ಸ್ವಲ್ಪ ಬಿಗಿಯಾಗಿರಿ ಎಂದು ಎಂ.ಬಿ ಪಾಟೀಲ್​ಗೆ ವಾರ್ನಿಂಗ್ – ಡಿ.ಕೆ ಸುರೇಶ್ ನಡೆಗೆ ಶಾಸಕರು, ಗನ್ ಮ್ಯಾನ್ ಗಳು ಗಾಬರಿ!
ವಿಧಾನಸೌಧದ ಬಳಿಯೇ ಕಾಂಗ್ರೆಸ್ ನಾಯಕರ ಫೈಟ್

ಸ್ವಲ್ಪ ಬಿಗಿಯಾಗಿರಿ ಎಂದು ಎಂ.ಬಿ ಪಾಟೀಲ್​ಗೆ ವಾರ್ನಿಂಗ್ – ಡಿ.ಕೆ ಸುರೇಶ್ ನಡೆಗೆ ಶಾಸಕರು, ಗನ್ ಮ್ಯಾನ್ ಗಳು ಗಾಬರಿ!ವಿಧಾನಸೌಧದ ಬಳಿಯೇ ಕಾಂಗ್ರೆಸ್ ನಾಯಕರ ಫೈಟ್

ರಾಜ್ಯ ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಹೊತ್ತಿದ್ದ ಬೆಂಕಿ ಈಗ ವೈಯಕ್ತಿಕ ತಿರುವು ಪಡೆದಿದೆ. ಡಿಕೆ ಬ್ರದರ್ಸ್ ಮತ್ತು ಎಂ.ಬಿ ಪಾಟೀಲ್ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಅದೂ ಕೂಡ ವಿಧಾನಸೌಧದ ಬಳಿಯೇ ಎಂಬಿಪಿಗೆ ಸಂಸದ ಡಿಕೆ ಸುರೇಶ್ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಕ್ಕರೂ ಕೂಡ ಸಿಎಂ ಕುರ್ಚಿ ವಿಚಾರಕ್ಕೆ ಎರಡು ಬಣಗಳಾಗಿ ಮಾರ್ಪಟ್ಟಿದೆ. ಐದು ವರ್ಷ ಸಿದ್ದರಾಮಯ್ಯರೇ ಸಿಎಂ ಆಗಿರುತ್ತಾರೆ. ಬದಲಾವಣೆ ಇಲ್ಲ ಎಂದು ವರಿಷ್ಠರೇ ತಿಳಿಸಿದ್ದಾರೆಂದು ಸಚಿವ ಎಂಬಿ ಪಾಟೀಲ್ ನೀಡಿದ್ದ ಹೇಳಿಕೆಗೆ ನಿನ್ನೆಯೇ ಡಿಕೆ ಬ್ರದರ್ಸ್ ಕೆರಳಿ ಕೆಂಡವಾಗಿದ್ರು. ಮಾಧ್ಯಮಗಳ ಮೂಲಕ ಎಂ.ಬಿ ಪಾಟೀಲ್​ಗೆ ಖಡಕ್ ಎಚ್ಚರಿಕೆ ನೀಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಡಿ.ಕೆ ಸುರೇಶ್ ಬುಧವಾರ ಎಂ.ಬಿ ಪಾಟೀಲ್​ಗೆ ಮತ್ತೆ ನೇರವಾಗಿ ವಾರ್ನಿಂಗ್ ಮಾಡಿದ್ದಾರಂತೆ. ವಿಧಾನಸೌಧದ ಸಮ್ಮೇಳನ ಸಭಾಂಗಣದ ಹೊರ ಬಾಗಿಲಿನಲ್ಲಿ ಈ ಘಟನೆ ನಡೆದಿದ್ದು, ಅಲ್ಲೇ ಇದ್ದ ಶಾಸಕರು, ಗನ್​ಮ್ಯಾನ್​, ಶಾಸಕರ ಆಪ್ತಕಾರ್ಯದರ್ಶಿಗಳು ಗಾಬರಿಯಾಗಿದ್ದಾರೆ.

ಇದನ್ನೂ ಓದಿ : ಮೋದಿಯಿಂದ ನೂತನ ಸಂಸತ್ ಭವನ ಉದ್ಘಾಟನೆಗೆ ವಿರೋಧ –  ರಾಷ್ಟ್ರಪತಿಯಿಂದ ಲೋಕಾರ್ಪಣೆಗೆ ವಿಪಕ್ಷಗಳ ಪಟ್ಟು

ವಿಧಾನಸೌಧದ ಸಮ್ಮೇಳನ ಸಭಾಂಗಣದ ಹೊರ ಬಾಗಿಲಿನಲ್ಲಿ ಸಂಸದ ಡಿ.ಕೆ ಸುರೇಶ್ ಹಾಗೂ ಎಂಬಿ ಪಾಟೀಲ್ ಮುಖಾಮುಖಿಯಾಗಿದ್ದು, ಈ ವೇಳೆ ಡಿಕೆ ಸುರೇಶ್​ ಅವರು ಎಂ.ಬಿ ಪಾಟೀಲ್​ರನ್ನ ಗುರಾಯಿಸಿಕೊಂಡು ಸ್ವಲ್ಪ ಬಿಗಿಯಾಗಿರಲಿ ಎಂದು ಬಹಿರಂಗವಾಗಿಯೇ ಎಲ್ಲರ ಮುಂದೆ ವಾರ್ನ್ ಮಾಡಿದ್ದಾರೆ. ಬಳಿಕ ಬನ್ನಿ ಚೇಂಬರ್​ಗೆ ಹೋಗೋಣ ಎಂದು ಎಂಬಿ ಪಾಟೀಲ್, ಡಿ.ಕೆ ಸುರೇಶ್ ಕೈ ಹಿಡಿದು ಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಆದ್ರೆ, ಸುರೇಶ್ ಮತ್ತೆ ಗುರಾಯಿಸಿದ್ದಾರೆ. ನಂತರ ಎಂಬಿ ಪಾಟೀಲ್ ಕೈಬಿಟ್ಟು ಆಮೇಲೆ ಮಾತನಾಡುವೆ ಎಂದು ಅಲ್ಲಿಂದ ಮೌನವಾಗಿ ತೆರಳಿದ್ದಾರೆ.

ಸಂಸದ ಡಿ.ಕೆ ಸುರೇಶ್ ವರ್ತನೆಗೆ ಕೆಲ ಶಾಸಕರು ಬೇಸರ ವ್ಯಕ್ತಪಡಿಸಿದ್ದು, ಏನ್ರಿ ಇದು ಈ ಥರ ರೌಡಿಸಂ. ರೌಡಿ ತರಹ ವಾರ್ನಿಂಗ್ ಕೊಡ್ತಾರಲ್ಲ ಎಂದು ಸುರೇಶ್​ ಮಾತಿಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಡಿಕೆ ಸುರೇಶ್ ವಾರ್ನಿಂಗ್​ಗೆ ಸ್ಥಳದಲ್ಲೇ ಇದ್ದ ಗನ್​ಮ್ಯಾನ್ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿಗಳು ಗಾಬರಿಯಾದ್ದಾರೆ. ಈ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ಬಣ ಕಾದಾಟ ಮತ್ತಷ್ಟು ತಾರಕಕ್ಕೇರುವ ಲಕ್ಷಣಗಳು ಕಂಡುಬರುತ್ತಿವೆ. ಒಂದು ರೀತಿ ಬೂದಿ ಮುಚ್ಚಿದ ಕೆಂಡದ ಮೇಲೆ ತುಪ್ಪ ಸುರಿದಂತೆ ಆಗಿದ್ದು, ಇದೀಗ ಎಂಬಿ ಪಾಟೀಲ್​​ಗೆ ಸಂಸದ ಡಿಕೆ ಸುರೇಶ್ ನಡುವಿನ ಕಾದಾಟ ಮುಂದೆ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

suddiyaana