ಡಾಕ್ಟರ್ ಅಂತಾ ಪುಸಲಾಯಿಸಿ ಮದುವೆ ಫಿಕ್ಸ್ – ಬ್ಯಾಂಕ್ ಅಕೌಂಟ್ ಸ್ಟ್ರಕ್ ಅಂತೇಳಿ ಲಕ್ಷ ಲಕ್ಷ ವಂಚನೆ

ಹಿಂದೆಲ್ಲಾ ಸಾವಿರ ಸುಳ್ಳು ಹೇಳಿಯಾದ್ರೂ ಮದುವೆ ಮಾಡಿಸು ಅನ್ನೋ ಗಾದೆ ಇತ್ತು. ಯಾಕಂದ್ರೆ ಮದುವೆ ಅನ್ನೋದನ್ನ ಅಷ್ಟೊಂದು ಮಹತ್ವ ಕೊಡ್ತಾ ಇದ್ರು. ಆದ್ರೆ ಈಗ ಸುಳ್ಳು ಹೇಳಿ ಮದುವೆ ಆಗೋದನ್ನೇ ಖಯಾಲಿ ಮಾಡಿಕೊಂಡಿದ್ದಾರೆ. ಇಲ್ಲೊಬ್ಬ ಭೂಪ ನಾನು ದೊಡ್ಡ ಡಾಕ್ಟರ್ ಅಂತಾ ಬಿಲ್ಡಪ್ ಕೊಟ್ಟು ಸಾಲುಸಾಲು ಹುಡುಗಿಯರನ್ನ ನಂಬಿಸಿದ್ದಾನೆ. ಸಾಲದ್ದಕ್ಕೆ ಹೆಣ್ಣು ಹೆತ್ತವರಿಗೆ ಲಕ್ಷಾಂತರ ರೂಪಾಯಿ ದೋಖಾ ಮಾಡಿ ಎಸ್ಕೇಪ್ ಆಗಿದ್ದಾರೆ. ಹೀಗೆ ನೌಟಂಕಿ ಆಟ ಆಡಿದವನಿಗೆ ಹೆತ್ತ ತಾಯಿಯೇ ಸಾಥ್ ಕೊಟ್ಟಿರೋ ಆಘಾತಕಾರಿ ವಿಚಾರವೂ ಬೆಳಕಿಗೆ ಬಂದಿದೆ.
ಇದನ್ನೂ ಓದಿ : SRH ತಂಡದ ಮಾಲಕಿ ಕಾವ್ಯ ಮಾರನ್ ಮದುವೆಗೆ ಸಿದ್ಧತೆ –ಸಂಗೀತ ನಿರ್ದೇಶಕ ಅನಿರುದ್ಧ್ ಜೊತೆ ವಿವಾಹ ಫಿಕ್ಸ್
ಡಿಜಿಟಲ್ ಜಮಾನದಲ್ಲಿ ಮದುವೆಗಳೂ ಕೂಡ ಡಿಜಿಟಲ್ ಆಗಿರುವಂಥದ್ದು ನಿಮಗೆಲ್ಲಾ ಗೊತ್ತೇ ಇದೆ. ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳಲ್ಲಿ ಯುವಕ ಯುವತಿಯರು ತಮ್ಮ ಪ್ರೊಫೈಲ್ ಗಳನ್ನ ಹಾಕಿ ತಮಗೆ ಬೇಕಾದ ಸಂಬಂಧವನ್ನ ಹೆತ್ತವರ ನೇತೃತ್ವದಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈಗಂತೂ ಇದು ಸಾಮಾನ್ಯ ಆಗೋಗಿದೆ, ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಇಲ್ಲೊಬ್ಬ ತಾನು ಪಿಎಚ್ಡಿ (PhD) ಪದವೀಧರ, ಡಾಕ್ಟರ್ ಎಂದು ಸುಳ್ಳು ಪ್ರೊಫೈಲ್ ಸೃಷ್ಟಿಸಿ, ಮದುವೆಯಾಗುವುದಾಗಿ ನಂಬಿಸಿ ಮೈಸೂರು ಮತ್ತು ಬೆಂಗಳೂರಿನ ಹತ್ತಕ್ಕೂ ಹೆಚ್ಚು ಯುವತಿಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ. ಈ ವಂಚನೆ ಜಾಲದ ಸೂತ್ರಧಾರ ಪ್ರದೀಪ್ ಸೋಲೋಮನ್ ಹಾಗೂ ಆತನಿಗೆ ಸಾತ್ ನೀಡಿದ್ದು ಆತನ ತಾಯಿ ಕಲಾವತಿ. ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಇವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರ ಬಂಧನ ಭೀತಿಯಲ್ಲಿ ಅಮ್ಮ-ಮಗ ಇಬ್ಬರೂ ಎಸ್ಕೇಪ್ ಆಗಿದ್ದಾರೆ.
ಲಕ್ಷಾಂತರ ರೂಪಾಯಿ ವಂಚನೆ ಆರೋಪ ಹೊತ್ತಿರುವ ಆರೋಪಿ ಪ್ರದೀಪ್ ಸೋಲೋಮನ್ ಮ್ಯಾಟ್ರಿಮೋನಿಯಲ್ ಸೈಟ್ಗಳಲ್ಲಿ ಡಾ. ಪ್ರದೀಪ್ ಸೋಲೋಮನ್ ಹೆಸರಿನಲ್ಲಿ ಹೈ-ಫೈ ಪ್ರೊಫೈಲ್ ತೆರೆದಿದ್ದನು. ಮಗನ ಈ ವಂಚನೆ ಆಟಕ್ಕೆ ತಾಯಿ ಕಲಾವತಿ ಕೂಡ ಸಂಪೂರ್ಣ ಸಾತ್ ನೀಡಿದ್ದಳು. ಇವರಿಬ್ಬರು ಮೈಸೂರಿನಲ್ಲಿ ದೊಡ್ಡದೊಂದು ಐಷಾರಾಮಿ ಬಂಗಲೆಯನ್ನು ಬಾಡಿಗೆಗೆ ಪಡೆದು, ತಾವು ದೊಡ್ಡ ಶ್ರೀಮಂತರು ಎಂಬಂತೆ ಸಮಾಜದಲ್ಲಿ ಬಿಲ್ಡಪ್ ಕೊಡುತ್ತಿದ್ದರು. ಈ ಬಂಗಲೆ ಮತ್ತು ಅವರ ಲೈಫ್ಸ್ಟೈಲ್ ನೋಡಿ ಮದುವೆ ಸಂಬಂಧ ಬೆಳೆಸಲು ಮುಂದೆ ಬರುವ ವಧುವಿನ ಕುಟುಂಬಸ್ಥರನ್ನು ತಮ್ಮ ಬಣ್ಣದ ಮಾತುಗಳ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು. ಯುವತಿಯರ ಕುಟುಂಬದ ನಂಬಿಕೆ ಗಳಿಸಿದ ನಂತರ ನನ್ನ ದೊಡ್ಡ ಮೊತ್ತದ ಹಣ ತಾಂತ್ರಿಕ ಕಾರಣಗಳಿಂದ ಬ್ಯಾಂಕ್ನಲ್ಲಿ ಸ್ಟ್ರಕ್ (Stuck) ಆಗಿದೆ, ಇನ್ನು ಕೆಲವೇ ದಿನಗಳಲ್ಲಿ ಹಣ ವಾಪಸ್ ಬರುತ್ತದೆ, ಸದ್ಯಕ್ಕೆ ಅರ್ಜೆಂಟ್ ಇದೆ ಎಂದು ಹೇಳಿ ಲಕ್ಷ ಲಕ್ಷ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದನು. ಪ್ರದೀಪನ ಮಾತು ನಂಬಿ ಇತ್ತೀಚೆಗೆ ಬೆಂಗಳೂರು ಮೂಲದ ಶ್ರೀಮಂತ ಕುಟುಂಬವೊಂದು ಲಕ್ಷಾಂತರ ರೂಪಾಯಿ ಹಣ ನೀಡಿ ವಂಚನೆಗೊಳಗಾಗಿದೆ. ಹಣ ಕೈ ಸೇರಿದ ಬೆನ್ನಲ್ಲೇ ಅಮ್ಮ-ಮಗ ಇಬ್ಬರೂ ನಾಪತ್ತೆಯಾಗಿದ್ದಾರೆ.
ಡಾಕ್ಟರ್ ಅಂತಾ ವಂಚಿಸಿದ್ದ ಪ್ರದೀಪ್ ಕೈಯಲ್ಲಿ ಮೋಸ ಹೋದ ಮೈಸೂರು ಮತ್ತು ಬೆಂಗಳೂರಿನ ಹಲವು ಯುವತಿಯರು ಹಾಗೂ ಅವರ ಕುಟುಂಬಸ್ಥರು ಈಗ ಮೈಸೂರಿನ ಆ ಬಂಗಲೆಯ ಮುಂದೆ ಬಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಇತ್ತ ಅಡುಗೋಡಿ ಪೊಲೀಸರು ಕಳೆದ ಎರಡು ದಿನಗಳಿಂದ ವಂಚಕ ಅಮ್ಮ-ಮಗನಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಈ ಖತರ್ನಾಕ್ ಜೋಡಿಯ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ನೋಡಿರಿ

