಕಳೆದ ಕೆಲವು ದಿನಗಳಿಂದ ಹಾಸನದ ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಾಡಾನೆಯಾಗಿರುವ ಒಂದು ಆನೆಗೆ ಪ್ರಶಾಂತ ಅಂತಾ ಹೆಸರಿಟ್ಟು ಅರಣ್ಯಾಧಿಕಾರಿಗಳು ರೇಡಿಯೋ ಕಾಲರ್ ಅಳವಡಿಸಿ ಬಿಟ್ಟಿದ್ರು. ಆದ್ರೆ ಪ್ರಶಾಂತ ಆನೆ ಪದೇ ಪದೇ ಗ್ರಾಮಗಳತ್ತ ಬಂದು ಉಪಟಳ ನೀಡ್ತಿದ್ದರಿಂದ ಆತನನ್ನು ಸೆರೆ ಹಿಡಿದು ಬೇರೆ ಕಡೆ ಸ್ಥಳಾಂತರ ಮಾಡುವುದು ಅರಣ್ಯಾಧಿಕಾರಿಗಳ ಪ್ಲ್ಯಾನ್ ಆಗಿತ್ತು. ಹೀಗಾಗಿ ಅರ್ಜುನ ಸೇರಿದಂತೆ ನಾಲ್ಕು ಸಾಕಾನೆಗಳೊಂದಿಗೆ ಸೋಮವಾರ ಕಾರ್ಯಾಚರಣೆ ಆರಂಭಿಸಿದ್ದರು. ಪ್ರಶಾಂತನಿಗೆ ಅರಿವಳಿಕೆ ಮದ್ದು ನೀಡಿ ಆತನಿಗೆ ಚಿಕಿತ್ಸೆ ನೀಡುತ್ತಿದ್ರು. ಈ ವೇಳೆ ಅದೆಲ್ಲಿತ್ತೋ ಏನೋ ಕಾಡಿನಿಂದ ಮದವೇರಿದ್ದ ಪುಂಡಾನೆಯೊಂದು ಏಕಾಏಕಿ ನುಗ್ಗಿ ಬಂದಿದೆ. ಅಸಲಿಗೆ ಮದ ಏರಿದ್ದ ಆನೆಗೆ ಬೇರೆ ಆನೆಗಳು ಮುಖ ಕೊಡಲ್ಲ. ಯಾಕಂದ್ರೆ ಮದ ಏರಿದ್ದ ಆನೆ ಅತ್ಯಂತ ಸಿಟ್ಟಿನಿಂದ ಇರುತ್ತೆ. ಇಂಥಾ ಟೈಮಲ್ಲಿ ಮದ ಬಂದ ಮತ್ತೊಂದು ಆನೆಯೇ ಮುಖ ಕೊಡ್ಬೇಕು. ಹೀಗಾಗಿ  ಮದವೇರಿದ್ದ ಆನೆ ಹುಚ್ಚಾನೆಯಂತೆ ವರ್ತಿಸುತ್ತೆ ಅನ್ನೋದು ಅಲ್ಲಿದ್ದ ಅರಣ್ಯಾಧಿಕಾರಿಗಳಿಗೂ ಗೊತ್ತಿತ್ತು. ಆದ್ರೂ ಅಧಿಕಾರಿಗಳು ಕಾಡಾನೆಗೆ ಅರ್ಜುನನ ಮುಖವನ್ನು ಕೊಡಿಸಿದ್ದಾರೆ. ಬಳಿಕ ಎರಡೂ ಆನೆಗಳು ಘೀಳಿಡುತ್ತಾ ಕಾದಾಡುವ ಸದ್ದಿಗೆ ಕಾಡೇ ಕಂಪಿಸುವಂತಾಗಿದೆ. ಅರ್ಜುನನ ಮೇಲಿದ್ದ ಮಾವುತ ಮತ್ತು ಕಾವಾಡಿ ಕೆಳಗೆ ಬಿದ್ದು ಅಲ್ಲಿಂದ ಓಡಿ ಹೋಗಿದ್ದಾರೆ. ಸುಮಾರು ಹೊತ್ತು ಕಾಡಾನೆ ಮತ್ತು ಪುಂಡಾನೆ ನಡುವೆ ಕಾದಾಟ ನಡೆದಿದ್ದು ಈ ವೇಳೆ ಅರಣ್ಯಾಧಿಕಾರಿಗಳು ಪುಂಡಾನೆಗೆ ಅರಿವಳಿಗೆ ಮದ್ದು ನೀಡಲು ಫೈರ್ ಮಾಡಿದ್ದಾರೆ. ಆದ್ರೆ ಗ್ರಹಚಾರ ನೋಡಿ ಕಾಡಾನೆಗೆ ಬೀಳಬೇಕಿದ್ದ ಅರಿವಳಿಕೆ ಇಂಜೆಕ್ಷನ್ ಮಿಸ್ ಫೈರ್ ಆಗಿ ಅರ್ಜುನನಿಗೆ ಬಿದ್ದಿದೆ. ಈವರೆಗೂ ವೀರಾವೇಷದಿಂದ ಕಾದಾಡುತ್ತಿದ್ದ ಅರ್ಜುನನ ಬಲವನ್ನೇ ಅರಿವಳಿಕೆ ಇಂಜೆಕ್ಷನ್ ಕುಗ್ಗಿಸಿ ಬಿಟ್ಟಿತ್ತು. ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಮರಕ್ಕೆ ಒರಗಿಕೊಂಡಿದ್ದ ಅರ್ಜುನನ ಮೇಲೆ ಕಾಡಾನೆ ಮತ್ತೆ ದಾಳಿ ಮಾಡಿತ್ತು. ಮದದಲ್ಲಿದ್ದ ಕಾಡಾನೆ ಬಲಹೀನನಾಗಿ ನಿಂತಿದ್ದ ಅರ್ಜುನನ ಹೊಟ್ಟೆಗೆ ದಂತದಿಂದ ತಿವಿದಿತ್ತು. ಗಂಭೀರ ಗಾಯಗಳಿಂದಾಗಿ ಕುಸಿದು ಬಿದ್ದ ಅರ್ಜುನ ಎಲ್ಲರೆದುರೇ ಉಸಿರು ಚೆಲ್ಲಿದ್ದ.

ಅರ್ಜುನ ಚಿಕ್ಕ ವಯಸ್ಸಿನಲ್ಲೇ ಖೆಡ್ಡಾಗೆ ಬಿದ್ದು ಸಾಕಾನೆಯಾಗಿ ಬದಲಾಗಿದ್ದ. ಆತನಿಗೆ ಟ್ರೈನಿಂಗ್ ನೀಡಿದ್ದರಿಂದ ಆತ ಮಾವುತರು ಕಮ್ಯಾಂಡ್ ಮಾಡಿದ್ರೆ ಮಾತ್ರವೇ ಕೇಳುತ್ತಿದ್ದ. 35 ವರ್ಷದ ಹಾಗೂ ತನಗಿಂತಲೂ ಬಲಿಷ್ಠವಾಗಿದ್ದ ಕಾಡಾನೆ ಮುಂದೆ 64 ವರ್ಷದ ಅರ್ಜುನ ಪರಾಕ್ರಮದಿಂದಲೇ ಹೋರಾಡುತ್ತಿದ್ದ. ಆದ್ರೆ ಅರಿವಳಿಕೆ ತಜ್ಞರು ನೀಡಿದ್ದ ಇಂಜೆಕ್ಷನ್ ನಿಂದ ತಾನೇ ಬಲ ಕಳೆದುಕೊಂಡು ಪುಂಡಾನೆ ಎದುರು ಮಂಡಿಯೂರಿ ಜೀವ ಬಿಟ್ಟಿದ್ದ. ಕಾಡಾನೆಯೊಂದಿಗೆ ಸೆಣಸಾಡಿ ವೀರಮರಣ ಹೊಂದಿದ ಅರ್ಜುನ ಬಹುದೊಡ್ಡ ಪರಾಕ್ರಮಿ. ಬಲಶಾಲಿ ಕೂಡ. 6 ಸಾವಿರ ಕೆಜಿ ತೂಗುತ್ತಿದ್ದ ಅರ್ಜುನ, ಗಜಪಡೆಯ ಎಲ್ಲಾ ಆನೆಗಳಿಗಿಂತ ಅವನೇ ಹೆಚ್ಚು ತೂಕವಿದ್ದ. ಅಂಬಾರಿಯ ರಾಯಭಾರಿ ಆಗಿದ್ದ. ದಸರೆಯ ಕಿರೀಟವೂ ಅವನೇ ಆಗಿದ್ದ. ಹೀಗಾಗೇ ಅರ್ಜುನನ ಸಾವು ಹತ್ತಾರು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಅರ್ಜುನನನ್ನ ಕಾಡಾನೆ ಕೊಂದಿದ್ದರೂ ಕೂಡ ಅರಣ್ಯಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಬೇಕೆಂಬ ಕೂಗು ಎದ್ದಿದೆ. ಯಾಕಂದ್ರೆ ಸಾಲು ಸಾಲು ಎಡವಟ್ಟುಗಳು ನಡೆದಿವೆ. ಉತ್ತರ ಸಿಗದ ಹಲವಾರು ಪ್ರಶ್ನೆಗಳಿವೆ.

Shantha Kumari