ಸಿಎಂ ಕಚೇರಿಯಂತೆಯೇ ಇರುವ ಡಿಸಿಎಂ ಕಚೇರಿ ಹುಡುಕಲು ಸಿಬ್ಬಂದಿಗೆ ಸೂಚಿಸಿದ ಡಿ.ಕೆ ಶಿವಕುಮಾರ್

ಸಿಎಂ ಕಚೇರಿಯಂತೆಯೇ ಇರುವ ಡಿಸಿಎಂ ಕಚೇರಿ ಹುಡುಕಲು ಸಿಬ್ಬಂದಿಗೆ ಸೂಚಿಸಿದ ಡಿ.ಕೆ ಶಿವಕುಮಾರ್

ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವಿನ ಕುರ್ಚಿ ಕದನ ಎಲ್ಲರಿಗೂ ಗೊತ್ತಿರುವ ವಿಚಾರವೇ. ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಕ್ಕರೂ ಕೂಡ ಸಿಎಂ ಸೀಟ್ ಗಾಗಿ ಇಬ್ಬರ ನಡುವೆ ಬಾರೀ ಪೈಪೋಟಿ ನಡೆದಿತ್ತು. ಕೊನೆಗೆ ಹೈಕಮಾಂಡ್ ನಿರ್ಧಾರದ ಮೇರೆಗೆ ಸಿದ್ದರಾಮಯ್ಯ ಸಿಎಂ ಕುರ್ಚಿಗೇರಿದ್ರೆ ಡಿಕೆಶಿ ಡಿಸಿಎಂ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ರು. ಆದರೆ ಡಿಕೆಶಿ ಮಾತ್ರ ತಮ್ಮ ಅಸಮಾಧಾನವನ್ನ ಒಂದಿಲ್ಲೊಂದು ರೀತಿಯಲ್ಲಿ ಹೊರ ಹಾಕುತ್ತಲೇ ಇದ್ದಾರೆ.

ಇದನ್ನೂ ಓದಿ : ತವರು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದು ಬಂಪರ್ ಗಿಫ್ಟ್ – ಮೈಸೂರಿನ ಚಾಮುಂಡಿ ಬೆಟ್ಟ ಅಭಿವೃದ್ಧಿಗೆ ಪ್ರಾಧಿಕಾರ ರಚನೆ

ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೆ ತಾವು ಸೂಕ್ತ ಎಂದು ಸಮರ್ಥಿಸಿಕೊಳ್ಳಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿರುವುದು ಬಹಿರಂಗಗೊಂಡಿದೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳಿಗೆ ಮಾತ್ರ ಸಿಗುವ ಕೆಲವು ಸವಲತ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ವಿಧಾನಸೌಧದ ಮೊದಲ ಮಹಡಿಯಲ್ಲಿ ಅಧಿವೇಶನ ಸಭಾಂಗಣದ ಬಳಿ ಮುಖ್ಯಮಂತ್ರಿ ಕಚೇರಿಯಂತೆಯೇ ಇರುವ ಡಿಸಿಎಂ ಕಚೇರಿ ಕೊಠಡಿಯನ್ನು ಗುರುತಿಸುವಂತೆ ಶಿವಕುಮಾರ್ ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸೌಧದ ಪಶ್ಚಿಮ ದ್ವಾರದಿಂದ ಪ್ರವೇಶಿಸಿದರೆ ಬಲಭಾಗದಲ್ಲಿ ಕೊಠಡಿ ಇದೆ. ಅಧಿವೇಶನ ನಡೆಯುತ್ತಿರುವಾಗ ಈ ಕೊಠಡಿಯನ್ನು ಮುಖ್ಯಮಂತ್ರಿ ಬಳಸುತ್ತಾರೆ. ಸದ್ಯ ಡಿಕೆಶಿ ತಮ್ಮ ಸಿಬ್ಬಂದಿ ಬಳಿ ಕಚೇರಿ ಕೊಠಡಿ ಗುರುತಿಸಿ, ಮಂಜೂರು ಮಾಡಿಸುವಂತೆ ಸೂಚಿಸಿದ್ದಾರೆ.

ಈ ಹಿಂದೆ ಯಾವ ಉಪಮುಖ್ಯಮಂತ್ರಿಗಳಿಗೂ ಮೊದಲ ಮಹಡಿಯಲ್ಲಿ ಪ್ರತ್ಯೇಕ ಕೊಠಡಿ ಇರಲಿಲ್ಲ. ವರದಿಗಳ ಪ್ರಕಾರ, ಶಿವಕುಮಾರ್ ಅವರ ಸಿಬ್ಬಂದಿ ಒಂದು ಕೊಠಡಿಯನ್ನು ಖಾಲಿ ಮಾಡಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದ ಸಂದರ್ಭದಲ್ಲೇ ಅದನ್ನು ಉಪ ಮುಖ್ಯಮಂತ್ರಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

suddiyaana