ಡ್ರೈವರ್‌ ತಪ್ಪು ಮಾಡಿದ್ನಾ? – ಪ್ರಜ್ವಲ್‌ ತಗ್ಲಾಕೊಂಡಿದ್ದು ಹೇಗೆ?

ಡ್ರೈವರ್‌ ತಪ್ಪು ಮಾಡಿದ್ನಾ? – ಪ್ರಜ್ವಲ್‌ ತಗ್ಲಾಕೊಂಡಿದ್ದು ಹೇಗೆ?

ಕಡೆಗೂ ಪ್ರಜ್ವಲ್ ರೇವಣ್ಣ ವೀಡಿಯೋ ಲೀಕ್‌ ಆಗಿದ್ದು ಹೇಗೆ ಎನ್ನುವುದು ಬಹಿರಂಗವಾಗಿದೆ.. ಪ್ರಜ್ವಲ್‌ ಮೊಬೈಲ್‌ನಿಂದ ಡ್ರೈವರ್‌ ಕಾರ್ತಿಕ್‌ ಈ ವೀಡಿಯೋಗಳನ್ನು ಪಡೆದು ನಂತರ ದೇವರಾಜೇಗೌಡರಿಗೆ ನೀಡಿದ್ದಾಗಿ ಖುದ್ದು ಕಾರ್ತಿಕ್‌ ಬಹಿರಂಗಪಡಿಸಿದ್ದಾರೆ.. ಈಗ ಹೀಗೆ ವೀಡಿಯೋ ಲೀಕ್‌ ಮಾಡಿ, ಕಾರ್ತಿಕ್‌ ತಪ್ಪು ಮಾಡಿದ್ರಾ? ಕಾರ್ತಿಕ್‌ ಇಟ್ಟಿದ್ದ ಭರವಸೆಯನ್ನು ದುರುಪಯೋಗಪಡಿಸಿಕೊಂಡು ದೇವರಾಜೇಗೌಡ ತಪ್ಪು ಮಾಡಿದ್ರಾ? ಕುಮಾರಸ್ವಾಮಿ ಆರೋಪಿಸಿದಂತೆ ಡಿಕೆಶಿ ಏನಾದ್ರೂ ವೀಡಿಯೋ ಸರ್ಕ್ಯುಲೇಟ್‌ ಮಾಡಿಸಿದ್ದೇ ಹೌದಾದರೆ, ಡಿಸಿಎಂ ತಪ್ಪು ಮಾಡಿದ್ರಾ? ಇಷ್ಟಕ್ಕೂ ಇನ್ಫಾರ್ಮೇಷನ್‌ ಟೆಕ್ನಾಲಜಿ ಆ್ಯಕ್ಟ್‌ ಪ್ರಕಾರ ಇಲ್ಲಿ ಯಾರಿಗೆಲ್ಲಾ ಶಿಕ್ಷೆಯಾಗುತ್ತದೆ? ಇಷ್ಟಕ್ಕೂ ಇಂತಹ ಕೇಸ್‌ಗಳು ನ್ಯಾಯಾಲಯದಲ್ಲಿ ಸಾಬೀತಾಗಲು ಇರುವ ಸವಾಲುಗಳೇನು? ಪ್ರಜ್ವಲ್‌ ಅಸಲಿ ಮುಖ ಅನಾವರಣ ಮಾಡಿದವರು ಮಾಡಿರೋದು ನಂಬಿಕೆ ದ್ರೋಹವೋ? ಅಥವಾ ನೊಂದ ಹೆಣ್ಣು ಮಕ್ಕಳಿಗೆ ಆಗಿರುವ ಅನ್ಯಾಯವನ್ನು ಬಹಿರಂಗಪಡಿಸಿದರೋ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಹಾಸನ ಪೆನ್‌ಡ್ರೈವ್‌ ಪ್ರಕರಣ – ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು

ಈಗ ಪೆನ್‌ ಡ್ರೈವ್‌ ಗೆ ಎಲ್ಲಿಲ್ಲದ ಬೇಡಿಕೆ ಬಂದು ಬಿಟ್ಟಿದೆ.. ಕಾಂಗ್ರೆಸ್‌ ಸರ್ಕಾರದ ಪೆನ್‌ ಡ್ರೈವ್‌ ನನ್ನ ಬಳಿಯಿದೆ ಎಂದು ಸ್ಟೈಲಾಗಿ ಮಾಜಿ ಸಿಎಂ ಕುಮಾರಸ್ವಾಮಿಯವರು ಹೇಳಿದ್ದು ನಿಮಗೂ ನೆನಪಿರಬಹುದು.. ಅಲ್ಲಿಂದ ನಂತರ ಪೆನ್‌ಡ್ರೈವ್‌ ಬಗ್ಗೆ ಎಲ್ಲಿಲ್ಲದ ಕುತೂಹಲ ಶುರುವಾಗಿತ್ತು.. ಆದ್ರೀಗ ಕುಮಾರಸ್ವಾಮಿಯವರ ಅಣ್ಣನ ಫ್ಯಾಮಿಲಿಗೆ ಸೇರಿದ ಪೆನ್‌ ಡ್ರೈವ್‌ ಎಲ್ಲಿಲ್ಲದ ಸುದ್ದಿ ಮಾಡುತ್ತಿದೆ.. ಇಷ್ಟಕ್ಕೂ ಈ ಪೆನ್‌ ಡ್ರೈವ್‌ ಸೇರಿದ ವೀಡಿಯೋಗಳು ನೇರವಾಗಿ ಪ್ರಜ್ವಲ್‌ ರೇವಣ್ಣ ಅವರ ಮೊಬೈಲ್‌ ನಿಂದಲೇ ಹರಿದುಬಂದಿರುವುದು ಸ್ಪಷ್ಟವಾಗುತ್ತಿದೆ.. ಅದರಲ್ಲೂ ವೀಡಿಯೋ ಇದ್ದ ಮೊದಲ ಪೆನ್‌ ಡ್ರೈವ್‌ ಕಾರ್ತಿಕ್‌ ಕೈಯಿಂದ ಬಿಜೆಪಿಯ ಅಭ್ಯರ್ಥಿಯಾಗಿದ್ದ ವಕೀಲ ದೇವರಾಜೇಗೌಡರ ಕೈ ಸೇರಿತ್ತು ಎನ್ನುವುದು ಕಾರ್ತಿಕ್‌ ಅವರೇ ಬಿಚ್ಚಿಟ್ಟುವ ಮಾಹಿತಿ.. ಇದು ಸಂಪೂರ್ಣ ಸತ್ಯ ಹೌದೋ ಅಲ್ಲವೋ ಗೊತ್ತಿಲ್ಲ.. ಆದರೆ ಕಾರ್ತಿಕ್‌ ಹಾಗೂ ರೇವಣ್ಣ ಕುಟುಂಬದ ನಡುವಿನ ಆಸ್ತಿ ಕದನ, ಹೆಂಡ್ತಿಗೆ ಹೊಡೆದ್ರು.. ದೌರ್ಜನ್ಯ ಮಾಡಿದ್ರು ಅನ್ನುವ ಆರೋಪಗಳನ್ನು ಈ ಹಿಂದೆಯೇ ಕಾರ್ತಿಕ್‌ ಮಾಡಿದ್ದರು.. ಈಗ ಪ್ರಜ್ವಲ್‌ ಗೆ ಸೇರಿದ್ದ ಪೆನ್‌ ಡ್ರೈವ್‌ ಅನ್ನು ಕೂಡ ನಾನೇ ದೇವೇರಾಜೇಗೌಡರಿಗೆ ನೀಡಿದ್ದೆ ಅಂತ ಕಾರ್ತಿಕ್‌ ಒಪ್ಪಿಕೊಂಡಿದ್ದಾರೆ.. ಜೊತೆಗೆ ಇದನ್ನು ಹೀಗೆಲ್ಲಾ ಪಬ್ಲಿಕ್‌ ಆಗಿ ಲೀಕ್‌ ಮಾಡಿಸ್ತಾರೆ ಅಂತ ಗೊತ್ತಿರಲಿಲ್ಲ.. ಇದಕ್ಕೂ ಕಾಂಗ್ರೆಸ್‌ ನವರಿಗೂ ಸಂಬಂಧವಿಲ್ಲ ಎಂಬೆಲ್ಲಾ ಸ್ಪಷ್ಟನೆಯನ್ನೂ ಕಾರ್ತಿಕ್‌ ನೀಡಿದ್ದಾರೆ.. ಅಲ್ಲಿಗೆ ಕಾರ್ತಿಕ್‌ ಹೇಳುತ್ತಿರುವ ಮಾತು ಕೇಳಿದಾಗ ಪದೇ ಪದೇ ಬಿಜೆಪಿಯ ದೇವರಾಜೇಗೌಡ ಎಂದು ಉಲ್ಲೇಖ ಮಾಡಿರುವುದರ ಅಸಲಿ ಉದ್ದೇಶ ಇದನ್ನು ಬಿಜೆಪಿಯವರೇ ಲೀಕ್‌ ಮಾಡಿಸಿದ್ದಾರೆ ಎನ್ನುವ ಸಂದೇಶ ರವಾನಿಸುವುದು ಅನ್ನೋದ್ರಲ್ಲಿ ಅನುಮಾನವಿಲ್ಲ..

ಆದ್ರೆ ಇಲ್ಲಿ ಪ್ರಜ್ವಲ್‌ ರೇವಣ್ಣ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ವೀಡಿಯೋ ಲೀಕ್‌ ಮಾಡಿದ್ದು ಸರಿಯೋ ತಪ್ಪೋ ಎಂಬುದು ಚರ್ಚೆಯ ವಿಚಾರ.. ಇಲ್ಲಿ ಪ್ರಜ್ವಲ್ ರೇವಣ್ಣ, ಮಹಿಳೆಯರ ಮೇಲೆ ಎಸಗಿರುವ ದೌರ್ಜನ್ಯ ಒಂದಲ್ಲ ಒಂದು ರೀತಿಯಲ್ಲಿ ಬಯಲಾಗಲೇಬೇಕಿತ್ತು ಎನ್ನುವುದು ನಾಗರಿಕ ಸಮಾಜ ಹೊಂದಿರುವ ಅಭಿಪ್ರಾಯ.. ಹಾಸನದ ಡಿಸಿ ಸಿ. ಸತ್ಯಭಾಮ ಕೂಡ ಸೋಮವಾರ ಒಂದು ಮಾತು ಹೇಳಿದ್ದರು.. ಪಾಪದ ಕೊಡ ತುಂಬಿದಾಗ ಅದು ಹೇಗಾದ್ರೂ ಹೊರಬಂದೇ ಬರುತ್ತದೆ. ಶ್ರೀಕೃಷ್ಣ ಕೂಡ ಶಿಶುಪಾಲನಿಗೆ ನೂರು ತಪ್ಪು ಮಾಡಲು ಅವಕಾಶ ಕೊಟ್ಟಿದ್ದ.. ಆದರೆ ನೂರ ಒಂದನೇ ತಪ್ಪು ಮಾಡಿದಾಗ ಶಿಶುಪಾಲನ ತಲೆ ಕತ್ತರಿಸಿದ್ದ ಎನ್ನುವ ಉದಾಹರಣೆಯೊಂದಿಗೆ ಜಿಲ್ಲಾಧಿಕಾರಿಯವರು ಮಾತಾಡಿದ್ದರು.. ಇದು ಸ್ಪಷ್ಟವಾಗಿ ನಮ್ಮ ಸಮಾಜ ಯೋಚಿಸುವ ರೀತಿ ಎನ್ನುವುದರಲ್ಲಿ ಅನುಮಾನವೇ ಇಲ್ಲ.. ಪಾಪದ ಕೊಡ ತುಂಬಿದಾಗ ಅದು ಹೊರಬರುತ್ತದೆ ಎನ್ನುವುದಕ್ಕೂ ಪೆನ್‌ ಡ್ರೈಲ್‌ ಲೀಕ್‌ ಆಗಿರುವುದಕ್ಕೂ ಹತ್ತಿರದ ನಂಟಿದೆ.. ನಿಜಕ್ಕೂ ಅಷ್ಟೊಂದು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾರೆ ಅಂತಾದ್ರೆ ಈ ಪಾಪದ ಕೊಡ ಬೇಗನೇ ತುಂಬಬೇಕಿತ್ತು.. ಆದ್ರೆ ಅಧಿಕಾರ, ಪ್ರಭಾವಗಳು ಮೇಳೈಸಿದ ಜಾಗದಲ್ಲಿ ಪಾಪದ ಕೊಡ ತುಂಬುವ ಪ್ರಕ್ರಿಯೆ ಕೂಡ ಸ್ವಲ್ಪ ನಿಧಾನ ಆಗುತ್ತದೋ ಏನೋ ಗೊತ್ತಿಲ್ಲ.. ಆದ್ರೆ ಪಾಪದ ಕೊಡ ತುಂಬಿದ್ದರಿಂದ ಪೆನ್‌ ಡ್ರೈವ್‌ ಹೊರಬಂತು ಎಂದು ಸಿಂಪಲ್ಲಾಗಿ ನ್ಯಾಯಾಲಯದಲ್ಲಿ ಹೇಳೋದಿಕ್ಕೆ ಆಗೋದಿಲ್ಲ.. ಅಲ್ಲಿ ಬೇಕಿರೋದು ಸಾಕ್ಷ್ಯ.. ಅಲ್ಲಿ ನಡೆಯೋದೆಲ್ಲಾ ಕಾನೂನಿನ ಅನ್ವಯ.. ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಸೆಕ್ಷನ್‌ 66ಇ, 67ಎ ಪ್ರಕಾರ, ಯಾವುದೇ ಪುರುಷ ಅಥವಾ ಮಹಿಳೆಯ ಖಾಸಗಿ ಭಾಗಗಳ ಫೋಟೋ, ವೀಡಿಯೋ ರೆಕಾರ್ಡ್‌ ಮಾಡುವುದು, ಅದನ್ನು ಶೇರ್‌ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಅಂದರೆ ಇಲ್ಲಿ ವಿಡಿಯೋ ರೆಕಾರ್ಡ್ ಮಾಡಿದವರಿಗೂ ಶಿಕ್ಷೆಯಾಗುತ್ತದೆ.. ವೀಡಿಯೋ ಶೇರ್‌ ಮಾಡಿದವರಿಗೂ ಶಿಕ್ಷೆಯಾಗುತ್ತದೆ.. ಅದರ ಪ್ರಕಾರ ಕಾರ್ತಿಕ್‌ ಕೂಡ ಎಸಗಿರುವುದು ತಪ್ಪೇ. ನಂತರ ಅದನ್ನು ದೇವೇರಾಜೇಗೌಡರು ರಿಲೀಸ್‌ ಮಾಡಿದರೋ ಅಥವಾ ಇನ್ಯಾರು ರಿಲೀಸ್‌ ಮಾಡಿದರು ಎನ್ನುವುದು ಕೂಡ ಪತ್ತೆ ಹಚ್ಚಬೇಕಾಗುತ್ತದೆ.. ಹಾಗೆ ವಿಡಿಯೋ ಶೇರ್‌ ಮಾಡಿದವರು ಅಥವಾ ಹಂಚಿದವರು ಮಾಡಿದ್ದು ಕೂಡ ತಪ್ಪೇ ಆಗುತ್ತದೆ..

ಇವೆಲ್ಲಾ ಲೀಕ್‌ ಆಗಿರುವ ವೀಡಿಯೋಗಳ ಕತೆಯಾದರೆ, ಪ್ರಜ್ವಲ್‌ ರೇವಣ್ಣ ಮಾಡಿರುವ ತಪ್ಪುಗಳಿಗೆ ಶಿಕ್ಷೆಯಾಗಬೇಕು ಅಂದರೆ ಈ ವಿಡಿಯೋಗಳು ಮಾತ್ರವೇ ಸಾಕ್ಷಿಯಾಗಬೇಕು ಅಂತೇನಿಲ್ಲ.. ಈ ವಿಡಿಯೋಗಳು ಅಸಲಿಯೋ ಅಥವಾ ಎಡಿಟ್‌ ಆಗಿರುವಂತವೋ ಎನ್ನುವುದು ಸಾಬೀತಾಗಬೇಕು ಅಂದರೆ ಅದು ಪೆನ್‌ ಡ್ರೈವ್‌ ಮೂಲಕ ಸಿಕ್ಕಿದರೆ ಸಾಕಾಗೋದಿಲ್ಲ.. ಅದನ್ನು ಪ್ರಜ್ವಲ್‌ ರೇವಣ್ಣಅವರೇ ರೆಕಾರ್ಡ್‌ ಮಾಡಿದ್ದಾರೆ ಅಂತಾದರೆ, ಅವರು ರೆಕಾರ್ಡ್‌ ಮಾಡಿರುವ ಒರಿಜಿನಲ್‌ ಮೊಬೈಲ್‌ ಕೂಡ ತನಿಖಾಧಿಕಾರಿಗಳಿಗೆ ಸಿಗಬೇಕಿದೆ.. ಹಾಗಿದ್ದಾಗ ಮಾತ್ರ ಇದು ಅಸಲಿ ವಿಡಿಯೋ ಹೌದೋ ಅಲ್ಲವೋ ಎನ್ನುವುದು ಕಾನೂನು ಪ್ರಕಾರ ಸಾಬೀತಾಗುತ್ತದೆ.. ಇಲ್ಲದೇ ಹೋದ್ರೆ ವಿಡಿಯೋ ಎಡಿಟ್‌ ಆಗಿರಬಹುದು ಎನ್ನುವ ಅನುಮಾನದ ಲಾಭ, ಆರೋಪ ಎದುರಿಸುತ್ತಿರುವ ಪ್ರಜ್ವಲ್‌ಗೆ ಸಿಗುತ್ತದೆ.. ಹಾಗಿದ್ದರೂ ವಿಡಿಯೋದ ಹೊರತಾಗಿಯೂ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ದೂರು ಕೊಟ್ಟು, ಅದಕ್ಕೆ ಪೂರಕವಾದ ಸಾಕ್ಷ್ಯ ಸಿಕ್ಕರೆ ಆಗಲೂ ಪ್ರಜ್ವಲ್‌ ವಿರುದ್ಧದ ಆರೋಪಗಳು ಸಾಬೀತಾಗಿ ಶಿಕ್ಷೆಗೆ ಗುರಿಪಡಿಸಬಹುದು..

ಇಲ್ಲಿ ನಾಗರೀಕ ಸಮಾಜವಾಗಿ ನಾವು ಗಮಿನಸಲೇಬೇಕಿರುವ ಇನ್ನೊಂದು ಅಂಶವಿದೆ.. ಅದೇನಂದ್ರೆ, ಪ್ರಜ್ವಲ್ ರೇವಣ್ಣ ಈಗ ಯಾವ ಮಹಿಳೆಯರ ಜೊತೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೋ.. ಅಥವಾ ಯಾವೆಲ್ಲಾ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ಅವರ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡಿದ್ದರೋ.. ಆ ಮಹಿಳೆಯರ ಗತಿ ಏನಾಗಬೇಕು ಎನ್ನುವುದು.. ಇಲ್ಲಿ ವೀಡಿಯೋ ಶೇರ್‌ ಮಾಡುತ್ತಾ ಹೋಗುವವರು ಆ ಮಹಿಳೆಯರ ಗುರುತು ಹಿಡಿದೇ ಹಿಡಿಯುತ್ತಾರೆ.. ಆಗ ನಿಜಕ್ಕೂ ಈಗಾಗ್ಲೇ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ನಿಜಕ್ಕೂ 2 ಸಾವಿರಕ್ಕಿಂತ ಹೆಚ್ಚು ಮಹಿಳೆಯರ ವೀಡಿಯೋ ಅದರಲ್ಲಿದೆ ಅಂತಾದ್ರೆ ಆ ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರ ಕುಟುಂಬದ ಸ್ಥಿತಿ ಏನಾಗಬೇಡ.. ಪ್ರಜ್ವಲ್‌ ನ ಕಾಮಪುರಾಣದಲ್ಲಿ ಒಪ್ಪಿಗೆಯ ಮೂಲಕ ಸೇರಿಕೊಂಡವರು, ದೊಡ್ಡವರು ಎಂಬ ಕಾರಣಕ್ಕೆ ಬಾಯಿ ಮುಚ್ಚಿ ಸಹಿಸಿಕೊಂಡವರು, ಯಾವುದೋ ಆಮಿಷಕ್ಕೆ ಒಳಗಾದವರ ಕತೆ ಏನಾಗುತ್ತದೆ ಎನ್ನುವುದನ್ನು ಯೋಚಿಸೋದೂ ಕಷ್ಟವಿದೆ.. ಯಾಕಂದ್ರೆ ತಪ್ಪು ಗಂಡೇ ಮಾಡಿದ್ದರೂ ಸುಲಭವಾಗಿ ಹೆಣ್ಣನ್ನು ಮಾತ್ರ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಮನಸ್ಥಿತಿ ನಮ್ಮ ನಡುವೆ ಹೆಚ್ಚಿದೆ.. ಹಾಗೇನಾದ್ರೂ ಆಯ್ತು ಅಂದ್ರೆ ಕೇವಲ ಪ್ರಜ್ವಲ್‌ ಒಬ್ಬನೇ ಅಲ್ಲ.. ಆತನ ವಿಕೃತಿಗೆ ಬಲಿಯಾದ ಹಲವು ಕುಟುಂಬಗಳು ಕೂಡ ಬೀದಿಗೆ ಬೀಳುವ ಅಪಾಯ ತಪ್ಪಿದ್ದಲ್ಲ.. ಏನೇ ಆಗಲೀ.. ಈಗ ಪ್ರಜ್ವಲ್‌ನ ಅಸಲಿ ಬಣ್ಣ ಬಯಲಾಗಿದೆ.. ದೊಡ್ಡ ಕುಟುಂಬದಿಂದ ಬಂದಿರುವ ವ್ಯಕ್ತಿಯ ವಿಕೃತಿ ಸಹಜವಾಗಿಯೇ ಆ ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ.. ಆದರೆ ಇಲ್ಲಿ ಪ್ರಜ್ವಲ್‌ ರೇವಣ್ಣ ನಿಜಕ್ಕೂ ಈ ತಪ್ಪುಗಳನ್ನು ಎಸಗಿದ್ದರೆ, ಆತನನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ..

Shwetha M

Leave a Reply

Your email address will not be published. Required fields are marked *