ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿ.ಕೆ ಶಿವಕುಮಾರ್ ಗೆ ಸಾಲು ಸಾಲು ಸಂಕಷ್ಟ – ಅಕ್ರಮ ಆಸ್ತಿ ಗಳಿಕೆ ಪ್ರಕರಣವೇ ಉರುಳಾಗುತ್ತಾ?

ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿ.ಕೆ ಶಿವಕುಮಾರ್ ಗೆ ಸಾಲು ಸಾಲು ಸಂಕಷ್ಟ – ಅಕ್ರಮ ಆಸ್ತಿ ಗಳಿಕೆ ಪ್ರಕರಣವೇ ಉರುಳಾಗುತ್ತಾ?

ರಾಜ್ಯ ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಗುದ್ದಾಟ ಗುಟ್ಟೇನು ಅಲ್ಲ. ವಿಧಾನಸಭಾ ಚುನಾವಣೆಗೂ ಮೊದ್ಲೇ ಡಿ.ಕೆ ಶಿವಕುಮಾರ್ ಸಿಎಂ ಗಾದಿ ಮೇಲೆ ಕಣ್ಣಿಟ್ಟಿದ್ರು. ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಸಿಕ್ಕಿದ್ರೂ ವಾರಗಟ್ಟಲೆ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡೆದಿತ್ತು. ಹತ್ತಾರು ಹೈಡ್ರಾಮಾಗಳ ಬಳಿಕ ಕೊನೆಗೆ ಸಿದ್ದರಾಮಯ್ಯಗೆ ಸಿಎಂ ಪಟ್ಟ ಕಟ್ಟಲಾಯ್ತು. ಆದ್ರೆ ಡಿಸಿಎಂ ಹುದ್ದೆಯಲ್ಲಿದ್ರೂ ಡಿಕೆಶಿಗೆ ಸಿಎಂ ಆಗುವ ಆಸೆ ಮಾತ್ರ ದೂರಾಗಿಲ್ಲ. ಹೀಗಿರುವಾಗ್ಲೇ ಕಾಂಗ್ರೆಸ್​ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್​ಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣ ಮತ್ತೊಮ್ಮೆ ಉರುಳಾಗುವ ಸಾಧ್ಯತೆ ಇದೆ. ಈಗಾಗಲೇ ತಿಹಾರ್ ಜೈಲಿಗೆ ಹೋಗಿ ಬಂದಿರುವ ಡಿಕೆಶಿಗೆ ಬಿಜೆಪಿ ನಾಯಕರು ಮತ್ತೆ ಹೋಗೋಕೆ ರೆಡಿಯಾಗಿ ಅನ್ನೋ ಮೂಲಕ ಕಾಲೆಳೆಯುತ್ತಿದ್ದಾರೆ.

ಇದನ್ನೂ ಓದಿ : ಸಿ.ಎಂ ಇಬ್ರಾಹಿಂ ಉಚ್ಛಾಟನೆ ಹಿಂದಿದೆ ‘ರೆಬೆಲ್’ ರಾಜಕೀಯ – ಪುತ್ರನಿಗೆ ದೊಡ್ಡಗೌಡ್ರು ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದರ ಗುಟ್ಟೇನು?

ಬಿಜೆಪಿ, ಜೆಡಿಎಸ್ ನಾಯಕರ ಆಪರೇಷನ್ ಮೂಲಕ ಲೋಕಸಭಾ ಚುನಾವಣೆಗೆ ಡಿ.ಕೆ ಶಿವಕುಮಾರ್ ಭದ್ರ ಬುನಾದಿ ಹಾಕ್ತಿದ್ರು. ಕರ್ನಾಟಕದಿಂದ ಕನಿಷ್ಠ 20 ಸೀಟು ಗೆದ್ದೇ ಗೆಲ್ಲುತ್ತೇವೆಂದು ತಂತ್ರಗಾರಿಕೆ ಶುರು ಮಾಡಿದ್ರು. ಆದ್ರೆ ಅವ್ರದ್ದೇ ಆಸ್ತಿ ಲೆಕ್ಕ ಅವ್ರ ರಾಜಕೀಯ ಲೆಕ್ಕಾಚಾರವನ್ನ ಬುಡಮೇಲು ಮಾಡ್ತಿದೆ. ಆದಾಯ ಮೂಲಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಸಂಕಷ್ಟ ತಂದೊಡ್ಡುವ ಎಲ್ಲಾ ಸಾಧ್ಯತೆ ಇದೆ. ಸಿಬಿಐ ತನಿಖೆ ರದ್ದು ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ ಅಕ್ರಮ ಆಸ್ತಿ ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನೂ ಹೈಕೋರ್ಟ್ ತೆರವುಗೊಳಿಸಿದೆ. 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸಿಬಿಐಗೆ ಆದೇಶಿಸಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರು ಸಿಬಿಐ ತನಿಖೆ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಮತಿ

2013ರಿಂದ 2018ರ ನಡುವೆ ಆದಾಯಕ್ಕೂ ಮೀರಿ ಆಸ್ತಿ ಗಳಿಸಿರುವ ಆರೋಪ ಡಿಕೆಶಿ ಮೇಲಿದೆ. 2017ರಲ್ಲಿ ಡಿಕೆ ಶಿವಕುಮಾರ್ ನಿವಾಸ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ರು. 10 ಕೋಟಿ ರೂಪಾಯಿ ನಗದು ಸೇರಿದಂತೆ ಚಿನ್ನ, ಬೆಳ್ಳಿ ಆಭರಣಗಳು ಪತ್ತೆಯಾಗಿದ್ದವು. ನೂರಾರು ಕೋಟಿ ಬೆಲೆ ಬಾಳುವ ಆಸ್ತಿ ದಾಖಲೆ ಪತ್ರಗಳೂ ಸಿಕ್ಕಿತ್ತು. 2020ರ ಅಕ್ಟೋಬರ್ 3ರಂದು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದ ಸಿಬಿಐ ತಂಡ, 1988ರ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಪ್ರಕಾರ ಕೇಸ್ ದಾಖಲಿಸಿತ್ತು. ಪ್ರಕರಣದ ರದ್ದು ಕೋರಿ ಡಿ.ಕೆ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ನಿಂದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿತ್ತು.  ಹಲವು ಬಾರಿ ಹೈ ಕೋರ್ಟ್ ತಡೆಯಾಜ್ಞೆಯನ್ನು ವಿಸ್ತರಿಸಿತ್ತು. ನ್ಯಾಯಮೂರ್ತಿ ಕೆ.ನಟರಾಜನ್ ನೇತೃತ್ವದ ಪೀಠದಿಂದ ಸಿಬಿಐ ತನಿಖೆಗೆ ಅನುಮತಿ ಸಿಕ್ಕಿದೆ.

2017ರಲ್ಲಿ ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ರು,. ದಾಳಿ ವೇಳೆ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಗಳಿಕೆ ಮಾಡಿರುವ ಆರೋಪ ಕೇಳಿ ಬಂದಿತ್ತು.  ಐಟಿ ಇಲಾಖೆ ನೀಡಿದ ಮಾಹಿತಿ ಆಧರಿಸಿ ಡಿಕೆಶಿ ವಿರುದ್ಧ ಇಡಿ ತನಿಖೆ ಆರಂಭಿಸಿತ್ತು. ಇಡಿ ತನಿಖೆ ಆಧರಿಸಿ ಡಿಕೆಶಿ ವಿರುದ್ಧ FIR ದಾಖಲಿಸಲು ಸಿಬಿಐ ಅನುಮತಿ ಕೇಳಿತ್ತು. ಎಫ್​ಐಆರ್ ದಾಖಲಿಸಲು ರಾಜ್ಯ ಸರ್ಕಾರದಿಂದ ಸಿಬಿಐ ಅನುಮತಿ ಕೋರಿತ್ತು. ಅಂದಿನ ಬಿಜೆಪಿ ಸರ್ಕಾರದ ಸಿಎಂ ಬಿ.ಎಸ್ ಯಡಿಯೂರಪ್ಪನವರಿಂದ ಅನುಮತಿ ದೊರಕಿತ್ತು. ಬಿಎಸ್​ವೈ ಅನುಮತಿ ಬೆನ್ನಲ್ಲೇ 2020ರ ಅಗಸ್ಟ್ 3 ರಂದು ಡಿಕೆಶಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಇನ್ನು ತಮ್ಮ ಮೇಲಿನ ಪ್ರಕರಣವನ್ನ ಬಿಜೆಪಿಯವರ ರಾಜಕೀಯ ಪ್ರೇರಿತ ಎಂದು ಡಿಕೆಶಿ ಆರೋಪಿಸಿದ್ದಾರೆ. ಬಿಜೆಪಿಯವರು ಏನೇ ಷಡ್ಯಂತ್ರ ಮಾಡಿದರೂ ಕೂಡ ನ್ಯಾಯಾಲಯಕ್ಕೆ ನನ್ನ ಎಲ್ಲಾ ಪಟ್ಟಿ ಕೊಡುತ್ತೇನೆ. ನಳೀನ್ ಕುಮಾರ್ ಕಟೀಲ್, ಕುಮಾರಸ್ವಾಮಿ ತಿಹಾರ್ ಜೈಲಿಗೆ ಕಳಿಸುವುದಾಗಿ ಹೇಳಿದ್ದಾರೆ. ಚುನಾವಣೆ ಮುಗಿಯುವವರೆಗೂ ಅಲ್ಲಿಯೇ ಇಡುವುದಾಗಿಯೂ ಹೇಳಿದ್ದಾರೆ. ಇದು ಅವರ ಬಾಯಲ್ಲಿ ಬಂದಿರೋ ನುಡಿಮುತ್ತುಗಳು. ಈಗಲೂ ಕೆಲವರು ಮಾತನಾಡುತ್ತಿದ್ದಾರೆ, ಮಾತಾಡಲಿ. ನಾನು ಎಲ್ಲೂ ಓಡಿ ಹೋಗಲ್ಲ. ಉತ್ತರ ಕೊಡುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ. ಇಲ್ಲಿ ಡಿಕೆ ಶಿವಕುಮಾರ್​ ಅವ್ರ ಸ್ಪಷ್ಟನೆ ಏನೇ ಇದ್ರೂ ಕೂಡ ಅವ್ರ ಆಸ್ತಿ ಮೌಲ್ಯ ಕರ್ನಾಟಕ ಮಾತ್ರವಲ್ಲ.. ಇಡೀ ದೇಶವೇ ಹುಬ್ಬೇರಿಸುವಂತಿದೆ. ಯಾಕಂದ್ರೆ ಪ್ರಸ್ತುತ ಇಡೀ ದೇಶದಲ್ಲಿ ಇರುವ ಎಲ್ಲಾ ರಾಜ್ಯಗಳ ಶಾಸಕರ ಪೈಕಿ ಅತೀ ಶ್ರೀಮಂತ ಶಾಸಕ ಅಂದ್ರೆ ಅದು ನಮ್ಮ ಡಿ.ಕೆ ಶಿವಕುಮಾರ್ ಅವ್ರು.. ಅವರ ಕುಟುಂಬದ ಒಟ್ಟಾರೆ ಆಸ್ತಿ ಮೊತ್ತ 1,413 ಕೋಟಿ ರೂಪಾಯಿ ಇದ್ದು, ದೇಶದ ಸಿರಿವಂತ ಶಾಸಕ ಎನಿಸಿಕೊಂಡಿದ್ದಾರೆ. ಅಲ್ಲದೆ ಪತ್ನಿ, ಮಕ್ಕಳ ಹೆಸರಲ್ಲೂ ಕೋಟಿ ಕೋಟಿ ಸಂಪತ್ತಿದೆ. ಇಷ್ಟೆಲ್ಲಾ ಹಣದ ಜೊತೆ ಜೊತೆಗೆ ಅಷ್ಟೇ ಕೇಸ್​ಗಳೂ ಕೂಡ ಅವ್ರ ಮೇಲಿವೆ.

ಡಿ.ಕೆ ಶಿವಕುಮಾರ್ ಹೆಸರಿನಲ್ಲಿ 1,214 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದ್ಯಂತೆ. ಡಿಕೆಶಿ ವಾರ್ಷಿಕ ಆದಾಯ ₹14.24 ಕೋಟಿಯಾಗಿದ್ದು, ಪತ್ನಿ ಉಷಾ ₹1.90 ಕೋಟಿ ಆದಾಯ ಹೊಂದಿದ್ದಾರಂತೆ. ಕೃಷಿ, ಬಾಡಿಗೆ & ವಿವಿಧ ಕಂಪನಿಗಳಲ್ಲಿ ಶೇರು, ಉದ್ದಿಮೆ ಆದಾಯ ಮೂಲವಂತೆ. ಡಿ.ಕೆ ಶಿವಕುಮಾರ್ ಅವರ ಸ್ಥಿರಾಸ್ತಿ ಒಟ್ಟು ಮೌಲ್ಯ 970 ಕೋಟಿ. ಪತ್ನಿ ಹೆಸರಲ್ಲಿ ₹113 ಕೋಟಿ, ಕುಟುಂಬದ ಆಸ್ತಿ ಮೌಲ್ಯ ₹54.33 ಕೋಟಿ.

ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಹಾಗೂ ಡೈಮೆಂಡ್ ಸೇರಿದಂತೆ ವಜ್ರಾಭರಣಗಳಿವೆ. ಡಿಕೆ ಶಿವಕುಮಾರ್ ಸೇರಿದಂತೆ ಕುಟುಂಬಸ್ಥರ 98 ಬ್ಯಾಂಕ್ ಖಾತೆಗಳಿವೆ. ಇನ್ನು ಚುನಾವಣೆಯಿಂದ ಚುನಾವಣೆಗೆ ಡಿಕೆ ಶಿವಕುಮಾರ್ ಆಸ್ತಿ ಮೌಲ್ಯ ಒನ್​ ಟು ಡಬಲ್, ತ್ರಿಬಲ್ ಆಗ್ತಾ ಹೋಗಿದೆ. 2013ರ ಚುನಾವಣೆ ವೇಳೆ 213 ಕೋಟಿಯಷ್ಟು ಇದ್ದ ಅವರ ಆಸ್ತಿ ಇದೆ ಎಂದು ಅಫಿಡವಿಟ್ ಸಲ್ಲಿಕೆ ಮಾಡಿದ್ದರು. 2018ರ ವಿಧಾನಸಭೆ ಚುನಾವಣೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ತಮಗಿರುವ ಆಸ್ತಿ, ಕುಟುಂಬದ ಆಸ್ತಿ, ಅದರ ಮೌಲ್ಯಗಳ ಲೆಕ್ಕಾಚಾರಗಳನ್ನು ನೀಡಿದ್ದರು. 2018ರ ಚುನಾವಣೆಯ ವೇಳೆ 840 ಕೋಟಿ ರೂ. ಬಾಳುತ್ತಿದ್ದ ಅವರ ಆಸ್ತಿ ಮೌಲ್ಯ 2023ರ ಚುನಾವಣೆ ವೇಳೆ 1414 ಕೋಟಿ ರೂಪಾಯಿ ಆಗಿದೆ. ಸಾವಿರ ಕೋಟಿಯ ಒಡೆಯನಾಗಿರುವ ಡಿಕೆ ಶಿವಕುಮಾರ್ ಮೇಲೆ ಸಾಲು ಸಾಲು ಕೇಸ್​ಗಳೂ ಕೂಡ ಇವೆ. ಆದಾಯ ತೆರಿಗೆ ಇಲಾಖೆಯಲ್ಲಿ ನಾಲ್ಕು ಪ್ರಕರಣ, ಲೋಕಾಯುಕ್ತ, ಜಾರಿ ನಿರ್ದೇಶನಾಲಯ, ಸಿಬಿಐ, ಕೊವಿಡ್ ನಿಯಮಾವಳಿ ಸಂಬಂಧ 6 ಪ್ರಕರಣ ಸೇರಿದಂತೆ ಒಟ್ಟು 19 ಪ್ರಕರಣಗಳು ಡಿಕೆ ಶಿವಕುಮಾರ್ ಮೇಲಿವೆ.  ಇದೀಗ 2024ರ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವಾಗಲೇ ಸಾಲುಸಾಲು ಸಂಕಷ್ಟಗಳು ಎದುರಾಗುತ್ತಿವೆ.

Shantha Kumari