ಚಂದ್ರನ ಹುಟ್ಟು ಹೇಗಾಯ್ತು ಗೊತ್ತಾ? – ವಿಜ್ಞಾನಿಗಳಿಂದ ಬಯಲಾಯ್ತು ಸ್ಪೋಟಕ ರಹಸ್ಯ!

ಚಂದ್ರನ ಹುಟ್ಟು ಹೇಗಾಯ್ತು ಗೊತ್ತಾ? – ವಿಜ್ಞಾನಿಗಳಿಂದ ಬಯಲಾಯ್ತು ಸ್ಪೋಟಕ ರಹಸ್ಯ!

ಜಗತ್ತು ತನ್ನಲ್ಲಿ ಅದೆಷ್ಟೋ ಅಚ್ಚರಿ, ಕುತೂಹಲಗಳನ್ನು ಹುದುಗಿಸಿಟ್ಟುಕೊಂಡಿದೆ. ಈ ರಹಸ್ಯಗಳನ್ನು ಬೇಧಿಸಲು ವಿಜ್ಞಾನಿಗಳು, ಸಂಶೋಧಕರು ಒಂದಿಲ್ಲೊಂದು ಅನ್ವೇಷಣೆಗಳನ್ನು ನಡೆಸುತ್ತಲೇ ಇದ್ದಾರೆ. ಜಗತ್ತಿನ ಕುತೂಹಲಗಳಲ್ಲಿ ಚಂದ್ರ ಕೂಡ ಒಂದು. ಸಣ್ಣ ಮಕ್ಕಳಿಗೆ ಚಂದ್ರನನ್ನೇ ತೋರಿಸಿಯೇ ಊಟ ಮಾಡಿಸಲಾಗುತ್ತದೆ. ಇನ್ನೂ ಖುಷಿಯಾದ್ರೆ ದುಖಃವಾದಗಲೂ ಚಂದ್ರನನ್ನೇ ನೋಡುತ್ತಲೇ ಬೇಸರ ಕಳೆಯುತ್ತಾರೆ. ಸಾಮಾನ್ಯ ಜನರಿಂದ ಬಾಹ್ಯಾಕಾಶದ ವಿಜ್ಞಾನಿಗಳಿಗೂ ಕೂಡ ಈ ಚಂದ್ರ ಕೌತುಕವಾಗಿಯೇ ಉಳಿದಿದೆ. ಇದೀಗ ಚಂದ್ರನ ರಚನೆ ಹೇಗಾಯ್ತು ಅಂತಾ ವಿಜ್ಷಾನಿಗಳು ಕಂಡು ಹಿಡಿದಿದ್ದಾರೆ.

ಹೌದು ಚಂದ್ರ ಕೌತುಕದ ಕಣಜವೇ ಆಗೋದಿದೆ. ಅನೇಕ ರಾಷ್ಟ್ರಗಳ ವಿಜ್ಞಾನಿಗಳು ಚಂದ್ರ ಮೇಲೆ ನಾನಾ ಅಧ್ಯಯನಗಳನ್ನು ಕೈಗೊಳ್ಳುತ್ತಲೇ ಇದ್ದಾರೆ. ಇದೀಗ ಚಂದ್ರನ ರಚನೆ ಹೇಗಾಯ್ತು ಅಂತಾ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಕ್ಯಾಲ್ಟೆಕ್) ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದು, ಕುತೂಕಲಕಾರಿ ಮಾಹಿತಿಯೊಂದು ಬಹಿರಂಗವಾಗಿದೆ. ಸಂಶೋಧಕರು ಭೂಮಿಯ ಒಳಭಾಗದ ಘನ ಭಾಗದಲ್ಲಿಎರಡು ಬೃಹತ್ ಗಾತ್ರದ ರಚನೆಗಳನ್ನು ಕಂಡುಹುಡುಕಿದ್ದಾರೆ.  ಥಿಯಾ ಎಂಬ ಪ್ರಾಚೀನ ಗ್ರಹದ ಅವಶೇಷಗಳೇ ರಚನೆಯಾಗಿ ಮಾರ್ಪಟ್ಟಿದೆ ಅಂತಾ ವರದಿಯಾಗಿದೆ.

ಇದನ್ನೂ ಓದಿ: ಚಂದ್ರಯಾನ-4 ಮಿಷನ್ ಗೆ ಸಜ್ಜಾಗುತ್ತಿದೆ ಇಸ್ರೋ – ಚಂದ್ರನಿಂದ ಮಣ್ಣಿನ ಮಾದರಿಗಳನ್ನು ಭೂಮಿಗೆ ತರಲು ಪ್ಲ್ಯಾನ್

ಥಿಯಾ ಹೆಸರಿನ ಪ್ರಾಚೀನ ಕಾಲದ ಗ್ರಹದ ಅವಶೇಷಗಳು ಭೂಮಿಯ ಒಳಗೆ ಉಳಿದುಕೊಂಡಿದ್ದು, ಈ ಗ್ರಹದ ಡಿಕ್ಕಿ ಅಥವಾ ಘರ್ಷಣೆಯೊಂದಿಗೆ ಚಂದ್ರನ ರಚನೆಯಾಗಿದೆ ಎಂದು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಕಂಡುಹಿಡಿದಿದ್ದಾರೆ. ಭೂಮಿಯ ಹೊದಿಕೆಯೊಳಗೆ ಆಳವಾದ ಎರಡು ಬೃಹತ್ ರಚನೆಗಳಿವೆ. ಇವುಗಳನ್ನು ಲಾರ್ಜ್​ ಲೋ ವೆಲಾಸಿಟಿ ಪ್ರಾವಿನ್ಸಸ್​ (LLVPs) ಎಂದು ಕರೆಯಲಾಗುತ್ತದೆ. ಇವು ಪ್ರಾಚೀನ ಥಿಯಾ ಗ್ರಹದ ಅವಶೇಷಗಳಾಗಿವೆ. ಶತಕೋಟಿ ವರ್ಷಗಳ ಹಿಂದೆ ಥಿಯಾ ಗ್ರಹ ಭೂಮಿಯೊಂದಿಗೆ ಘರ್ಷಣೆ ನಡೆಸಿದ್ದು, ಇದರಿಂದಲೇ ಭೂಮಿಯ ಉಪಗ್ರಹ ಚಂದ್ರನ ರಚನೆಯಾಗಿದೆ ಎಂದು ನಂಬಲಾಗಿದೆ.

ಈ ಎರಡು LLVPs ಚಂದ್ರನ ಗಾತ್ರಕ್ಕಿಂತ ಎರಡು ಪಟ್ಟು ಹೆಚ್ಚು ದೊಡ್ಡದಾಗಿವೆ. 1980ರಲ್ಲಿ ವಿಜ್ಞಾನಿಗಳು ಭೂಮಿಯ ಮೂಲಕ ಚಲಿಸುವ ಭೂಕಂಪನದ ಅಲೆಗಳನ್ನು ಅಳತೆ ಮಾಡುವಾಗ ಇವು ಪತ್ತೆಯಾಗಿವೆ. ಈ ಅಲೆಗಳು ಅವು ಹಾದುಹೋಗುವ ವಸ್ತುವನ್ನು ಅವಲಂಬಿಸಿ ವಿಭಿನ್ನ ವೇಗದಲ್ಲಿ ಚಲಿಸುತ್ತವೆ. ಅದರಲ್ಲಿ ವಿಶೇಷವಾಗಿ ಈ ಎರಡು ಪ್ರದೇಶಗಳ ಮೂಲಕ ಹಾದುಹೋಗುವಾಗ ಗಮನಾರ್ಹವಾಗಿ ನಿಧಾನವಾಗುವುದನ್ನು ಗಮನಿಸಲಾಗಿದೆ. ಆ ಪ್ರದೇಶಗಳೆಂದರೆ ಒಂದು ಆಫ್ರಿಕಾದ ಕೆಳಗೆ ಮತ್ತು ಇನ್ನೊಂದು ಪೆಸಿಫಿಕ್ ಸಾಗರದ ಕೆಳಗೆ. ಹೆಚ್ಚಿನ ಕಬ್ಬಿಣದ ಅಂಶದಿಂದಾಗಿ ಈ ಎರಡು ಪ್ರದೇಶಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಿಗಿಂತ ದಟ್ಟವಾಗಿರುತ್ತವೆ ಎಂಬ ತೀರ್ಮಾನಕ್ಕೆ ಇದು ಕಾರಣವಾಗಿದೆ.

ಅಂದಹಾಗೆ ಈ ನಿಗೂಢ ರಚನೆಗಳ ಮೂಲವು ದಶಕಗಳಿಂದ ಚರ್ಚೆಯ ವಿಷಯವಾಗಿದೆ. ಆದರೂ ಇತ್ತೀಚಿನ ಅಧ್ಯಯನದ ವರದಿಯು ಜರ್ನಲ್​ ನೇಚರ್​ನಲ್ಲಿ ಪ್ರಕಟವಾಗಿದ್ದು, ಈ ಎರಡು ರಚನೆಗಳ ಅವಶೇಷಗಳು ಭೂಮಿಗೆ ಅಪ್ಪಳಿಸಿದ ಥಿಯಾ ಗ್ರಹದ ಅವಶೇಷಗಳು ಎಂದು ನಂಬಲಾಗಿದೆ. ಅಪ್ಪಳಿಸಿದ ಪರಿಣಾಮ ಭೂಮಿಯು ಥಿಯಾ ಗ್ರಹದ ಬಹುತೇಕ ಭಾಗವನ್ನು ತನ್ನೊಳಗೆ ಹೀರಿಕೊಂಡಿದ್ದು, LLVP ಗಳನ್ನು ರೂಪಿಸಿದೆ. ಆದರೆ, ಉಳಿದ ಶಿಲಾಖಂಡರಾಶಿಗಳು ಒಟ್ಟುಗೂಡಿ ಚಂದ್ರನನ್ನು ರೂಪಿಸಿವೆ ಎಂದು ನಂಬಲಾಗಿದೆ.

ಭೂಭೌತಶಾಸ್ತ್ರಜ್ಞ ಮತ್ತು ಅಧ್ಯಯನದ ಪ್ರಮುಖ ಸಂಶೋಧಕ ಕಿಯಾನ್ ಯುವಾನ್ ಅವರು 2019ರಲ್ಲಿ ಥಿಯಾ ಗ್ರಹದ ರಚನೆಯ ಕುರಿತು ಸೆಮಿನಾರ್‌ನಲ್ಲಿ ಯುರೇಕಾ ಕ್ಷಣ (ಹಠಾತ್, ವಿಜಯೋತ್ಸಾಹದ ಆವಿಷ್ಕಾರ, ಸ್ಫೂರ್ತಿಯ ಕ್ಷಣ ) ವನ್ನು ಹೊಂದಿದ್ದರು. ಕಬ್ಬಿಣದ ಸಮೃದ್ಧ ಪ್ರಭಾವದಿಂದ ಥಿಯಾವು ಭೂಮಿಯ ಹೊದಿಕೆಯೊಳಗೆ ದುಂಡಗಿನ ವಸ್ತುವಾಗಿ ರೂಪಾಂತರಗೊಂಡಿರಬಹುದು ಎಂದು ಅರ್ಥೈಸಿಕೊಂಡಿದ್ದಾರೆ.

ಯುವಾನ್ ಮತ್ತು ಅವರ ತಂಡವು ಥಿಯಾದ ರಾಸಾಯನಿಕ ಸಂಯೋಜನೆ ಮತ್ತು ಭೂಮಿಯ ಮೇಲೆ ಅದರ ಪ್ರಭಾವಕ್ಕಾಗಿ ವಿಭಿನ್ನ ಸನ್ನಿವೇಶಗಳನ್ನು ರೂಪಿಸಿತು. ಘರ್ಷಣೆಯ ಪ್ರಭಾವವು LLVPಗಳು ಮತ್ತು ಚಂದ್ರನ ರಚನೆಗೆ ಕಾರಣವಾಗಿರಬಹುದೆಂದು ಸಿಮ್ಯುಲೇಶನ್‌ಗಳು ದೃಢಪಡಿಸಿವೆ. ಅಲ್ಲದೆ, ಸಂಶೋಧಕರ ಸಿಮ್ಯುಲೇಶನ್‌ಗಳು ಥಿಯಾ ಪ್ರಭಾವದಿಂದ ಬಿಡುಗಡೆಯಾದ ಹೆಚ್ಚಿನ ಶಕ್ತಿಯು ಭೂ ಹೊದಿಕೆಯ ಮೇಲಿನ ಅರ್ಧಭಾಗದಲ್ಲಿ ಉಳಿದಿದೆ ಎಂದು ತೋರಿಸಿದೆ.

Shwetha M