ಚನ್ನಪಟ್ಟಣ ವಶಕ್ಕೆ ಡಿಕೆಶಿ ಚಕ್ರವ್ಯೂಹ – HDKಗೆ ಶಾಕ್.. ಡಿಕೆ ಸುರೇಶ್ ಗೆ ಲಕ್?
1 ಕಲ್ಲಿನಲ್ಲಿ 2 ಹಕ್ಕಿ ಹೊಡೆಯುತ್ತಾರಾ?
ಲೋಕಸಭಾ ಚುನಾವಣಾ ಸಮರ ಮುಗೀತಿದ್ದಂತೆ ಇದೀಗ ರಾಜ್ಯದಲ್ಲಿ ಮತ್ತೊಂದು ರೋಚಕ ರಾಜಕೀಯ ಜಿದ್ದಾಜಿದ್ದಿ ಶುರುವಾಗಿದೆ. ಅದ್ರಲ್ಲೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ ಬಳಿಕ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಅಖಾಡಕ್ಕೆ ಸಿದ್ಧಗೊಳ್ತಿದೆ. ಖುದ್ದು ಡಿಸಿಎಂ ಡಿ.ಕೆ ಶಿವಕುಮಾರ್ ಕ್ಷೇತ್ರವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಗೆಲ್ಲೋಕೆ ಚಕ್ರವ್ಯೂಹ ರೆಡಿ ಮಾಡ್ತಿದ್ದಾರೆ. ಇವತ್ತಂತೂ ಚನ್ನಪಟ್ಟಣ್ಣದಲ್ಲಿ ಸಾಲು ಸಾಲು ದೇಗುಲಗಳಿಗೆ ಭೇಟಿ ನೀಡಿ ಬೈ ಎಲೆಕ್ಷನ್ ಬ್ಯಾಟಲ್ಗೆ ರಣಕಹಳೆ ಮೊಳಗಿಸಿದ್ದಾರೆ. ಒಂದೇ ದಿನ 14 ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು. ಬಳಿಕ ಮಾತನಾಡಿದ ಡಿಕೆಶಿ, ಚನ್ನಪಟ್ಟಣ ನನ್ನ ಹೃದಯವಿದ್ದಂತೆ, ಚನ್ನಪಟ್ಟಣವನ್ನು ಪ್ರೀತಿಸ್ತೇನೆ. ಚನ್ನಪಟ್ಟಣ ರಾಜಕೀಯ ಜೀವನ ಕೊಟ್ಟ ಕ್ಷೇತ್ರ. ನಾಲ್ಕು ಬಾರಿ ಅಲ್ಲಿನ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಕಷ್ಟ ಕಾಲದಲ್ಲಿ ಚನ್ನಪಟ್ಟಣ ಜನ ಕೈ ಹಿಡಿದಿದ್ದಾರೆ. ಕನಕಪುರ ಕ್ಷೇತ್ರದಂತೆ ಚನ್ನಪಟ್ಟಣವನ್ನೂ ಅಭಿವೃದ್ಧಿ ಮಾಡುತ್ತೇನೆ ಎಂದಿದ್ದಾರೆ. ಅದೆಲ್ಲಕ್ಕಿಂತ್ಲೂ ಹೆಚ್ಚಾಗಿ ಖುದ್ದು ಡಿಸಿಎಂ ಡಿ.ಕೆ ಶಿವಕುಮಾರ್ ಅವ್ರೇ ಚನ್ನಪಟ್ಟಣ ಕ್ಷೇತ್ರದಿಂದ ಉಪಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಷ್ಟಕ್ಕೂ ಇಲ್ಲಿ ಚನ್ನಪಟ್ಟಣ ಕ್ಷೇತ್ರ ಕಾಂಗ್ರೆಸ್ ಮತ್ತು ಡಿಕೆ ಬ್ರದರ್ಸ್ ಪಾಲಿಗೆ ಇಷ್ಟೊಂದು ಪ್ರಾಮುಖ್ಯತೆ ಪಡೆದುಕೊಳ್ಳೋಕೆ ಕಾರಣವೂ ಇದೆ.
ಡಿಕೆಶಿಗೆ ಪ್ರತಿಷ್ಠೆಯ ಪ್ರಶ್ನೆ!
ಕನಕಪುರದಲ್ಲಿ ಅಧಿಪತ್ಯ ಸಾಧಿಸಿರುವ ಡಿಕೆ ಸಹೋದರರಿಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದಲೇ ನಿರೀಕ್ಷಿಸಿದ ಮತ ದೊರೆಯಲಿಲ್ಲ. ಜೊತೆಗೆ ಬದ್ಧ ವೈರಿಯಾಗಿರುವ ದೇವೇಗೌಡರ ಕುಟುಂಬದ ವಿರುದ್ಧ ಸೋಲು ಕಂಡರು. ಇದರಿಂದ ಕುದ್ದು ಹೋಗಿರುವ ಡಿಕೆ ಸಹೋದರರು, ಭದ್ರಕೋಟೆಯಲ್ಲಿಯೇ ಹೆಚ್ಡಿ ಕುಮಾರಸ್ವಾಮಿ ಅವ್ರಿಗೆ ಶಾಕ್ ಕೊಡಲು ಪಣ ತೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ.C.N ಮಂಜುನಾಥ್ ವಿರುದ್ಧ ಡಿ.ಕೆ. ಸುರೇಶ್ ಸೋಲು ಅನುಭವಿಸಿದ್ರು. ಇದ್ರಿಂದಾಗಿ ಕಾಂಗ್ರೆಸ್ಗೆ ಬಾರೀ ಮುಖಭಂಗವಾಗಿತ್ತು. ಅಲ್ದೇ ಬೈ ಎಲೆಕ್ಷನ್ಗೂ ಕೂಡ ಬಿಜೆಪಿ, ಜೆಡಿಎಸ್ ದೋಸ್ತಿ ಮುಂದುವರಿಯುತ್ತಿರುವುದರಿಂದ ಕಾಂಗ್ರೆಸ್ಗೆ ಸಂಕಷ್ಟ ಸಾಧ್ಯತೆ ಇದೆ. ಅಲ್ದೇ ಉಪಚುನಾವಣೆಯಲ್ಲೂ ಸೋಲು ಅನುಭವಿಸಿದ್ರೆ ಮತ್ತೊಮ್ಮೆ ಭಾರೀ ಮುಖಭಂಗವಾಗುತ್ತೆ. ಸಾತನೂರು-ಚನ್ನಪಟ್ಟಣದ ಕ್ಷೇತ್ರದ ಊರುಗಳು ಅರ್ಧ ಚನ್ನಪಟ್ಟಣಕ್ಕೆ, ಅರ್ಧ ಕನಕಪುರಕ್ಕೆ ಸೇರಿವೆ. ಸೋ ಡಿ.ಕೆ. ಶಿವಕುಮಾರ್ ಸ್ಪರ್ಧೆ ಮಾಡಿದರೆ ಇದರಿಂದ ಗೆಲುವಿಗೆ ಅನುಕೂಲ ಎಂಬ ಲೆಕ್ಕಾಚಾರ ಇದೆ. ತಾವೇ ಸ್ಪರ್ಧಿಸಿ ಗೆಲ್ಲೋ ಮೂಲಕ ಹೆಚ್.ಡಿ. ಕುಮಾರಸ್ವಾಮಿ, ಸಿಪಿವೈಗೆ ಶಾಕ್ ಕೊಡೋ ಚಿಂತನೆಯಲ್ಲಿದ್ದಾರೆ. ಡಿಕೆ ಶಿವಕುಮಾರ್ ಒಂದು ವೇಳೆ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರೇ ಕನಕಪುರ ವಿಧಾನಸಭಾ ಕ್ಷೇತ್ರ ತೆರವಾಗಲಿದೆ. ತಮ್ಮಿಂದ ತೆರವಾಗುವ ಕನಕಪುರ ವಿಧಾನಸಭಾ ಕ್ಷೇತ್ರವನ್ನು ಭವಿಷ್ಯದಲ್ಲಿ ತಮ್ಮ ಸಹೋದರ ಡಿಕೆ ಸುರೇಶ್ ಅವರಿಗೆ ಬಿಟ್ಟುಕೊಡುವ ಚಿಂತನೆ ಇದೆ. ಹೀಗಾಗಿ, ಡಿಕೆ ಸಹೋದರರು ಟೆಂಪಲ್ ರನ್ ಮೂಲಕ ಚನ್ನಪಟ್ಟಣದಲ್ಲಿ ಹವಾ ಹೇಗಿದೆ ಎಂದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇಲ್ಲಿ ಡಿಕೆಶಿ ಚನ್ನಪಟ್ಟಣದ ಮೇಲೆ ಒಲವು ತೋರಿಸೋಕೆ ಮತ್ತೊಂದು ಕಾರಣವೂ ಇದೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರದಿಂದ ಗೆಲುವು ಸಾಧಿಸಿದರೆ, ಸಿಎಂ ಆಗಬಹುದು ಎಂಬ ನಂಬಿಕೆ ಡಿಕೆ ಶಿವಕುಮಾರ್ ಅವರದ್ದು. ಈ ಕ್ಷೇತ್ರ ದೇವಮೂಲೆಯಲ್ಲಿರುವುದರಿಂದ ಇಲ್ಲಿನ ಗೆಲುವು ಅದೃಷ್ಟದ ಸಂಕೇತ ಎನ್ನುವ ನಂಬಿಕೆ ರಾಜಕೀಯ ವಲಯದಲ್ಲಿದೆ. ಅಲ್ಲದೆ ಚನ್ನಪಟ್ಟಣ ಮತ್ತು ರಾಮನಗರ ವಿಧಾನಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಹೆಚ್ಡಿ ಕುಮಾರಸ್ವಾಮಿ, ಹೆಚ್ಡಿ ದೇವೇಗೌಡ ಮತ್ತು ಕೆಂಗಲ್ ಹನುಮಂತಯ್ಯ ಹಿಂದೆ ರಾಜ್ಯದ ಮುಖ್ಯಮಂತ್ರಿಯಾದವರು. ಇದೇ ಲೆಕ್ಕಾಚಾರದಲ್ಲಿ ಡಿಕೆ ಶಿವಕುಮಾರ್ ಅವರು ಕೂಡ ಇದ್ದಾರೆ. ಇದೇ ಕಾರಣಕ್ಕೆ ಚನ್ನಪಟ್ಟಣದಲ್ಲಿ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.