‘ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ಮುಚ್ಚಬೇಡಿ’ – ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ
ಇಂದಿರಾ ಕ್ಯಾಂಟೀನ್. ಅದೆಷ್ಟೋ ಬಡವರ, ಆರ್ಥಿಕವಾಗಿ ಹಿಂದುಳಿದವರ ಹಸಿವನ್ನು ನೀಗಿಸುವ ಮೂಲಕ ಯಶಸ್ವೀ ಯೋಜನೆಯಾಗಿ ರೂಪುಗೊಂಡಿತ್ತು. ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹೆಸರು ಇರುವ ಕಾರಣಕ್ಕೆ ಕಡಿಮೆ ದರದಲ್ಲಿ ಬಡವರ ಹಸಿವನ್ನು ನೀಗಿಸುವ ಮೂಲಕ ಉಪಹಾರ, ಊಟ ಒದಗಿಸಲು ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಆದರೆ, ಈಗ ಇಂದಿರಾ ಕ್ಯಾಂಟೀನ್ ಒಂದೊಂದಾಗಿಯೇ ಮುಚ್ಚಲಾಗುತ್ತಿದೆ. ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿರುವ ಬಿಜೆಪಿ ಸರ್ಕಾರದ ನಡೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಬಡವರ ಹೊಟ್ಟೆಯ ಮೇಲೆ ಬರೆ ಹಾಕುವ ಕೆಲಸವನ್ನು ಮಾಡುತ್ತಿರುವ ಬಿಜೆಪಿ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ‘ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ’ – ಸದನದಲ್ಲಿ ಗುಡುಗಿದ ಸಿದ್ದರಾಮಯ್ಯ
ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಡಿಮೆ ದರದಲ್ಲಿ ಬಡವರ ಹಸಿವನ್ನು ನೀಗಿಸುವ ಮೂಲಕ ಉಪಹಾರ, ಊಟ ಒದಗಿಸುವ ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿದ್ದಾರೆ. ಇದು ಸಾರ್ವಜನಿಕರ ಹಾಗೂ ಬಡವರಿಗೆ ಮಾಡುವ ದೊಡ್ಡ ಅನ್ಯಾಯವಾಗಿದೆ ಎಂದರು. ಹಸಿವು ಮುಕ್ತ ರಾಜ್ಯ ನಿರ್ಮಾಣದ ಕನಸನ್ನು ಕಂಡಿರುವ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸುಮಾರು 400 ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗಿತ್ತು. ಬಡವರು, ವಿದ್ಯಾರ್ಥಿಗಳು, ಆಟೋ ಚಾಲಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಊಟ ಒದಗಿಸುವ ಇಂದಿರಾ ಕ್ಯಾಂಟೀನ್ ರಾಜಕೀಯ ಉದ್ದೇಶದಿಂದ ಮುಚ್ಚಲು ಹೊರಟಿರುವುದು ನಿಜಕ್ಕೂ ಜನ ವಿರೋಧಿ ನಡೆಯಾಗಿದೆ. ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ಮುಚ್ಚಕೂಡದು ಎಂದು ಎಚ್ಚರಿಕೆ ನೀಡಿದರು. ಸರಕಾರ ಮತ್ತು ಬಿಬಿಎಂಪಿ ಅಧಿಕಾರಿಗಳ ಅಸಡ್ಡೆಯಿಂದಾಗಿ ಹಲವು ಕ್ಯಾಂಟೀನ್ಗಳಿಗೆ ಬೀಗ ಬಿದ್ದಿದೆ ಎಂದು ಆರೋಪ ಮಾಡಿದರು.