ಕಾಡಾನೆ ದಾಳಿಯಿಂದ ಗಂಭೀರ ಸ್ಥಿತಿ ತಲುಪಿದ ವೈದ್ಯ – ಶಿವಮೊಗ್ಗದಿಂದ ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಶಿಫ್ಟ್

ಕಾಡಾನೆ ದಾಳಿಯಿಂದ ಗಂಭೀರ ಸ್ಥಿತಿ ತಲುಪಿದ ವೈದ್ಯ – ಶಿವಮೊಗ್ಗದಿಂದ ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಶಿಫ್ಟ್

ಆನೆಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಓಡೋಡಿ ಬಂದು ಚಿಕಿತ್ಸೆ ನೀಡುವ ಆಪತ್ಬಾಂಧವ. ಕಾಡಾನೆಗಳ ಆಪರೇಷನ್‌ಗಳಲ್ಲೂ ಸದಾ ಮುಂದು. ಡಾ. ವಿನಯ್ ನಿಜವಾಗಲೂ ವಿನಯವಂತನೇ. ಅದೆಷ್ಟೋ ಆನೆಗಳ ಆರೈಕೆ ಮಾಡಿದ ಡಾ.ವಿನಯ್ ಈಗ ಒಂದು ಪುಂಡಾನೆಯಿಂದಾಗಿ ಗಂಭೀರ ಪರಿಸ್ಥಿತಿಗೆ ತಲುಪಿದ್ದಾರೆ. ಆನೆ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡ ಡಾ.ವಿನಯ್ ಅವರನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ಮೂಲಕ ಶಿಪ್ಟ್ ಮಾಡಲಾಗಿದೆ.

ಇದನ್ನೂ ಓದಿ: ಕಷ್ಟಪಟ್ಟು ದುಡಿಯುತ್ತಿದ್ದ ಮಗಳನ್ನೇ ಬಲಿ ಪಡೆದ ಕಾಡಾನೆ – ವಿಧಿಯ ಅಟ್ಟಹಾಸಕ್ಕೆ ಹೆತ್ತವರ ಕಣ್ಣೀರು

ಕಳೆದ ಮೂರು ದಿನಗಳ ಹಿಂದೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಕಾಡಾನೆ ಸೆರೆ ಆಪರೇಷನ್ ವೇಳೆ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಪಶು ವೈದ್ಯ ಡಾ. ವಿನಯ್ ಅವರ ಮೇಲೆ ಆನೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ ವೈದ್ಯರ ಬೆನ್ನು ಮೂಳೆಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಬಳಿಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಡಾ. ವಿನಯ್ ಆರೋಗ್ಯ ಸ್ಥಿತಿ ಮತ್ತಷ್ಟೂ ಗಂಭೀರವಾಗಿದೆ. ಹೀಗಾಗಿ ಶಿವಮೊಗ್ಗ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದರು. ಅದರಂತೆ ರಾತ್ರಿಯೇ ಮಣಿಪಾಲ್ ವೈದ್ಯರು ಮತ್ತು ಮೆಡಿಕಲ್ ಟೀಮ್ ಸಹಾಯದೊಂದಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮೂಲಕ ಶಿವಮೊಗ್ಗದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಡಾ.ವಿನಯ್, ಕಳೆದ 10 ವರ್ಷಗಳಿಂದ ಸಕ್ರೆಬೈಲಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಶಿವಮೊಗ್ಗ,ದಾವಣಗೆರೆ,ಉತ್ತರ ಕನ್ನಡ, ಬೆಳಗಾವಿ, ಹಾಸನ ಮುಂತಾದ ಜಿಲ್ಲೆಯಲ್ಲಿ ಡಾ. ವಿನಯ ನೇತೃತ್ವದಲ್ಲಿ ಕಾಡಾಣೆಗಳ ಸೆರೆ ಹಿಡಿಯುವ ಆಪರೇಷನ್ ಗಳು ನಡೆದಿದ್ದವು. ಹತ್ತಾರು ಕಾಡಾನೆ ಸೆರೆ ಹಿಡಿಯುವ ಆಪರೇಶನ್ ನಲ್ಲಿ ಡಾ. ವಿನಯ ಮೂಂಚೂಣಿಯಲ್ಲಿರುತ್ತಿದ್ದರು. ಆದ್ರೆ ಮೊನ್ನೆ ಕಾಡಾನೆಯು ವಿನಯ್ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು. ಮಲೆನಾಡಿನಲ್ಲಿ ನೂರಾರು ಆನೆಗಳ ಅರೋಗ್ಯ ಕಾಪಾಡಿದ ಡಾ.ವಿನಯ್ ಗುಣಮುಖವಾಗಿ ಬರಲಿ ಅನ್ನೋದು ಎಲ್ಲರ ಹಾರೈಕೆಯಾಗಿದೆ.

suddiyaana