ಹೆಣ್ಣು ಸಿಕ್ತಿಲ್ಲ ಅಂತಾ ಮಹದೇಶ್ವರ ಬೆಟ್ಟಕ್ಕೆ ನಡಿಗೆ – ಬ್ರಹ್ಮಚಾರಿಗಳ ಪಾದಯಾತ್ರೆಗೆ ‘ಡಾಲಿ’ ಚಾಲನೆ

ಹೆಣ್ಣು ಸಿಕ್ತಿಲ್ಲ ಅಂತಾ ಮಹದೇಶ್ವರ ಬೆಟ್ಟಕ್ಕೆ ನಡಿಗೆ – ಬ್ರಹ್ಮಚಾರಿಗಳ ಪಾದಯಾತ್ರೆಗೆ ‘ಡಾಲಿ’ ಚಾಲನೆ

ಮದುವೆ ವಯಸ್ಸು ದಾಟುತ್ತಿದೆ. 30 ವರ್ಷ ಆದರೂ ಸಂಗಾತಿ ಸಿಗುತ್ತಿಲ್ಲ. ಹೇಳುವಷ್ಟು ಹೇಳಿದ್ರು. ಕೇಳುವಷ್ಟು ಕೇಳಿಕೊಂಡರು. ಈಗ ಕೊನೆಗೂ ಬ್ರಹ್ಮಚಾರಿ ಯುವಕರು ಮಲೆ ಮಹದೇಶ್ವರನ ಮೊರೆ ಹೋಗಿದ್ದಾರೆ. ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಈ ಹೆಣ್ಣು ಸಿಗದ ಹುಡುಗರ ಪಾದಯಾತ್ರೆಗೆ ಸ್ಯಾಂಡಲ್​ವುಡ್​ ನಟ, ನಿರ್ಮಾಪಕ ಡಾಲಿ ಧನಂಜಯ್​ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ:  ಸಿಂ‘ಹಾಸನ’ ಗಟ್ಟಿ ಮಾಡಿಕೊಂಡರಾ ಭವಾನಿ ರೇವಣ್ಣ..?- ಟಿಕೆಟ್ ಫೈನಲ್ ಗೂ ಮುನ್ನವೇ ಅಬ್ಬರದ ಪ್ರಚಾರ!

‘ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆ’ ಎಂಬ ಘೋಷ ವಾಕ್ಯದೊಂದಿಗೆ ಯುವಕರೆಲ್ಲಾ ಕಾಲ್ನಡಿಗೆ ಹೊರಟಿದ್ದಾರೆ. ಅವಿವಾಹಿತ ಯುವಕರ ಪಾದಯಾತ್ರೆಗೆ ನಟ, ನಿರ್ಮಾಪಕ ಡಾಲಿ ಧನಂಜಯ್ ಚಾಲನೆ ನೀಡಿದ್ದು, ಸ್ವಲ್ಪ ದೂರ ಪಾದಯಾತ್ರಿಗಳೊಂದಿಗೆ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಬ್ರಹ್ಮಚಾರಿಗಳು ಮುಂದಿನ ವರ್ಷದೊಳಗೆ ಮದುವೆ ಆಗಲಿ ಅಂತ ಡಾಲಿ ಶುಭ ಹಾರೈಸಿದ್ದಾರೆ. ಟಗರು ಪಲ್ಯ ಚಿತ್ರದ ನಾಯಕ ನಟ ನಾಗಭೂಷಣ ಕೂಡ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಫೆಬ್ರವರಿ 23ರಿಂದ ಮೂರು ದಿನ ನಡೆಯಲಿರುವ ಪಾದಯಾತ್ರೆಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದ್ದು, ಕೇರಳ, ಆಂಧ್ರಪ್ರದೇಶದಿಂದಲೂ ಪಾದಯಾತ್ರೆಗೆ ಇಬ್ಬರು ಅವಿವಾಹಿತರು ಬಂದಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡವರಲ್ಲಿ ಬಹುತೇಕರು ರೈತರಾಗಿದ್ದು, ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಅಂತ ಬೇಸರದಲ್ಲೇ ದೇವರ ಮೊರೆ ಹೋಗಿದ್ದಾರೆ.

ರೈತರ ಮಕ್ಕಳಿಗೂ ದೇವರು ಹೆಣ್ಣು ಕೊಡುವ ಬುದ್ಧಿ ಕೊಡಲಿ ಎಂದು ಪಾರ್ಥನೆ ಮಾಡಿರುವ ಕೆ.ಎಂ.ದೊಡ್ಡಿ ಗ್ರಾಮದ ಅವಿವಾಹಿತರ ತಂಡ ಮೂರು ಷರತ್ತು ಹಾಕಿ ಪಾದಯಾತ್ರೆ ಆಯೋಜಿಸಿದ್ದಾರೆ. ಈ ಪಾದಯಾತ್ರೆಯಲ್ಲಿ ಭಾಗಿಯಾಗುವವರಿಗೆ ಕಡ್ಡಾಯವಾಗಿ 30 ವರ್ಷ ದಾಟಿರಬೇಕು. ವಿವಾಹಿತರಿಗೆ ಪಾದಯಾತ್ರೆಗೆ ಅವಕಾಶ ಇಲ್ಲ. ನಿಶ್ಚಿತಾರ್ಥ ಆದವರೂ ಪಾದಯಾತ್ರೆಗೆ ಬರುವಂತಿಲ್ಲ ಎಂಬ ಷರತ್ತು ಹಾಕಿದ್ದಾರೆ. ಕೆಎಂ ದೊಡ್ಡಿ, ಮಳವಳ್ಳಿ, ಕೊಳ್ಳೆಗಾಲ, ಹನೂರು ಮಾರ್ಗವಾಗಿ ಯುವಕರು ಮಹದೇಶ್ವರ ಬೆಟ್ಟವನ್ನು ತಲುಪಲಿದ್ದಾರೆ.

‘ಮದುವೆ ಆಗಿಲ್ಲ ಅಂತ ಪಾದಯಾತ್ರೆ ನಡೆಸುತ್ತಿರೋದನ್ನ ಕೇಳಿದ್ದು ಫಸ್ಟ್ ಟೈಮ್. ಪಾದಯಾತ್ರೆ ಯಾಕೆ ಹೊರಟಿದ್ದೀರಿ ಅಂತ ಕೇಳಿದಾಗ ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಅಂದ್ರು. ಇದು ನಿಜಕ್ಕೂ ಗಂಭೀರವಾದ ವಿಚಾರ. ನಾನು ಹಳ್ಳಿಯಿಂದಲೇ ಬಂದಿರೋದು. ಹಳ್ಳಿಗಳಿಗೆ ಹೋದಾಗಲೆಲ್ಲ ಯುವಕರನ್ನ ಮಾತನಾಡಿಸಿದಾಗ ಹೆಣ್ಣು ಸಿಕ್ತಿಲ್ಲ ಅಂತ ಹೇಳ್ತಾರೆ. ರೈತರಿಗೆ ಹೆಣ್ಣು ಸಿಗಲ್ಲ ಅಂತ ಪಾದಯಾತ್ರೆ ಹೊರಟ್ಟಿದ್ದಾರೆ. ಇದು ಕೇವಲ ಪಾದಯಾತ್ರೆ ಮಾತ್ರ ಅಲ್ಲ ಜಾಗೃತಿ ಕಾರ್ಯಕ್ರಮ. ಪಾದಯಾತ್ರೆ ಹೊರಟಿರುವವರು ಮುಂದಿನ ವರ್ಷ ಮದುವೆಯಾಗಿ ಬೆಟ್ಟಕ್ಕೆ ಹೋಗಲಿ ಅಂತ ಶುಭ ಹಾರೈಸುತ್ತೇನೆ’ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.

suddiyaana