ಜನರ ಬಳಿ ಮತ ಕೇಳೋಕೂ ಮುನ್ನ ಕಾಂಗ್ರೆಸ್ ಕಾಸು ಕೇಳ್ತಾ ಇದ್ಯಾ? – ಏನಿದು ಡೊನೇಟ್ ಫಾರ್ ದೇಶ್?

ಜನರ ಬಳಿ ಮತ ಕೇಳೋಕೂ ಮುನ್ನ ಕಾಂಗ್ರೆಸ್ ಕಾಸು ಕೇಳ್ತಾ ಇದ್ಯಾ? – ಏನಿದು ಡೊನೇಟ್ ಫಾರ್ ದೇಶ್?

ಕಾಂಗ್ರೆಸ್..ದೇಶದ ಅತ್ಯಂತ ಹಿರಿಯ ಪಕ್ಷ.. 138 ವರ್ಷಗಳ ಇತಿಹಾಸ ಹೊಂದಿರೋ ಪಾರ್ಟಿ.. 60ಕ್ಕೂ ಹೆಚ್ಚು ವರ್ಷ ದೇಶವನ್ನ ಆಳಿದ ಪಕ್ಷ. ಒಂದು ಕಾಲದಲ್ಲಿ ಭಾರತದ ಅತೀ ಶ್ರೀಮಂತ ಪಕ್ಷವಾಗಿದ್ದ ಇದೇ ಕಾಂಗ್ರೆಸ್ ದೇಣಿಗೆ ಸಂಗ್ರಹಿಸೋ ಪರಿಸ್ಥಿತಿಗೆ ತಲುಪಿದೆ. ​ಕಾಂಗ್ರೆಸ್ ಸದ್ಯ ​ಆಡಳಿತದಲ್ಲಿರೋದು ಮೂರೇ ರಾಜ್ಯಗಳಲ್ಲಿ. ಮೇಲಿಂದ ಮೇಲೆ ಚುನಾವಣೆಗಳನ್ನೂ ಸೋತು ಪಕ್ಷದ ಖಜಾನೆಯೂ ಖಾಲಿಯಾಗಿದೆ. ಇನ್ನು ಕೆಲ ತಿಂಗಳುಗಳಲ್ಲೇ ಲೋಕಸಭೆ ಚುನಾವಣೆಯನ್ನೂ ಎದುರಿಸಬೇಕಿದೆ. ಇಂಡಿಯಾ ಮೈತ್ರಿಕೂಟದ ಜೊತೆ ಸೇರಿಕೊಂಡ್ರೂ ನಾಯಕರಿಗೆ ದೇಶ ಸುತ್ತೋಕೆ, ಪ್ರಚಾರ ನಡೆಸೋಕೆ ಕಾಸು ಬೇಕೇ ಬೇಕು. ಆದ್ರೆ ಜನರ ಬಳಿ ಮತ ಕೇಳೋಕೂ ಮುನ್ನ ಕಾಂಗ್ರೆಸ್ ಕಾಸು ಕೇಳ್ತಾ ಇದೆ. ಆದ್ರೆ, ಈ ಕೆಲಸವನ್ನಾದ್ರೂ ಸರಿ ಮಾಡಬೇಕಾಗಲ್ಲ. ಅಲ್ಲೂ ಕಾಂಗ್ರೆಸ್ ಎಡವಟ್ಟು ಮಾಡಿಕೊಂಡಿದೆ. ಕಾಂಗ್ರೆಸ್​ಗೆ ಅಂತಾ ಹಾಕಿದ ಕಾಸು ಸೀದಾ ತನ್ನ ಅಕೌಂಟ್​​ಗೆ ಬೀಳುವಂತೆ ಬಿಜೆಪಿ ಪ್ಲ್ಯಾನ್ ಮಾಡಿದೆ. ಕೇಸರಿ ಕಲಿಗಳು ಅಕ್ಷರಶ: ಕಾಂಗ್ರೆಸಿಗರನ್ನ ಮೋಯೆ ಮೋಯೆ ಮಾಡಿದ್ದಾರೆ. ಅಷ್ಟಕ್ಕೂ ಈ ದೇಣಿಗೆ ಸಂಗ್ರಹದಲ್ಲಿ ಕಾಂಗ್ರೆಸ್​ ಮಾಡಿಕೊಂಡ ಎಡವಟ್ಟೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಕರ್ನಾಟಕದಲ್ಲಿ ಹೆಚ್ಚುತ್ತಿದೆ ಕೋವಿಡ್‌ ಕೇಸ್‌.. ದೇಶದಲ್ಲಿ ರಾಜ್ಯಕ್ಕೆ 2 ನೇ ಸ್ಥಾನ – ಕಾದಿದೆಯೇ ಲಾಕ್‌ಡೌನ್‌?

ಡಿಸೆಂಬರ್ 17ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡೊನೇಟ್ ಫಾರ್ ದೇಶ್ ಅಂದ್ರೆ ದೇಶಕ್ಕಾಗಿ ದೇಣಿಗೆ ಅನ್ನೋ ಹೆಸರಲ್ಲಿ ಕ್ರೌಡ್ ಫಂಡಿಂಗ್, ಜನರಿಂದ ದೇಣಿಗೆ ಸಂಗ್ರಹ ಮಾಡೋ ಕ್ಯಾಂಪೇನ್ ಆರಂಭಿಸಿದ್ರು. ಪಕ್ಷ​​ ಸ್ಥಾಪನೆಯಾಗಿ 138 ವರ್ಷಗಳಾಗ್ತಾರೋ ಹಿನ್ನೆಲೆಯಲ್ಲಿ ದೇಣಿಗೆ ಸಂಗ್ರಹಿಸೋಕೆ ಕಾಂಗ್ರೆಸ್ ಮುಂದಾಗಿದೆ. 138 ರೂಪಾಯಿ, 1,380 ರೂಪಾಯಿ ಅಥವಾ 1 ಲಕ್ಷದ 38,000 ರೂಪಾಯಿ ದೇಣಿಗೆ ನೀಡಬಹುದು. ಹಾಗೆಯೇ ಖುದ್ದು ಮಲ್ಲಿಕಾರ್ಜುನ ಖರ್ಗೆ ಅವರು 1 ಲಕ್ಷ 38 ಸಾವಿರ ರೂಪಾಯಿ ದೇಣಿಗೆ ಕೂಡ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದ್ರು. ಬಳಿಕ ಮಾತನಾಡಿದ್ದ ಖರ್ಗೆ, ಇದೇ ಮೊದಲ ಬಾರಿಗೆ ಕಾಂಗ್ರೆಸ್ ಜನರಿಂದ ದೇಶಕ್ಕಾಗಿ ದೇಣಿಗೆ ಕೇಳ್ತಾ ಇದೆ. ನೀವು ಕೇವಲ ಶ್ರೀಮಂತರನ್ನ ಮಾತ್ರ ಡಿಪೆಂಡ್ ಆಗಿ ಕೆಲಸ ಮಾಡಿದ್ರೆ ಅವರ ನೀತಿಗಳನ್ನೇ ಫಾಲೋ ಮಾಡಬೇಕಾಗುತ್ತೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರು ಕೂಡ ಜನರಿಂದ ದೇಣಿಗೆ ಸಂಗ್ರಹಿಸಿದ್ರು. ಹೀಗಾಗಿ ದೇಶಕ್ಕಾಗಿ ದೇಣಿಗೆ ನೀಡಿ ನಿರುದ್ಯೋಗ, ಬೆಲೆ ಏರಿಕೆ ವಿರುದ್ಧದ ಹೋರಾಟಲ್ಲಿ ಪಾಲ್ಗೊಳ್ಳಿ ಅಂತಾ ಖರ್ಗೆಯವರು ಮನವಿ ಮಾಡಿದ್ರು. ಡಿಸೆಂಬರ್​ 28ಕ್ಕೆ ಕಾಂಗ್ರೆಸ್​ ಸ್ಥಾಪನೆಯಾಗಿ ಭರ್ತಿ 138 ವರ್ಷಗಳಾಗುತ್ತೆ. ಅಲ್ಲಿವರೆಗೂ ಆನ್​ಲೈನ್ ಮೂಲಕ ಜನರು ದೇಣಿಗೆ ನೀಡಬಹುದು. ಡಿಸೆಂಬರ್ 28ರ ಬಳಿಕ ಒಬ್ಬೊಬ್ಬರಿಂದ ಕನಿಷ್ಠ 138 ರೂಪಾಯಿಯನ್ನಾದ್ರೂ ಸಂಗ್ರಹಿಸೋಕೆ ಕಾಂಗ್ರೆಸ್​ ಕಾರ್ಯಕರ್ತರು ದೇಶಾದ್ಯಂತ ಮನೆ ಮನೆಗೆ ತೆರಳಲಿದ್ದಾರೆ. ಇದಕ್ಕಾಗಿ ಸುಮಾರು 10 ಲಕ್ಷ ಬೂತ್​ಗಳನ್ನ ಕಾಂಗ್ರೆಸ್ ಟಾರ್ಗೆಟ್ ಮಾಡಿದೆ. ಇಲ್ಲಿ ದೇಣಿಗೆ ಸಂಗ್ರೆಹಿಸ್ತಿರೋ ಮೂಲ ಉದ್ದೇಶ, ಮುಂಬರುವ ಲೋಕಸಭೆ ಚುನಾವಣೆ. ಸದ್ಯ ಕಾಂಗ್ರೆಸ್ ಹಣಕಾಸು ಸಮಸ್ಯೆ ಎದುರಿಸ್ತಾ ಇರೋದು ಸುಳ್ಳಲ್ಲ. ಬಿಜೆಪಿ ಜೊತೆಗೆ ಫೈಟ್ ಮಾಡುವಷ್ಟು ಹಣ ಬಲ ಕಾಂಗ್ರೆಸ್ ಬಳಿ ಇಲ್ಲ. ಹೀಗಾಗಿ ಜನರಿಂದ ದೇಣಿಗೆ ಸಂಗ್ರಹಿಸಲೇಬೇಕಾದ ಅನಿವಾರ್ಯ ದೇಶದ ಅತ್ಯಂತ ಹಿರಿಯ ಪಕ್ಷಕ್ಕೆ ಎದುರಾಗಿದೆ. ಚುನಾವಣೆ ಸಂದರ್ಭದಲ್ಲಿ ಜನರಿಂದ ದೇಣಿಗೆ ಸಂಗ್ರಹ ಕಾರ್ಯವನ್ನ ಎಲ್ಲಾ ಪಕ್ಷಗಳು ಕೂಡ ಮಾಡ್ತವೆ. ಬಿಜೆಪಿಯಾಗಲಿ, ಟಿಎಂಸಿಯಾಗಲಿ, ಆಮ್ ಆದ್ಮಿ ಪಾರ್ಟಿಯಾಗಲಿ ಎಲ್ಲಾ ಪಕ್ಷಗಳು ಆನ್​​ಲೈನ್​ ಮೂಲಕ ದೇಣಿಗೆ ಸಂಗ್ರಹಿಸುತ್ತವೆ. ಈವನ್ ಅಮೆರಿಕದಲ್ಲೂ ಕೂಡ ಅಧ್ಯಕ್ಷೀಯ ಚುನಾವಣೆಗೂ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷ ಜನರಿಂದ ದೇಣಿಗೆ ಸಂಗ್ರಹಿಸುತ್ತವೆ. ಇದ್ರಲ್ಲಿ ತಪ್ಪೇನೂ ಇಲ್ಲ.. ಇದು ಪ್ರಜಾಪ್ರಭುತ್ವದ ಒಂದು ಭಾಗ.

Shwetha M