ಸಾವಿರ ಕೋಟಿಯ ಸರದಾರ ಡಿ.ಕೆ ಶಿವಕುಮಾರ್ – ಕನಕಪುರ ಬಂಡೆ ಬಳಿ ಇರೋ ಆಸ್ತಿ ಎಷ್ಟು ಗೊತ್ತಾ?

ಸಾವಿರ ಕೋಟಿಯ ಸರದಾರ ಡಿ.ಕೆ ಶಿವಕುಮಾರ್ – ಕನಕಪುರ ಬಂಡೆ ಬಳಿ ಇರೋ ಆಸ್ತಿ ಎಷ್ಟು ಗೊತ್ತಾ?

ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೋಮವಾರವಷ್ಟೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಿನೇಷನ್ ವೇಳೆ ತಮ್ಮ ಬಳಿಯ ಆಸ್ತಿಯನ್ನ ಘೋಷಣೆ ಮಾಡಿದ್ದಾರೆ. ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಒಟ್ಟು ಆಸ್ತಿ ಮೌಲ್ಯ ಸಾವಿರ ಕೋಟಿ ದಾಟಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ (DK Shivakumar) ತನ್ನ ಬಳಿ ಒಟ್ಟು 1,214 ಕೋಟಿ ರೂ. ಮೌಲ್ಯದ ಆಸ್ತಿಯಿದೆ (Assets) ಎಂದು ಘೋಷಿಸಿಕೊಂಡಿದ್ದಾರೆ. 2018ರಲ್ಲಿ ಡಿಕೆಶಿ 840 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದರು. ಡಿಕೆಶಿ ಪತ್ನಿಯ ಸ್ಥಿರಾಸ್ತಿ ಹಾಗೂ ಚರಾಸ್ತಿ ಒಟ್ಟು ಮೌಲ್ಯ 153.30ಕೋಟಿ ರೂ. ಇದ್ದು ಇದರಲ್ಲಿ ಅವಿಭಜಿತ ಕುಟುಂಬದಿಂದ ಬಂದ 61 ಕೋಟಿ ರೂ. ಆಸ್ತಿ ಇದೆ. ಡಿಕೆಶಿ ಬಳಿ ಇರುವ ಚರಾಸ್ತಿ ಮೌಲ್ಯ 244 ಕೋಟಿ ರೂ., ಪತ್ನಿ ಹೆಸರಿನ ಚರಾಸ್ತಿ 20.30 ಕೋಟಿ ರೂ. ಹಾಗೂ ಅವಿಭಜಿತ ಕುಟುಂಬದ ಚರಾಸ್ತಿ 2.74 ಕೋಟಿ ರೂ. ಇದ್ದು ಮಗನ ಹೆಸರಲ್ಲಿ 1.29 ಲಕ್ಷ ರೂ. ಮಗಳ ಹೆಸರಲ್ಲಿ 12 ಲಕ್ಷ ರೂ. ಚರಾಸ್ತಿ ಇದೆ.

ಇದನ್ನೂ ಓದಿ : ಲಿಂಗಾಯುತ ಮತ ರಕ್ಷಣೆಗೆ ಬಿಜೆಪಿ ಸರ್ಕಸ್ – ಶೆಟ್ಟರ್ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ 2 ದಿನ ನಡ್ಡಾ ವಾಸ್ತವ್ಯ!

ಡಿಕೆಶಿ ಸ್ಥಿರಾಸ್ತಿ ಒಟ್ಟು ಮೌಲ್ಯ 970 ಕೋಟಿ ರೂ. ಆಗಿದ್ದು ಪತ್ನಿ ಹೆಸರಿನಲ್ಲಿ 113 ಕೋಟಿ ರೂ. ಸ್ಥಿರಾಸ್ತಿ, ಅವಿಭಜಿತ ಕುಟುಂಬದ ಒಟ್ಟು 54.33 ಕೋಟಿ ಸ್ಥಿರಾಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಜೊತೆಗೆ ಕೃಷಿ, ಬಾಡಿಗೆ ಮತ್ತು ವಿವಿಧ ಕಂಪನಿಗಳಲ್ಲಿ ಶೇರು, ಉದ್ದಿಮೆ ಗಳ ಮೂಲಕ ತಮ್ಮ ಆದಾಯದ ಮೂಲ ತೋರಿಸಿದ್ದಾರೆ. ತನ್ನ ಬಳಿ 2.184 ಕೆ.ಜಿ ಚಿನ್ನ, 12 ಕೆಜಿ ಬೆಳ್ಳಿ, 2.26 ಕೋಟಿ ರೂ. ಮೌಲ್ಯದ ವಜ್ರ ಮತ್ತು ಮಾಣಿಕ್ಯದ ಆಭರಣ, 9 ಲಕ್ಷ ರೂ. ಮೌಲ್ಯದ ರೊಲೆಕ್ಸ್ ವಾಚ್, 23 ಲಕ್ಷ ರೂ. ಮೌಲ್ಯದ ಹ್ಯೂಬ್ಲೋಟ್‌ ವಾಚ್‌ ಇದೆ ಎಂದು ತಿಳಿಸಿದ್ದಾರೆ.

ಡಿ.ಕೆ ಶಿವಕುಮಾರ್ ಪತ್ನಿ ಹೆಸರಿನಲ್ಲಿ 2ಕೆಜಿ 600 ಗ್ರಾಂ ಚಿನ್ನ, 20 ಕೆ.ಜಿ ಬೆಳ್ಳಿ, ಕುಟುಂಬದ ಆಸ್ತಿ 1 ಕೆ.ಜಿ ಚಿನ್ನ, 10 ಕೆ.ಜಿ ಬೆಳ್ಳಿ, ಮಗನ ಹೆಸರಿನಲ್ಲಿ 675 ಗ್ರಾಂ ಚಿನ್ನ, ಮಗಳ ಹೆಸರಿನಲ್ಲಿ 675 ಗ್ರಾಂ ಚಿನ್ನ ಹಾಗೂ ಅವಿಭಜಿತ ಕುಟುಂಬದಿಂದ 1.ಕೆಜಿ ಚಿನ್ನ, 10 ಕೆಜಿ ಬೆಳ್ಳಿ ಹೊಂದಿದ್ದಾರೆ. ಒಟ್ಟು 226 ಕೋಟಿ ರೂ. ಸಾಲ ಇದ್ದು, ಪತ್ನಿ ಹೆಸರಲ್ಲಿ 34.53 ಕೋಟಿ ರೂ. ಮಗನ ಹೆಸರಲ್ಲಿ 3.81 ಕೋಟಿ ರೂ. ಹಾಗೂ ಮಗಳ ಹೆಸರಿನಲ್ಲಿ 8.25 ಕೋಟಿ ರೂ. ಸಾಲ ಇದೆ ಎಂದು ತೋರಿಸಿದ್ದಾರೆ. ಹಾಗೇ 4 ಆದಾಯ ತೆರಿಗೆ, 1 ಲೋಕಾಯುಕ್ತ, 2 ಜಾರಿ ನಿರ್ದೇಶನಾಲಯ, ಕೋವಿಡ್ ನಿಯಮಾವಳಿ ಸಂಬಂಧ 6 ಪ್ರಕರಣ ಸೇರಿದಂತೆ ಡಿಕೆಶಿ ವಿರುದ್ಧ ಒಟ್ಟು 19 ಪ್ರಕರಣಗಳಿವೆ. ಡಿಕೆಶಿ ಒಟ್ಟು 14.24 ಕೋಟಿ ರೂ ವಾರ್ಷಿಕ ಆದಾಯ ಹೊಂದಿದ್ದರೆ ಇವರ ಪತ್ನಿ 1.90 ಕೋಟಿ ರೂ. ವಾರ್ಷಿಕ ಆದಾಯ ಹೊಂದಿದ್ದಾರೆ.

suddiyaana