ಈ ಹೋಟೆಲ್ ಗೆ ಬಂದ್ರೆ ಊಟದ ಜೊತೆಗೆ ಸಿಗುತ್ತೆ ಕಪಾಳ ಮೋಕ್ಷ! – ದುಡ್ಡುಕೊಟ್ಟು ಹೊಡೆಸಿಕೊಳ್ಳುತ್ತಾರೆ ಜನ!

ಸಾಮಾನ್ಯವಾಗಿ ಹೋಟೆಲ್ ಗೆ ಹೊಟ್ಟೆ ತುಂಬಾ ಊಟ ಮಾಡಲು ಹೋಗುತ್ತಾರೆ. ಈ ವೇಳೆ ರುಚಿ ರುಚಿಯಾದ ಖಾದ್ಯಗಳನ್ನು ಸವಿಯುತ್ತಾರೆ. ಇನ್ನೂ ಕೆಲವರು ಹೋಟೆಲ್, ರೆಸ್ಟೋರೆಂಟ್ಗಳಲ್ಲೇ ಮೀಟಿಂಗ್ ಫಿಕ್ಸ್ ಮಾಡುತ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ಹೋಟೆಲ್ ಇದೆ. ಇಲ್ಲಿ ಜನರು ಊಟ ಮಾಡಲು ಹೋಗುವುದಿಲ್ಲ. ಬದಲಾಗಿ ಕಪಾಳಮೋಕ್ಷ ಮಾಡಿಸಿಕೊಳ್ಳಲು ಹೋಗುತ್ತಾರೆ.
ಅಚ್ಚರಿಯಾದ್ರೂ ಸತ್ಯ. ಭೋಜನಪ್ರಿಯರನ್ನು ಆಕರ್ಷಿಸುವ ಸಲುವಾಗಿ ರೆಸ್ಟೋರೆಂಟ್ಗಳು ಹಲವಾರು ಮಾರ್ಕೆಂಟ್ ತಂತ್ರಗಳನ್ನು ಮಾಡುತ್ತವೆ. ಕೆಲವು ರೆಸ್ಟೋರೆಂಟ್ಗಳು ವಿಲಕ್ಷಣ ಆಹಾರಗಳನ್ನು ನೀಡುವ ಮೂಲಕ ಹಾಗೂ ಇನ್ನೂ ಕೆಲವು ರೆಸ್ಟೋರೆಂಟ್ಗಳು ವಿಶಿಷ್ಟವಾಗಿ ಗ್ರಾಹಕರನ್ನು ಸ್ವಾಗತಿಸುವ ಮೂಲಕ ತಮ್ಮ ವ್ಯಾಪಾರವನ್ನು ಹೆಚ್ಚಿಸುವ ಮಾರ್ಕೆಟಿಂಗ್ ತಂತ್ರಗಳನ್ನು ಮಾಡುತ್ತಾರೆ. ಈ ಮಾರ್ಕೆಟಿಂಗ್ ತಂತ್ರಗಳಿಗೆ ಆಕರ್ಷಿತರಾಗಿ ಹಲವಾರು ಗ್ರಾಹಕರು ಭೋಜನವನ್ನು ಸವಿಯಲು ಅಂತಹ ರೆಸ್ಟೋರೆಂಟ್ಗಳಿಗೆ ಹೋಗುತ್ತಾರೆ. ಆದರೆ ಈ ಒಂದು ರೆಸ್ಟೋರೆಂಟಿಗೆ ಮಾತ್ರ ಜನರು ದುಡ್ಡು ಕೊಟ್ಟು ಕಪಾಳಮೋಕ್ಷ ಮಾಡಿಸಿಕೊಳ್ಳಲು ಹೋಗುತ್ತಾರಂತೆ. ಈ ರೆಸ್ಟೋರೆಂಟ್ ಕುರಿತ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಬಹುಶಃ ಕೋಲು ಕೊಟ್ಟು ಪೆಟ್ಟು ತಿನ್ನುವುದೆಂದರೆ ಇದೇ ಇರಬೇಕು ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಈ ರೆಸ್ಟೋರೆಂಟ್ನ ಹೆಸರು ಶಚಿಹೊಕೊಯಾ. ಇದು ಜಪಾನಿನ ನಗೋಯಾ ನಗರದಲ್ಲಿದೆ. ಈ ರೆಸ್ಟೋರೆಂಟಿನ ವಿಶೇಷತೆಯೆಂದರೆ, ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪರಿಚಾರಿಕೆಯರ ಕೈಯಲ್ಲಿ ಕಪಾಳಮೋಕ್ಷ ಮಾಡಿಸಿಕೊಳ್ಳಲೆಂದೇ ಬರುತ್ತಾರೆ. ಗ್ರಾಹಕರು ಇಲ್ಲಿ ಕಪಾಳಮೋಕ್ಷ ಮಾಡಿಸಿಕೊಳ್ಳಲು 300 ಜಪಾನೀಸ್ ಯೆನ್ ಅಂದರೆ 169 ರೂ. ಹಣವನ್ನು ಪಾವತಿ ಮಾಡುತ್ತಾರೆ. ಮತ್ತು ಪರಚಾರಿಕೆಯರು ಗ್ರಾಹಕರ ಎರಡೂ ಕೆನ್ನೆಗಳಿಗೂ ಜೋರಾಗಿ ಕಪಾಳಮೋಕ್ಷ ಮಾಡುತ್ತಾರೆ.
ಈ ವಿಡಿಯೋವನ್ನು @bangkoklad ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದು ನಗೋಯಾದಲ್ಲಿನ ಶಚಿಹೊಕೊಯಾ ರೆಸ್ಟೋರೆಂಟ್. ಇಲ್ಲಿ ನೀವು 300 ಜಪಾನೀಸ್ ಯೆನ್ ಗೆ ʼನಗೋಯ ಲೇಡಿಸ್ ಸ್ಲ್ಯಾಪ್ʼ ಎಂಬ ವಿಶೇಷ ಕಪಾಳಮೋಕ್ಷ ಮೆನು ಐಟಂ ಖರೀದಿಸಬಹದು ಎಂಬು ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ ರೆಸ್ಟೋರೆಂಟ್ ಪರಿಚಾರಿಕೆಯರು ಗ್ರಾಹಕರ ಕೆನ್ನೆಗೆ ಜೋರಾಗಿ ಕಪಾಳಮೋಕ್ಷ ಮಾಡುವಂತಹ ದೃಶ್ಯಾವಳಿಯನ್ನು ಕಾಣಬಹುದು. ಅದರಲ್ಲಿ ಒಬ್ಬಾಕೆ ಪರಿಚಾರಿಕೆ ಕಪಾಳಮೋಕ್ಷ ಮಾಡಿದ ರಭಸಕ್ಕೆ ಗ್ರಾಹಕನೊಬ್ಬ ಕುರ್ಚಿಯಿಂದ ಕೆಳಗೆ ಬಿದ್ದಿದ್ದಾನೆ. ಬಹುಶಃ ಕೋಲು ಕೊಟ್ಟು ಪೆಟ್ಟು ತಿನ್ನುವುದೆಂದರೇ ಇದೇ ಇರಬೇಕು ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಅಷ್ಟಕ್ಕೂ ಕಪಾಳಮೋಕ್ಷ ಮಾಡುವುದು ಯಾಕೆ?
ಈ ರೆಸ್ಟೋರೆಂಟಿನಲ್ಲಿ ಕಪಾಳಮೋಕ್ಷ ಮಾಡುವ ಹಿಂದಿನ ಕಥೆಯೂ ಅದ್ಭುತವಾಗಿದೆ. ಮಾಧ್ಯಮ ವರದಿಯ ಪ್ರಕಾರ, ಶಚಿಹೊಕೊಯಾ ರೆಸ್ಟೋರೆಂಟನ್ನು 2012ರಲ್ಲಿ ತೆರೆಯಲಾಯಿತು. ಆದರೆ ಹೆಚ್ಚಿನ ವ್ಯಾಪಾರವಾಗದ ಕಾರಣ ಸ್ವಲ್ಪ ಸಮಯದ ನಂತರ ಈ ರೆಸ್ಟೋರೆಂಟ್ ಮುಚ್ಚುವ ಹಂತಕ್ಕೆ ಬಂದು ತಲುಪಿತು. ಆ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಕಪಾಳಮೋಕ್ಷ ಮಾಡಿಸಿಕೊಳ್ಳುವಂತ ವಿಶಿಷ್ಟ ಥೀಮ್ ಅನ್ನು ಜಾರಿಗೊಳಿಸಿತು. ಈ ಮಾರ್ಕೆಟ್ ತಂತ್ರದ ಕಾರಣ ರೆಸ್ಟೋರೆಂಟಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಬರಲಾರಂಭಿಸಿದರು. ಮತ್ತು ವ್ಯವಹಾರವು ವೇಗವಾಗಿ ಬೆಳೆಯಲು ಪ್ರಾರಂಭಿಸಿತು.