ನಾನು ಬದುಕಲ್ಲವೆಂದು ಅಪ್ಪ-ಅಮ್ಮನಿಗೆ ಹೇಳಬೇಡಿ..- ಆ ಪುಟಾಣಿ ಮಾತು ಕೇಳಿ ಡಾಕ್ಟರ್‌ ಮಾಡಿದ್ದೇನು?
ಪುಟ್ಟ ಕಂದನ ಬಾಳಲ್ಲಿ ವಿಧಿಯಾಟ - ಧೈರ್ಯವಂತ ಪೋರನ ಬಗ್ಗೆ ಕೊನೇ ಸಾಲು ಬರೆದು ಭಾವುಕರಾದ ವೈದ್ಯರು

ನಾನು ಬದುಕಲ್ಲವೆಂದು ಅಪ್ಪ-ಅಮ್ಮನಿಗೆ ಹೇಳಬೇಡಿ..- ಆ ಪುಟಾಣಿ ಮಾತು ಕೇಳಿ ಡಾಕ್ಟರ್‌ ಮಾಡಿದ್ದೇನು?ಪುಟ್ಟ ಕಂದನ ಬಾಳಲ್ಲಿ ವಿಧಿಯಾಟ - ಧೈರ್ಯವಂತ ಪೋರನ ಬಗ್ಗೆ ಕೊನೇ ಸಾಲು ಬರೆದು ಭಾವುಕರಾದ ವೈದ್ಯರು

ಪುಟ್ಟ ಕಂದನಿಗೆ ಕೇವಲ 6 ವರ್ಷ. ಮನು ಆತನ ಹೆಸರು. ಆತನಿಗೆ ಅಪ್ಪ ಅಮ್ಮನೆಂದರೆ ಜೀವ. ಹೆತ್ತವರಿಗೆ ಮುದ್ದು ಮಗನೆಂದರೆ ಪ್ರಾಣ. ಆ ವಿಧಿಗೆ ಇವರ ಬಾಂಧವ್ಯದ ಮೇಲೆ ಅದ್ಯಾಕೆ ಅಷ್ಟೊಂದು ಸಿಟ್ಟಿತ್ತೋ.. ಮಗನಿಗೆ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಬಂದೇ ಬಿಟ್ಟಿತ್ತು. ಹೆತ್ತವರಿಗೆ ಇದು ಆಘಾತದ ಸುದ್ದಿ. ಆದರೆ, ಮಗುವಿಗೆ ಗೊತ್ತಾಗಬಾರದು. ಅವನು ಇದ್ದಷ್ಟು ದಿನ ಖುಷಿಯಾಗಿರಿಸಲು ನಾವು ಪ್ರಯತ್ನಿಸಬೇಕು ಅಂತಾ ಹೆತ್ತವರು ತಮ್ಮ ನೋವನ್ನು ಎದೆಯಲ್ಲಿರಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದರು. ಆದರೆ, 6 ವರ್ಷದ ಬಾಲಕ ಮನು ತುಂಬಾ ಚುರುಕು. ಒಂದು ದಿನ ತನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ. ಸುಧೀರ್ ಕುಮಾರ್ ಅವರ ಬಳಿ ಬಂದು, ಡಾಕ್ಟರ್ ನಿಮ್ಮಿಂದ ಸಹಾಯವಾಗಬೇಕು ಎಂದು ಕೇಳುತ್ತಾನೆ. ನೀವು ನನ್ನ ಹೆತ್ತವರೊಂದಿಗೆ ಮಾತನಾಡುತ್ತಿದ್ದಾಗ ನಾನು ಹೊರಗಡೆ ಕಾಯುತ್ತಾ ಕುಳಿತಿದ್ದೆ. ನನ್ನ ಐಪ್ಯಾಡ್ ಮೂಲಕ ನನಗಿರುವ ರೋಗದ ಬಗ್ಗೆ ಗೊತ್ತಾಯ್ತು. ನಾನು ಬರೀ ಆರು ತಿಂಗಳು ಮಾತ್ರ ಬದುಕುತ್ತೇನೆ ಅನ್ನೋದು ತಿಳಿದುಕೊಂಡೆ. ಕ್ಯಾನ್ಸರ್ ನನಗೆ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ, ಇನ್ನು ಆರು ತಿಂಗಳು ಮಾತ್ರ ಬದುಕುತ್ತೇನೆಂದು ನನ್ನ ಅಪ್ಪ ಅಮ್ಮನಿಗೆ ದಯವಿಟ್ಟು ಹೇಳಬೇಡಿ. ಅಪ್ಪ ಅಮ್ಮ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಅವರಿಗೆ ನಾನು ಹೆಚ್ಚು ಸಮಯ ಬದುಕುವುದಿಲ್ಲ ಅನ್ನೋ ವಿಷಯ ತಿಳಿಯದಂತೆ ನೋಡಿಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಾನೆ.

6 ವರ್ಷದ ಕಂದನ ತಿಳುವಳಿಕೆ, ಧೈರ್ಯ ಮತ್ತು ಹೆತ್ತವರ ಬಗ್ಗೆ ಮುಗ್ಧ ಬಾಲಕನ ಕಾಳಜಿ ನೋಡಿ ವೈದ್ಯರಿಗೂ ಹೃದಯ ಹಿಂಡುವಂತಾಗಿತ್ತು. ಇದಾದ ನಂತರ ಸ್ವಲ್ಪ ಹೊತ್ತಲ್ಲೇ ಪೋಷಕರು ಕೂಡಾ ಡಾಕ್ಟರ್, ದಯವಿಟ್ಟು ನಮ್ಮ ಮಗನಿಗೆ ಈ ವಿಚಾರ ತಿಳಿಸಬೇಡಿ ಎಂದು ವಿನಂತಿಸಿಕೊಳ್ಳುತ್ತಾರೆ. ಮಗವಿನ ಧೈರ್ಯ, ಪೋಷಕರ ವಿನಂತಿ ನೋಡಿ ಡಾ. ಸುಧೀರ್​ ಕುಮಾರ್ ಆವತ್ತು ಅಕ್ಷರಶಃ ನೋವಲ್ಲೇ ಕಳೆದಿದ್ದರು. ಡಾ. ಸುಧೀರ್ ಕುಮಾರ್ ಅಂದು ಮನುವನ್ನು ಕಂಡಿದ್ದು, ಅವನಿಗಿರುವ ಕಾಯಿಲೆಯ ಬಗ್ಗೆಯೂ ಬರೆದುಕೊಂಡಿದ್ದಾರೆ.

‘ಆರು ವರ್ಷದ ಮನು ಎಂಬ ಬಾಲಕ ಅಂದು ವೀಲ್​ ಚೇರ್ ಮೇಲೆ ಬಂದಾಗ ಅಪಾರ ಆತ್ಮವಿಶ್ವಾಸದಿಂದ ಕಂಗೊಳಿಸುತ್ತಿದ್ದ. ಆದರೆ ಪ್ರಯೋಗಾಲಯದ ವರದಿ ಬಂದಾಗ, ಅವನ ಮೆದುಳಿನ ಎಡಭಾಗದಲ್ಲಿ ಗ್ಲಿಯೋಬ್ಲಾಸ್ಟೋಮಾ ಮಲ್ಟಿಫಾರ್ಮ್​ (Glioblastoma Multiforme grade 4) ನಾಲ್ಕನೇ ಹಂತದಲ್ಲಿದೆ ಎನ್ನುವುದು ತಿಳಿಯಿತು. ನಂತರ ಬಾಲಕನೊಂದಿಗೆ ಸ್ವಲ್ಪ ಹೊತ್ತು ಸಮಯ ಕಳೆದೆವು. ಮಾತನಾಡುತ್ತಾ ಹೋದಂತೆ ಬಾಲಕ ನಿಜಕ್ಕೂ ಧೈರ್ಯಶಾಲಿ ಎನ್ನುವುದು ಅರಿವಿಗೆ ಬಂದಿತು. ತನ್ನ ಹೆತ್ತವರ ಬಗ್ಗೆ ಕಾಳಜಿ ವಹಿಸುವ ರೀತಿಗೆ ನನ್ನಲ್ಲಿ ಮಾತೇ ಇರಲಿಲ್ಲ’ ಎಂದಿರುವ ವೈದ್ಯರು, ‘ನನ್ನ ಅಪ್ಪ ಅಮ್ಮನಿಗೆ ತಿಳಿದರೆ ಅವರು ಆಘಾತಕ್ಕೆ ಒಳಗಾಗುತ್ತಾರೆ. ಏಕೆಂದರೆ ಅವರು ನನ್ನನ್ನು ತುಂಬಾನೇ ಪ್ರೀತಿಸುತ್ತಾರೆ. ದಯವಿಟ್ಟು ಅವರೊಂದಿಗೆ ಈ ವಿಷಯ ಹೇಳಬೇಡಿ ಎಂದು ಕೇಳಿಕೊಂಡ.’ ಹೀಗೆ ಆ ಪುಟಾಣಿಯ ಮನಕಲಕುವ ವಿಷಯವನ್ನು ಡಾ. ಸುಧೀರ್‌ ಕುಮಾರ್‌ ಬರೆದಿದ್ದಾರೆ.

ಮತ್ತೆ ಒಂಬತ್ತು ತಿಂಗಳುಗಳ ನಂತರ ಇದೇ ಡಾಕ್ಟರ್ ಬಳಿ ಪೋಷಕರು ಬಂದಿದ್ದರು. ‘ಒಂಬತ್ತು ತಿಂಗಳುಗಳಲ್ಲಿ ನಾನು ಈ ಘಟನೆಯನ್ನು ಬಹುತೇಕ ಮರೆತುಬಿಟ್ಟಿದ್ದೆ. ವಾಪಾಸು ಬಂದಾಗ ಮಗುವಿನ ಆರೋಗ್ಯದ ಬಗ್ಗೆ ಕೇಳಿದೆ. ನಿಮ್ಮನ್ನು ಭೇಟಿಯಾದಾಗಿನಿಂದಲೂ ಅವನಿಗೆ ಸಂಪೂರ್ಣವಾಗಿ ನಮ್ಮ ಸಮಯವನ್ನು ಕೊಟ್ಟೆವು. ನಾವಿಬ್ಬರೂ ಅವನಿಗೋಸ್ಕರ ತಾತ್ಕಾಲಿಕ ರಜೆ ತೆಗೆದುಕೊಂಡೆವು. ಅವನಿಗಿಷ್ಟವಾದ ಸ್ಥಳಗಳಿಗೆ ಕರೆದುಕೊಂಡು ಹೋದೆವು, ಡಿಸ್ನಿಲ್ಯಾಂಡ್​ಗೆ ಕೂಡ. ಆದರೆ ಅವನೀಗ ನಮ್ಮೊಂದಿಗಿಲ್ಲ’ ಎಂದರು. ‘ಆದರೆ ಅವರಿಬ್ಬರೂ ಒಂದು ತಿಂಗಳ ಹಿಂದೆ ಅವನನ್ನು ಕಳೆದುಕೊಂಡಿದ್ದರು. ಈ ವಿಷಯ ಕೇಳಿ ಬಹಳ ಸಂಕಟವಾಯಿತು. ಆ ದಿನ ಅಷ್ಟು ಆತ್ಮವಿಶ್ವಾಸದಿಂದ ನಗುತ್ತ ಮಾತನಾಡಿದ ಹುಡುಗನ ಮುಖ ಕಣ್ಮುಂದೆ ಬಂದಿತು. ಅವನ ಆ ಮುಗ್ಧತೆ, ತಿಳುವಳಿಕೆ ಆ ಮಾತುಗಳು ಕಾಡಿದವು. ಎಂಥ ಧೈರ್ಯವಂತ ಮಗುವದು! ಮತ್ತಷ್ಟು ನನ್ನನ್ನು ಸಂಕಟಕ್ಕೀಡು ಮಾಡಿದ್ದೆಂದರೆ ಅವನ ಅಪ್ಪ ಅಮ್ಮನ ಮಾತು; ‘ಆ ದಿನ ನಿಮ್ಮನ್ನು ಭೇಟಿಯಾಗಿದ್ದಕ್ಕೇ  ನಾವಿಬ್ಬರೂ 8 ತಿಂಗಳುಗಳ ಕಾಲ ಮಗನೊಂದಿಗೆ ಒಳ್ಳೆಯ ಸಮಯವನ್ನು ಕಳೆಯಲು ಸಾಧ್ಯವಾಯಿತು. ಇದಕ್ಕಾಗಿ ನಿಮಗೆ ಧನ್ಯವಾದ.’ ಭಾರವಾದ ಮನಸ್ಸಿಂದ ಡಾ. ಸುಧೀರ್ ಕುಮಾರ್ ಈ ವಿಚಾರವನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್​ ಅನ್ನು 1 ಮಿಲಿಯನ್​ ಜನರು ಓದಿದ್ದಾರೆ. ತುಂಬಾ ಜನರು ಪ್ರತಿಕ್ರಿಯಿಸಿ ಕಂಬನಿ ಮಿಡಿದಿದ್ದಾರೆ. ವಿಧಿಯಾಟ ಅಂದರೆ ಇದೇ ತಾನೇ….

suddiyaana