ನೀವು ಮಕ್ಕಳ ಎದುರು ಈ ತಪ್ಪುಗಳನ್ನು ಮಾಡಬೇಡಿ! – ಮಕ್ಕಳ ಜೊತೆ ಪೋಷಕರ ನಡವಳಿಕೆ ಹೇಗಿದ್ರೆ ಉತ್ತಮ?
ಪ್ರತಿಯೊಬ್ಬ ಪೋಷಕರಿಗೂ ತಾನಂದುಕೊಂಡಂತೆ ಬೆಳೆಯಬೇಕು ಅನ್ನೋ ಆಸೆ ಇರುತ್ತೆ. ಮಗ, ಮಗಳು ಉತ್ತಮ ಪ್ರಜೆಯಾಗ್ಬೇಕು, ಒಳ್ಳೆ ಕೆಲ್ಸದಲ್ಲಿ ಇರ್ಬೇಕು ಅಂತಾ ಕನಸು ಕಂಡಿರುತ್ತಾರೆ. ಆದರೆ, ಮಗು ಐದು ವರ್ಷಗಳನ್ನು ಕ್ರಮಿಸಿದ ನಂತರ ಮಗುವಿನ ಬೆಳವಣಿಗೆ ಬೇರೆ ರೀತಿಯಲ್ಲೇ ಇರುತ್ತದೆ. ಮಗುವಿನ ಚಟುವಟಿಕೆಗಳು, ಮಾನಸಿಕ ಸ್ಥಿತಿಗಳು, ಸ್ನೇಹಿತರ ಒಡನಾಟ, ಶಾಲೆಗಳಿಗೆ ತೆರಳುವುದು, ಅಲ್ಲಿ ವಿಭಿನ್ನ ವ್ಯಕ್ತಿತ್ವದ ಜನರ ಜೊತೆ ಬೆರೆಯುವುದು ಈ ಎಲ್ಲಾ ಅಂಶಗಳು ಸೇರಿ ಮಗುವಿನ ಮಾನಸಿಕ ಸ್ಥಿತಿ ಹಾಗೂ ಸ್ಥೈರ್ಯವನ್ನು ಬೇರೆ ರೀತಿಯಲ್ಲಿ ಬೆಳೆಯಲು ಆರಂಭಿಸುತ್ತದೆ.
ಮಗುವನ್ನು ಉತ್ತಮ ರೀತಿಯಲ್ಲಿ ಬೆಳೆಸಬೇಕು ಎಂದು ನಾವು ಮಾಡುವ ಕೆಲವು ವಿಷಯಗಳು ಮಗುವಿನ ಆರೋಗ್ಯದ ಮೇಲೆ, ಮಾನಸಿಕ ಸ್ಥಿತಿಯ ಮೇಲೆ ಬಹಳಷ್ಟು ಪರಿಣಾಮವನ್ನು ಉಂಟುಮಾಡುತ್ತದೆ. ಮಗುವಿಗೆ ಒಳ್ಳೆಯದನ್ನು ಮಾಡಬೇಕೆಂಬ ಹಂಬಲ ನಿಮಗೆ ತಿಳಿಯದಂತೆ ಮಗುವಿಗೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಹಾಗಾದರೆ ನಾವು ತಿಳಿಯದೆ ಮಾಡುವ ಕೆಲವೊಂದು ತಪ್ಪುಗಳು ಮಗುವಿನ ಮಾನಸಿಕ ಸ್ಥೈರ್ಯದ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ, ಇವುಗಳನ್ನು ತಡೆಗಟ್ಟಲು ಏನು ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಇದನ್ನೂ ಓದಿ: ಮಾತು-ಮಾತಿಗೂ ಮಕ್ಕಳಿಗೆ ಹೊಡೆಯೋಕು ಮೊದ್ಲು ಈ ವಿಚಾರ ತಿಳಿಯಲೇ ಬೇಕು!
ಮಕ್ಕಳ ಆಶಯಗಳು ಎಂದಿಗೂ ಪವಿತ್ರವಾಗಿರುತ್ತದೆ. ಹಾಗಾಗಿ ಮಕ್ಕಳು ಏನೇ ಯೋಚಿಸಿದರು ಕೂಡ ಅದಕ್ಕೊಂದು ಬೆಲೆಯಿರುತ್ತದೆ. ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡಾಗ ಅವುಗಳನ್ನು ನಿರ್ವಹಿಸುವ ರೀತಿ ಬಹಳ ಮುಖ್ಯ. ನೀವು ಅವುಗಳನ್ನು ಕೇಳುತ್ತಿದ್ದಂತೆಯೇ ನೇರವಾಗಿ ಅಲ್ಲಗಳೆದರೆ ಮುಂದೆ ಅವರ ಮನಸ್ಸಿನಲ್ಲಿರುವ ಭಾವನೆಗಳನ್ನು ಅವರು ನಿಮ್ಮೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ ಹಾಗೂ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ಒತ್ತಡ, ಆತಂಕಗಳಿಗೆ ಗುರಿಯಾಗಿ, ಮಾನಸಿಕ ಸ್ಥೈರ್ಯವನ್ನು ಕಳೆದುಕೊಳ್ಳುತ್ತಾರೆ.
ಆದ್ದರಿಂದ, ಮಕ್ಕಳ ಭಾವನೆಗಳು ಎಂತಹುದೇ ಆಗಲಿ ಅವುಗಳನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಪೋಷಕರಾಗಿ ನೀವು ಅವುಗಳನ್ನು ನಿಧಾನವಾಗಿ ವಿಮರ್ಶಿಸಿ, ಅವುಗಳಲ್ಲಿ ತಪ್ಪಿದ್ದರೆ ಮಕ್ಕಳಿಗೆ ಸೂಕ್ಷ್ಮವಾಗಿ ತಿಳಿಹೇಳಬೇಕು. ಇನ್ನು ಅವರು ತೆಗೆದುಕೊಂಡ ನಿರ್ಧಾರಗಳು ಹಾಗೂ ಆಯ್ಕೆಗಳನ್ನು ಕೀಳಾಗಿ ನೋಡಬೇಡಿ. ಅವರು ತೆಗೆದುಕೊಂಡ ನಿರ್ಧಾರ ಸರಿಯಾಗಿಲ್ಲದಿದ್ರೆ ಆ ನಿರ್ಧಾರವನ್ನು ತೆಗೆದುಕೊಂಡಾಗ ಮಕ್ಕಳಿಗೆ ಏನೆಲ್ಲಾ ಕಷ್ಟಗಳು ಸಂಭವಿಸಬಹುದು ಎಂಬುವುದನ್ನು ಬಿಡಿಸಿ ಹೇಳಿ. ಇನ್ನು ಮಕ್ಕಳಲ್ಲಿ ಪ್ರತಿಯೊಂದರಲ್ಲೂ ಪರಿಪೂರ್ಣತೆಯನ್ನು ಹುಡುಕಬೇಡಿ ಮಕ್ಕಳಿಗೆ ಯಾವಾಗಲೂ ಬಹುದೊಡ್ಡ ಕನಸುಗಳನ್ನು ಕಾಣಲು, ದೊಡ್ಡ ಗುರಿಗಳನ್ನು ಹೊಂದಲು ನಾವು ಕಲಿಸಬೇಕು. ಅವರನ್ನು ಸದಾ ಮೋಟಿವೇಟ್ ಮಾಡುತ್ತಾ ಇರ್ಬೇಕು. ಇದನ್ನು ಹೊರತುಪಡಿಸಿ ಸಮಾಜ ಹೇಗೆ ನಡೆಯುತ್ತದೆ ನೀನು ಕೂಡ ಹಾಗೆ ನಡೆಯಬೇಕು ಎಂದು ಒತ್ತಡ ಹಾಕಬೇಡಿ. ನೀವು ಸಾಧಿಸಲು ಆಗದಿದ್ದ ಕನಸುಗಳನ್ನು ಮಕ್ಕಳು ಸಾಧಿಸಲೇಬೇಕು ಎಂದು ಹಿಂಸಿಸಬೇಡಿ. ಈ ರೀತಿಯ ತಪ್ಪನ್ನು ಎಂದಿಗೂ ಮಾಡಬೇಡಿ. ಇದು ನಿಮ್ಮ ಮಗುವಿನ ಮಾನಸಿಕ ಸ್ಥೈರ್ಯ ಹಾಗು ಸ್ಥಿತಿಗಳ ಮೇಲೆ ನೇರವಾದ ಪರಿಣಾಮವನ್ನು ಉಂಟುಮಾಡುತ್ತದೆ.