ಮತ್ತೆ ಜಗತ್ತಿನ ಸರ್ವನಾಶದ ಎಚ್ಚರಿಕೆ ನೀಡಿದ ‘ಡೂಮ್ಸ್ ಡೇ ಕ್ಲಾಕ್’..!

ಮತ್ತೆ ಜಗತ್ತಿನ ಸರ್ವನಾಶದ ಎಚ್ಚರಿಕೆ ನೀಡಿದ ‘ಡೂಮ್ಸ್ ಡೇ ಕ್ಲಾಕ್’..!

‘ಡೂಮ್ಸ್ ಡೇ ಕ್ಲಾಕ್’ ಇದು ಜಗತ್ತಿನ ಸರ್ವನಾಶದ ಮುಳ್ಳು. ಜಗತ್ತಿಗೆ ಬಂದಿರುವ ಅಪಾಯಗಳ ಪರಿಣಾಮವನ್ನ ಸೂಚಿಸುವ ಮುಳ್ಳು. ಈ ಮುಳ್ಳು ಮಧ್ಯರಾತ್ರಿ 12 ಗಂಟೆಗೆ ಬಂದು ನಿಂತಿದೆ ಅಂದರೆ ಅಂದು ಜಗತ್ತಿನ ಮಾನವೀಯತೆಯ ಸರ್ವನಾಶವೆಂದು ಅರ್ಥ. ಈ ಬಾರಿ ಅಂದರೆ 2023 ರಲ್ಲಿ ಈ ಡೂಮ್ಸ್ ಡೇ ಗಡಿಯಾರದ ಮುಳ್ಳು 12 ಕ್ಕೆ ತಲುಪಲು ಕೇವಲ 90 ಸೆಕೆಂಡ್ ಅಂತರದಲ್ಲಿ ಇದೆಯಂತೆ. ಅಂದ ಹಾಗೇ 2020 ರಿಂದ ಈ ಡೂಮ್ಸ್ ಡೇ ಗಡಿಯಾರದ ಮುಳ್ಳು 12 ಗಂಟೆಗೆ ತಲುಪಲು ಕೇವಲ 100 ಸೆಕೆಂಡ್ಸ್ ಅಂತರದಲ್ಲಿ ಇತ್ತು. ಈ ಬಾರಿ ಗಡಿಯಾರದ ಮುಳ್ಳು ಹತ್ತು ಸೆಕೆಂಡ್ ಮುಂದಕ್ಕೆ ಚಲಿಸಿ ಜಗತ್ತು ಆಪತ್ತಿನ ಬಾಗಿಲಲ್ಲೇ ನಿಂತಿದೆ. ಮತ್ತು ಗಡಿಯಾರದ ಮುಳ್ಳನ್ನ ಹಿಂದಕ್ಕೆ ಸರಿಸುವ ಯಾವುದೇ ಒಳಿತು ಜಗತ್ತಿನಲ್ಲಿ ಆಗಿಲ್ಲ ಎಂಬ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:  ಗ್ಯಾಸ್ ಸ್ಟವ್ ಬಳಕೆಯಿಂದ ಮಕ್ಕಳಲ್ಲಿ ಅಸ್ತಮಾ ಹೆಚ್ಚಳ! – ನಿಷೇಧದ ಬಗ್ಗೆ ನಡೀತಿದೆ ಜೋರು ಚರ್ಚೆ..!

ಡೂಮ್ಸ್ ಡೇ ಗಡಿಯಾರ ಎಂದರೇನು?

‘ಡೂಮ್ಸ್ ಡೇ ಕ್ಲಾಕ್’ ಇದು ಮಾನವನ ಅಸ್ತಿತ್ವಕ್ಕೆ ಎದುರಾಗುವ ಅಪಾಯಗಳ ಮತ್ತು ಬೆದರಿಕೆಗಳ ಬಗ್ಗೆ ವಿಜ್ಞಾನ ಮತ್ತೂ ಭದ್ರತಾ ತಂಡದ ತೀರ್ಪನ್ನು ಪ್ರತಿನಿಧಿಸುತ್ತದೆ. 1945 ರಲ್ಲಿ ಆಲ್ಬರ್ಟ್ ಐನ್‍ಸ್ಟೈನ್(Albert Einstein ) ಹಾಗೂ ಯೂನಿವರ್ಸಿಟಿ ಆಫ್ ಚಿಕಾಗೋ ದವರು ಸೇರಿ ಬುಲೆಟಿನ್ ಆಫ್ ಆಟಾಮಿಕ್ ವಿಜ್ಞಾನಿಗಳ ಸಮಿತಿಯನ್ನು ರಚಿಸಿದ್ದರು. ನೋಬಲ್ ಪುರಸ್ಕೃತ 16 ವಿಜ್ಞಾನಿಗಳು ಈ ಸಮಿತಿಯ ಸದಸ್ಯರಾಗಿದ್ದರು. ಅಂದು ಅಮೆರಿಕಾ, ಹಿರೋಶಿಮಾ ಮತ್ತೂ ನಾಗಸಾಕಿ ಮೇಲೆ ಅಣುಬಾಂಬ್ ಪ್ರಯೋಗ ಮಾಡಿದ ಸಮಯ. ಆ ದುರಂತದಿಂದ ಉಂಟಾದ ಘೋರ ಹಾನಿ, ಅದರ ಪರಿಣಾಮಗಳ ಬಗ್ಗೆ ಪ್ರಪಂಚವನ್ನ ಎಚ್ಚರಿಸುವ ಮತ್ತು ಜಾಗೃತಿ ಮೂಡಿಸುವ ಉದ್ದೇಶಕ್ಕೆಂದು 1947 ರಲ್ಲಿ ಬುಲೆಟಿನ್ ಆಫ್ ಅಟಾಮಿಕ್ ವಿಜ್ಞಾನಿಗಳ ಸಮಿತಿ ಈ ಡೂಮ್ಸ್ ಡೇ ಗಡಿಯಾರವನ್ನು ರಚಿಸಿದ್ದರು. ಆರಂಭದಲ್ಲಿ ಅಂದರೆ 1947ರಲ್ಲಿ ಈ ಗಡಿಯಾರದ ಮುಳ್ಳನ್ನು ಮಧ್ಯರಾತ್ರಿ 12 ಗಂಟೆಗೆ 7 ನಿಮಿಷ ಇರುವಂತೆ ಅದನ್ನು ಸೆಟ್ ಮಾಡಿದ್ದರು. ಇದಾದ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನವನ ಅಸ್ತಿತ್ವಕ್ಕೆ ಉಂಟಾಗುವ ಅಪಾಯಗಳು ಅದರಲ್ಲೂ ಮುಖ್ಯವಾಗಿ ಪರಮಾಣು ಯುದ್ಧ, ಬೆದರಿಕೆ, ಹವಾಮಾನ ವೈಪರಿತ್ಯ, ರಾಜಕೀಯ ಉದ್ವಿಗ್ನತೆ, ಸಾಂಕ್ರಾಮಿಕ ಕಾಯಿಲೆ ಮುಂತಾದ ಅಂಶಗಳನ್ನು ಮುಖ್ಯವಾಗಿಟ್ಟುಕೊಂಡು ಇವುಗಳಿಂದ ಪ್ರಪಂಚವು ಎಷ್ಟರ ಮಟ್ಟಿಗೆ ಅಪಾಯದ ಸ್ಥಿತಿಯಲ್ಲಿದೆ ಅನ್ನೋ ತೀರ್ಪನ್ನು ಈ ವಿಜ್ಞಾನಿಗಳ ಸಮಿತಿಯು ನೀಡುತ್ತಾ ಬಂದಿದೆ. ಆಯಾಯ ಪರಿಸ್ಥಿತಿಗೆ ತಕ್ಕಂತೆ ಗಡಿಯಾರದ ಮುಳ್ಳನ್ನು ಹಿಂದಕ್ಕೆ ಅಥವಾ ಮುಂದಕ್ಕೆ ಸರಿಸುವ ಮೂಲಕ ತಿಳಿಸುತ್ತಾರೆ. ಪ್ರತಿ ವರುಷ ಜನವರಿ ತಿಂಗಳಲ್ಲಿ ಈ ಗಡಿಯಾರದ ಮುಳ್ಳನ್ನ ಆ ವರುಷದ ಪರಿಸ್ಥಿತಿಗೆ ತಕ್ಕಂತೆ ಹೊಂದಿಸುತ್ತಾರೆ. ಇದುವರೆಗೂ ಗಡಿಯಾರ ಮುಳ್ಳು 24 ಬಾರಿ ಚಲಿಸಿದ್ದು ಅದರಲ್ಲಿ ಎಂಟು ಬಾರಿ ಹಿಂದಕ್ಕೆ ಮತ್ತೂ ಹದಿನಾರು ಬಾರಿ ಮುಂದಕ್ಕೆ ಚಲಿಸಿದೆ. 1991 ರಲ್ಲಿ ಶೀತಲ ಸಮರ ಕೊನೆಯಾದಾಗ ಗಡಿಯಾರದ ಮುಳ್ಳು 17 ನಿಮಿಷ ಹಿಂದಕ್ಕೆ ಚಲಿಸಿತ್ತು.

2018 ರಲ್ಲಿ ಈ ಡೂಮ್ಸ್ ಡೇ ಗಡಿಯಾರ ಮಧ್ಯರಾತ್ರಿಗೆ ಕೇವಲ 2 ನಿಮಿಷವಿದೆ ಅನ್ನೋ ಸಂದೇಶವನ್ನ ಕೊಟ್ಟಿತ್ತು. 2018 ರ ಸಮಯ, ಅದೂ ಕೋವಿಡ್ ಪಿಡುಗಿಗೆ ತತ್ತರಿಸುವ ಮೊದಲು ಈ ಸಮಿತಿಯು ಅಂದರೆ ಡೂಮ್ಸ್ ಡೇ ಕ್ಲಾಕ್, ಆ ಸಂದರ್ಭದಲ್ಲಿ ಜಾಗತಿಕ ನಾಯಕರ ನಡುವಿನ ತಿಕ್ಕಾಟ, ಪರಮಾಣು ಯುದ್ಧದ ಆತಂಕದ ನಡುವೆ ಕೊಟ್ಟ ಸಂದೇಶವಾಗಿತ್ತು. ಆದಾದ ನಂತರ 2020 ರಿಂದ 2021 ರವರೆಗೂ ಈ ಗಡಿಯಾರದ ಮುಳ್ಳು ಮಧ್ಯ ರಾತ್ರಿ ತಲುಪಲು ಕೇವಲ 100 ಸೆಕೆಂಡ್ ಮಾತ್ರ ಬಾಕಿ ಉಳಿದಿತ್ತು ಅನ್ನೋ ಸೂಚನೆಯನ್ನ ಕೊಟ್ಟಿತ್ತು. ಹವಾಮಾನ ವೈಪರಿತ್ಯ, ಕೋವಿಡ್, ಹರಿದಾಡುತ್ತಿರುವ ತಪ್ಪು ಮಾಹಿತಿಗಳು, ಹೈಪರ್‌ಸಾನಿಕ್ ಶಸ್ತ್ರಾಸ್ತ್ರ, ಮೊದಲಾದ ಅಂತಾರಾಷ್ಟ್ರೀಯ ಉದ್ವಿಗ್ನತೆಯ ಕಾರಣಗಳಿಂದ 2020 ರಿಂದ ಗಡಿಯಾರದ ಮುಳ್ಳನ್ನು ಕೇವಲ 100 ಸೆಕೆಂಡ್ ಅಂತರದಲ್ಲಿ ಸೆಟ್ ಮಾಡಲಾಗಿತ್ತು. 2023ರಲ್ಲಿ ಇನ್ನೂ ಹತ್ತು ಸೆಕೆಂಡ್ ಮುಂದಕ್ಕೆ ಚಲಿಸಿರುವ ಗಡಿಯಾರದ ಮುಳ್ಳು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ, ಪರಮಾಣು ಯುದ್ಧದ ಭಯ , ಜೈವಿಕ ಬೆದರಿಕೆಯನ್ನ ಪ್ರತಿಬಿಂಬಿಸುತ್ತದೆ. ಈಗ ಮಧ್ಯರಾತ್ರಿ 12 ಗಂಟೆಯಿಂದ ಕೇವಲ 90 ಸೆಕೆಂಡ್‌ನಷ್ಟು ಮಾತ್ರ ಡೂಮ್ಸ್‌ ಡೇ ಗಡಿಯಾರದ ಮುಳ್ಳು ಹಿಂದಿದೆ. ಹಾಗಿದ್ದರೂ ಜನರಲ್ಲಿರುವ ಭರವಸೆ ಮತ್ತೂ ಬೆಳೆಯುತ್ತಿರುವ ಜಾಗೃತಿಯನ್ನು ಗಮನಿಸಿರುವ ಸಮಿತಿಯು ಗಡಿಯಾರದ ಮುಳ್ಳನ್ನು ಮಧ್ಯ ರಾತ್ರಿ 12 ಗಂಟೆಗೆ ತಂದಿಲ್ಲವಾದರೂ ಜಗತ್ತು ಅಪಾಯಕಾರಿ ಸ್ಥಿತಿಯಲ್ಲಿಯೇ ಇದೆ ಎಂದೇ ವಿಮರ್ಶಿಸುತ್ತಿದ್ದಾರೆ.

ಅಂದ ಹಾಗೇ ಈ ಡೂಮ್ಸ್ ಡೇ ಕ್ಲಾಕ್, ಜಗತ್ತಿನ ಸರ್ವನಾಶದ ಬಗ್ಗೆ ತಿಳಿಸುವ ಒಂದು ಕಾಲ್ಪನಿಕ ಗಡಿಯಾರವಾದರೂ ವಾಸ್ತವವನ್ನು ತಿಳಿಸುವ, ವೈಜ್ಞಾನಿಕ ತಳಹದಿಯಲ್ಲಿ ಎಚ್ಚರಿಸುವ ಒಂದು ಎಚ್ಚರಿಕೆಯ ಗಂಟೆ ಎಂದೇ ಪ್ರಸಿದ್ಧಿ ಪಡೆದಿದೆ.

suddiyaana