ಈ ಮಾತ್ರೆ ಕಾಯಿಲೆಗೆ ಮಾತ್ರ ಅಲ್ಲ.. – ಬಟ್ಟೆಯ ಕೊಳೆಯನ್ನು ತೆಗೆಯುತ್ತೆ!

ಈ ಮಾತ್ರೆ ಕಾಯಿಲೆಗೆ ಮಾತ್ರ ಅಲ್ಲ.. – ಬಟ್ಟೆಯ ಕೊಳೆಯನ್ನು ತೆಗೆಯುತ್ತೆ!

ಗೃಹಿಣಿಯರ ಒಂದೇ ಟೆನ್ಶನ್‌ ಅಂದ್ರೆ ಬಟ್ಟೆ ಒಗೆಯುವಾಗ ಕಲೆ ಹೋಗದೇ ಇರುವುದು. ಏನೇ ಹಾಕಿದ್ರೂ ಕೆಲವೊಂದು ಕಲೆಗಳು ಹಾಗೇ ಉಳಿದುಕೊಂಡು ಬಿಡುತ್ತೆ. ಹೀಗಾಗಿ ಡಿಟರ್ಜೆಂಟ್ ಪೌಡರ್ ಅಥವಾ ಡಿಟರ್ಜೆಂಟ್ ಲಿಕ್ವಿಡ್ ಬಳಿಸಿ ಬಟ್ಟೆ ಒಗೆಯುತ್ತಾರೆ. ಆದ್ರೆ ಬಿಳಿ ಬಣ್ಣದ ಬಟ್ಟೆ ಮೇಲೆ ಕಲೆ ಆಗಿದ್ರೆ, ಏನ್‌ ಮಾಡಿದ್ರೂ ಹೋಗಲ್ಲ. ಎಷ್ಟು ತಿಕ್ಕಿ ತೊಳೆದ್ರೂ ಹಠಮಾರಿ ಕಲೆ ಹೋಗುವುದೇ ಇಲ್ಲ. ಹೀಗಿರುವಾಗ ಇಲ್ಲೊಬ್ಬಳು ಮಹಿಳೆ ಮಾತ್ರೆ ಬಳಸಿ ಬಟ್ಟೆಯ ಕಲೆ ಹೋಗಲಾಡಿಸಿದ್ದಾಳೆ. ಇದು ಯಾವುದೇ ಬಟ್ಟೆ ಒಗೆಯುವ ಹೊಸ ಮಾತ್ರೆ ಅಲ್ಲ. ಅಸಲಿಗೆ ಆಕೆ ಬಳಸಿದ ಮಾತ್ರೆ ಡೋಲೋ 650!

ಇದನ್ನೂ ಓದಿ: ಸ್ನಾನಕ್ಕೆ ತೆರಳಿದ್ದ ಯುವತಿ ಗೀಸರ್ ಗ್ಯಾಸ್ ಸೋರಿಕೆಯಾಗಿ ಸಾವು – ಅಣ್ಣನ ಮದುವೆ ಸಂಭ್ರಮದ ಹೊತ್ತಲ್ಲೇ ಆವರಿಸಿತು ಸೂತಕ

ಹೌದು, ಅಚ್ಚರಿಯಾದ್ರೂ ಸತ್ಯ. ಕೆಲವರು ಮನೆಯಲ್ಲಿ ಸುಮ್ಮನೆ ಕುಳಿತಿದ್ದಾಗ ಏನಾದರೊಂದು ಹೊಸತನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಇದೀಗ ಇಲ್ಲೊಬ್ಬಳು ಬಟ್ಟೆ ಮೇಲಿರುವ ಹಠಮಾರಿ ಕಲೆಯನ್ನು ಕೇವಲ ಮಾತ್ರೆ ಬಳಸಿ ತೆಗೆದಿದ್ದಾಳೆ. ಡೋಲೋ 650 ಮಾತ್ರೆಯಿಂದ ಬಟ್ಟೆಗಳ ಕೊಳೆಗಳನ್ನು ತೆಗೆದಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ನಂದು ನಾಯರ್  (@nair_nandu08) ಎಂಬವರು ಈ ವಿಡಿಯೋವನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಡೋಲೋ 650 ಮಾತ್ರೆಯ ಹೊಸ ಬಳಕೆ ಮಾರುಕಟ್ಟೆಗೆ ಬಂದಿದೆ, ಅಮೇರಿಕಾದ ವಿಜ್ಞಾನಿಗಳು ಭಾರತದ ಈ ಆವಿಷ್ಕಾರಕ್ಕೆ ಬೆರಗಾಗಿದ್ದಾರೆ ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಡೋಲೋ-650 ಮಾತ್ರೆಯನ್ನು ಬಳಸಿಕೊಂಡು ಬಿಳಿ ಬಟ್ಟೆಯ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು  ಬಟ್ಟೆಗಳಲ್ಲಿನ ಕಲೆಗಳನ್ನು ಡೋಲೋ-650 ಮಾತ್ರೆಯನ್ನು ಬಳಸಿ ಹೇಗೆ ತೆಗೆದುಹಾಕಬಹುದು ಎಂಬುದನ್ನು ಹೇಳಿಕೊಡುತ್ತಿರುವುನ್ನು ಕಾಣಬಹುದು. ಆ ಮಹಿಳೆ  ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಗ್ಯಾಸ್ ಒಲೆಯ ಮೇಲೆ ಕುದಿಯಲು ಇಡುತ್ತಾರೆ.  ನಂತರ ಎರಡು ಡೋಲೋ-650 ಮಾತ್ರೆಯನ್ನು ತೆಗೆದುಕೊಂಡು, ಅದನ್ನು ಚೆನ್ನಾಗಿ ಪುಡಿ ಮಾಡಿ ಕುದಿಯುತ್ತಿರುವ ನೀರಿಗೆ ಹಾಕ್ತಾರೆ. ಬಳಿಕ ಆ ನೀರಿಗೆ ಎರಡು ಚಮಚ ಬೇಕಿಂಗ್ ಸೋಡಾ ಮತ್ತು ಅರ್ಧ ಕಪ್ ಡಿಟರ್ಜೆಂಟ್ ಪೌಡರ್ ಹಾಕಿ  ಚೆನ್ನಾಗಿ ಮಿಶ್ರಣ ಮಾಡಿಕೊಳ್ಳುತ್ತಾರೆ. ಹೀಗೆ ನೀರನ್ನು ಚೆನ್ನಾಗಿ ಕುದಿಸಿ, ನಂತರ ಕಲೆಯಾಗಿರುವಂತಹ ಬಿಳಿ ಬಟ್ಟೆಯನ್ನು ತೆಗೆದುಕೊಂಡು, ಅದನ್ನು ಎರಡು ನಿಮಿಷಗಳ ಕಾಲ ಡೋಲೋ-650 ಮಾತ್ರೆಯನ್ನು ಹಾಕಿದ ನೀರಿನಲ್ಲಿ ಅದ್ದಿಡುತ್ತಾರೆ.  ಕೊನೆಯಲ್ಲಿ ಬಟ್ಟೆಯನ್ನು ತಿಕ್ಕಿ ತೊಳೆಯದೆಯೂ ಸುಲಭವಾಗಿ ಬಟ್ಟೆಯ ಕಲೆ ತೆಗೆದು ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸೋಶಿಯಲ್‌ ಮೀಡಿಯಾ ಬಳಕೆದಾರರು ಪ್ರತಿಕ್ರಿಯಿಸುತ್ತಿದ್ದಾರೆ. ʼಮೊದಲಿಗೆ ನಾನು ಆಕೆ ಪ್ಯಾರೆಸಿಟಮಾಲ್ ಮಾತ್ರೆಯಿಂದ ಖೀರ್ ತಯಾರಿಸುತ್ತಿದ್ದಾಳೆ ಅಂತಾ ಭಾವಿಸಿದೆʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಡೋಲೋ-650 ಮಾತ್ರೆಯ ಹೊಸ ತರಹದ ಪ್ರಚಾರವಾಗಿರಬಹುದುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ನಿಜಕ್ಕೂ ಅದ್ಭುತ ಮತ್ತು  ನಂಬಲಾಸಾಧ್ಯವಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ತಂತ್ರ ನಿಜಕ್ಕೂ ಪರಿಣಾಮಕಾರಿಯೇ ಎಂದು ಪ್ರಶ್ನಿಸಿದ್ದಾರೆ.

Shwetha M